ನ್ಯೂಸ್

ಇಸ್ರೇಲ್-ಹಮಾಸ್ ಕದನ ವಿರಾಮ: ನೀವು ಶಾಂತಿಯುತವಾಗಿ ಒಪ್ಪಿದರೆ ಸರಿ, ಇಲ್ಲದಿದ್ದರೆ ಮತ್ತೆ ದಾಳಿ ಮಾಡುತ್ತೇವೆ ಎಂದ ಬೆಂಜಮಿನ್ ನೆತನ್ಯಾಹು |Benjamin Netanyahu

Benjamin Netanyahu: ಹಮಾಸ್‌ ಅಮೆರಿಕ ಮಧ್ಯಸ್ಥಿಕೆಯ ಶಾಂತಿ ಒಪ್ಪಂದವನ್ನು ತಿರಸ್ಕರಿಸಿದರೆ, ಇಸ್ರೇಲ್ ಹಮಾಸ್​ನ್ನು ಸಂಪೂರ್ಣವಾಗಿ ಸೋಲಿಸುವವರೆಗೆ ಬಿಡುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಸಿದ್ದಾರೆ.

ಈ ಬಗ್ಗೆ ಟ್ರಂಪ್​ರೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ, ನಾವು ಎಲ್ಲರಿಗೂ ಕದನ ವಿರಾಮವನ್ನು ಶಾಂತಿಯುತವಾಗಿ ಮಾಡಲು ಅವಕಾಶ ನೀಡುತ್ತಿದ್ದೇವೆ. ಆದರೆ, ಹಮಾಸ್ ಈ ಯೋಜನೆಯನ್ನು ತಿರಸ್ಕರಿಸಿದರೆ ಅಥವಾ ನಿಯಮಗಳನ್ನು ಬದಲಾಯಿಸಲು ಪ್ರಯತ್ನಿಸಿದರೆ, ಇಸ್ರೇಲ್ ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ. ಇದು ಸುಲಭವಾಗಲಿ ಅಥವಾ ಕಷ್ಟಕರವಾಗಲಿ, ಅದು ಖಂಡಿತವಾಗಿಯೂ ಸಂಭವಿಸುತ್ತದೆ ಎಂದು ಹಮಾಸ್​ ವಿರುದ್ಧ ಅಮೆರಿಕದಲ್ಲಿ ಟೀಕಾಪ್ರಹಾರ ನಡೆಸಿದ್ದಾರೆ.

ಪ್ಯಾಲೆಸ್ಟೀನಿಯನ್ ಉಪಾಧ್ಯಕ್ಷರಿಗೆ ಸ್ವಾಗತ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಯೋಜನೆಯನ್ನು ಪ್ಯಾಲೆಸ್ಟೀನಿಯನ್ ಉಪಾಧ್ಯಕ್ಷರು ಸಹ ಸ್ವಾಗತಿಸಿದ್ದಾರೆ. ಈ ಯೋಜನೆಯ ತಮ್ಮ ಆವೃತ್ತಿಯನ್ನು ನೀಡುತ್ತಾ, ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷವನ್ನು ಕೊನೆಗೊಳಿಸಲು ಇದು ಸ್ವಾಗತಾರ್ಹ ಹೆಜ್ಜೆಯಾಗಿದೆ. ಈ ಹಿಂದೆ, ಪ್ಯಾಲೆಸ್ಟೀನಿಯನ್ ಸರ್ಕಾರ ಈ ಯೋಜನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿತ್ತು ಎಂದು ಹೇಳಿದ್ದಾರೆ.

ಟ್ರಂಪ್ ಶಾಂತಿಗೆ ಇಸ್ರೇಲ್ ಹಸ್ತು

ಟ್ರಂಪ್ ಶಾಂತಿ ಒಪ್ಪಂದವು ಒಂದು ಪ್ರಮುಖ ಹೆಜ್ಜೆ ಎಂದು ನೆತನ್ಯಾಹು ತಿಳಿಸಿದ್ದಾರೆ. ಅಲ್ಲದೆ, ಇದು ಗಾಜಾ ಸಂಘರ್ಷವನ್ನು ಕೊನೆಗೊಳಿಸಲು ಸಹಾಯ ಮಾಡುತ್ತದೆ. ಈ ಯೋಜನೆಯು ಏನನ್ನು ಒಳಗೊಂಡಿರುತ್ತದೆ ಎಂಬುದನ್ನು ನೆತನ್ಯಾಹು ವಿವರಿಸಿದ್ದಾರೆ.

