ನ್ಯೂಸ್

ಇಸ್ರೇಲ್-ಹಮಾಸ್ ಸಂಘರ್ಷ: ಟ್ರಂಪ್​ರ ಗಾಜಾ ಶಾಂತಿ ಒಪ್ಪಂದ ಒಪ್ಪಿಕೊಂಡ ಹಮಾಸ್; ಇಸ್ರೇಲ್​ಗೆ ಬಾಂಬ್ ದಾಳಿ ನಿಲ್ಲಿಸಲು ಆದೇಶಿಸಿದ ಟ್ರಂಪ್| Hamas

Hamas: ಸುಮಾರು ಎರಡು ವರ್ಷಗಳ ಇಸ್ರೇಲ್-ಹಮಾಸ್ ಯುದ್ಧವನ್ನು ಕೊನೆಗೊಳಿಸುವ ಕೊನೆ ಹಂತ ತಲುಪಿದ್ದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಅವರ 20 ಅಂಶಗಳ ಗಾಜಾ ಶಾಂತಿ ಒಪ್ಪಂದವನ್ನು ಇಸ್ರೇಲ್ ಒಪ್ಪಿಕೊಂಡ ಬಳಿಕ ಹಮಾಸ್ ಉಗ್ರ ಸಂಘಟನೆ ಕೂಡ ಭಾಗಶಃ ಒಪ್ಪಿಕೊಂಡಿದ್ದಾಗಿ ಹೇಳಿದೆ. ಈ ಹಿನ್ನೆಲೆ ತಕ್ಷಣ ಗಾಜಾ ಮೇಲಿನ ಬಾಂಬ್ ದಾಳಿ ನಿಲ್ಲಿಸುವಂತೆ ಇಸ್ರೇಲ್​ಗೆ ಶುಕ್ರವಾರ(ಅ. 03) ಟ್ರಂಪ್ ಆದೇಶಿಸಿದ್ದಾರೆ.

ಟ್ರಂಪ್​ ಅವರ 20 ಅಂಶಗಳ ಶಾಂತಿ ಒಪ್ಪಂದದ ಬಗ್ಗೆ ಶುಕ್ರವಾರ ಪ್ರತಿಕ್ರಿಯೆ ನೀಡಿರುವ ಹಮಾಸ್, ಮೊದಲನೆಯಾದಗಿ ಹಮಾಸ್ ಉಗ್ರ ಸಂಘಟನೆಯ ಹಿಡಿತದಲ್ಲಿರುವ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಒಪ್ಪಿಕೊಂಡಿದ್ದು, ಹಾಗೆಯೇ ಅಧಿಕಾರವನ್ನು ಪ್ಯಾಲೆಸ್ಟೈನ್​ಗೆ ಹಸ್ತಾಂತರಿಸಲು ಸಿದ್ಧವಾಗಿದೆ. ಆದರೆ ಕೆಲವು ಮಾತುಕತೆಗಳು ನಡೆಯಬೇಕು ಎಂದು ಹೇಳಿದೆ.

ಗಾಜಾ ಪಟ್ಟಿಯ ಭವಿಷ್ಯ ಮತ್ತು ಸ್ವತಂತ್ರ ಪ್ಯಾಲೆಸ್ಟ್ರೈನ್ ರಾಷ್ಟ್ರವನ್ನು ಸರ್ವಾನುಮತದ ನಿಲುವಿನಿಂದ ಅಂತಾರಾಷ್ಟ್ರೀಯ ಕಾನೂನು ಆಧಾರದ ಮೇಲೆ ನಿರ್ಧರಿಸಬೇಕು ಎಂದು ಹಮಾಸ್ ಹೇಳಿದೆ. ಆದರೆ ಇಸ್ರೇಲ್​ನ ಪ್ರಮುಖ ಬೇಡಿಕೆಯಾದ ಹಮಾಸ್​ ನಿಶಸ್ತ್ರೀಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಹಮಾಸ್ ಹೇಳಿಕೆಯನ್ನು ಸ್ವಾಗತಿಸಿ ತಮ್ಮ ಟ್ರೂತ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಡೊನಾಲ್ಡ್ ಟ್ರಂಪ್, ಅವರು ಶಾಶ್ವತ ಶಾಂತಿಗೆ ಸಿದ್ದರಾಗಿದ್ದಾರೆಂದು ನಾನು ನಂಬುತ್ತೇನೆ. ಇಸ್ರೇಲ್ ಗಾಜಾದ ಮೇಲೆ ನಡೆಸುತ್ತಿರುವ ಬಾಂಬ್ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು. ಇದರಿಂದ ನಾವು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಹೊರತರಬಹುದು. ಇದೀಗ, ಹಾಗೆ ಮಾಡುವುದು ತುಂಬಾ ಅಪಾಯಕಾರಿ. ನಾವು ಈಗಾಗಲೇ ವಿವರಗಳ ಕುರಿತು ಚರ್ಚೆಯಲ್ಲಿದ್ದೇವೆ. ಇದು ಗಾಜಾ ಬಗ್ಗೆ ಮಾತ್ರವಲ್ಲ, ಮಧ್ಯಪ್ರಾಚ್ಯದಲ್ಲಿ ಬಹುಕಾಲದಿಂದ ಬಯಸುತ್ತಿರುವ ಶಾಂತಿಯ ಬಗ್ಗೆ ಎಂದು ಬರೆದಿದ್ದಾರೆ.

ಇನ್ನೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿಯೂ ಸಹ ಪ್ರತಿಕ್ರಿಯಿಸಿದ್ದು, ಟ್ರಂಪ್ ಅವರ ಯೋಜನೆಯ ಮೊದಲ ಹಂತದ ಅನುಷ್ಠಾನಕ್ಕೆ ಸಿದ್ದವಾಗಿದೆ. ಇಸ್ರೇಲ್ ಈ ಹಿಂದೆ ನಿಗದಿಪಡಿಸಿದ ತತ್ವಗಳ ಆಧಾರದ ಮೇಲೆ ಯುದ್ಧ ಕೊನೆಗಾಣಿಸಲು ಇಸ್ರೇಲ್ ಬದ್ಧವಾಗಿದೆ ಎಂದು ಹೇಳಿದೆ. (ಏಜೆನ್ಸೀಸ್)