ಗಾಜಾದಲ್ಲಿರುವ ಇಸ್ರೇಲ್​ನ ಎಲ್ಲಾ ಒತ್ತೆಯಾಳುಗಳನ್ನು ಹಿಂತಿರುಗಿಸಲಾಗುವುದು. ಹಮಾಸ್‌ನ ಮಿಲಿಟರಿ ಶಕ್ತಿ ನಾಶ ಮಾಡುವುದು. ಅಲ್ಲದೆ, ಗಾಜಾದಲ್ಲಿ ಹಮಾಸ್​ ರಾಜಕೀಯ ಪ್ರಭಾವ ಕೊನೆಗೊಳ್ಳುತ್ತದೆ. ಇದರಿಂದ ಗಾಜಾ ಎಂದಿಗೂ ಇಸ್ರೇಲ್‌ಗೆ ಬೆದರಿಕೆಯಾಗುವುದಿಲ್ಲ ಎಂದು ಇಸ್ರೇಲ್​ ಪ್ರಧಾನಿ ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ನೆತನ್ಯಾಹು, ಇರಾನ್ ವಿರುದ್ಧದ ನಾವು ನಡೆಸಿದ ಆಪರೇಷನ್ ರೈಸಿಂಗ್ ಲೈನ್ ಮತ್ತು ಆಪರೇಷನ್ ಮಿಡ್‌ನೈಟ್ ಹ್ಯಾಮರ್‌ನಲ್ಲಿ, ನಾವು ಇರಾನ್‌ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳಿಗೆ ತೀವ್ರ ಹೊಡೆತ ನೀಡಿದ್ದೇವೆ. ಅಧ್ಯಕ್ಷ ಟ್ರಂಪ್ ದಿಟ್ಟ ನಿರ್ಧಾರಗಳು ಜಗತ್ತನ್ನು ಸುರಕ್ಷಿತಗೊಳಿಸಿವೆ ಎಂದು ತಿಳಿಸಿದ್ದಾರೆ.

ಈಗ ಗಾಜಾದ ಭವಿಷ್ಯ ಹೇಗಿರುತ್ತೆ..?

ಈ ಶಾಂತಿ ಒಪ್ಪಂದ ಜಾರಿಗೆ ಬಂದರೆ ಗಾಜಾವನ್ನು ಹೇಗೆ ನಿಯಂತ್ರಿಸಲಾಗುತ್ತದೆ ಎಂದು ನೆತನ್ಯಾಹು ವಿವರಿಸಿದ್ದಾರೆ. ಹಮಾಸ್‌ನಿಂದ ಶಸ್ತ್ರಾಸ್ತ್ರ ಮತ್ತು ಸೈನ್ಯವನ್ನು ತೆಗೆದುಹಾಕಲಾಗುತ್ತದೆ. ಗಾಜಾದಲ್ಲಿ ಶಾಂತಿಯುತ ನಾಗರಿಕ ಆಡಳಿತವನ್ನು ಸ್ಥಾಪಿಸಲಾಗುತ್ತದೆ. ಇದನ್ನೂ ಹಮಾಸ್ ಅಥವಾ ಪ್ಯಾಲೆಸ್ಟೀನಿಯನ್ ಪ್ರಾಧಿಕಾರವು ನಿಯಂತ್ರಿಸುವುದಿಲ್ಲ ಎಂದಿದ್ದಾರೆ.

ಹಮಾಸ್ ಈ ಯೋಜನೆಯನ್ನು ಒಪ್ಪಿಕೊಂಡರೆ, ಎಲ್ಲಾ ಒತ್ತೆಯಾಳುಗಳನ್ನು 72 ಗಂಟೆಗಳ ಒಳಗೆ ಬಿಡುಗಡೆ ಮಾಡಲಾಗುತ್ತದೆ. ನಂತರ, ಹಮಾಸ್ ಅನ್ನು ಸಂಪೂರ್ಣವಾಗಿ ನಿಶ್ಯಸ್ತ್ರಗೊಳಿಸಲು ಮತ್ತು ಗಾಜಾವನ್ನು ಸೇನಾ ಮುಕ್ತಗೊಳಿಸಲು ಅಂತರರಾಷ್ಟ್ರೀಯ ಸಂಘಟನೆಯನ್ನು ಸ್ಥಾಪಿಸಲಾಗುವುದು ಎಂದು ಇಸ್ರೇಲ್​ ಪ್ರಧಾನಿ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)