ನ್ಯೂಸ್

ಡಿ.ಜೆ. ಹಳ್ಳಿ, ಕೆ.ಜಿ.ಹಳ್ಳಿ ಗಲಭೆಗೆ ಐಸಿಸ್ ಲಿಂಕ್? ಶಂಕಿತ ಉಗ್ರರ ಜತೆ ನಂಟು ಹೊಂದಿದ್ದ ಆರೋಪಿ ಸಿಸಿಬಿ ಬಲೆಗೆ

rameshmysuru

ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣದ ತನಿಖೆಗೆ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಗಲಭೆಗೆ ಸ್ಥಳೀಯ ರಾಜಕೀಯ ವೈಷಮ್ಯ ಕಾರಣವೆಂಬ ಅನುಮಾನ ವ್ಯಕ್ತವಾದ ಬೆನ್ನಲ್ಲೇ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಕೈವಾಡವಿರುವ ಬಗ್ಗೆ ಪ್ರಾಥಮಿಕ ಸಾಕ್ಷ್ಯಗಳು ಲಭಿಸಿರುವುದು ಆತಂಕ ಮೂಡಿಸಿದೆ.

ಆ.11ರ ಗಲಭೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಎನ್ನಲಾದ ಸಮಿಯುದ್ದೀನ್ ಎಂಬಾತನನ್ನು ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. 2016ರಲ್ಲಿ ನಡೆದಿದ್ದ ಆರ್​ಎಸ್​ಎಸ್ ಕಾರ್ಯಕರ್ತ ಆರ್.ರುದ್ರೇಶ್ ಹತ್ಯೆ ಕೇಸಲ್ಲಿ ಬಂಧಿತರಾಗಿದ್ದವರ ಜತೆ ಹಾಗೂ ಆಲ್ ಹಿಂದ್ ಉಗ್ರ ಸಂಘಟನೆ ಸದಸ್ಯರ ಜತೆ ಸಮಿಯುದ್ದೀನ್ ಸಂಪರ್ಕ ಹೊಂದಿರುವುದು ಗಲಭೆಗೆ ಐಸಿಸ್ ಲಿಂಕ್ ಇರುವ ಅನುಮಾನವನ್ನು ಪುಷ್ಟೀಕರಿಸುತ್ತಿದೆ.

ತೀವ್ರ ವಿಚಾರಣೆ: ರುದ್ರೇಶ್ ಕೊಲೆ ಪ್ರಕರಣ ಹಾಗೂ ಉಗ್ರ ಸಂಘಟನೆ ಜತೆ ಕೈಜೋಡಿಸಿರುವ ಅನುಮಾನದ ಮೇಲೆ ಈ ಹಿಂದೆ ಸಮಿಯುದ್ದೀನ್​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ, ಆರೋಪ ಸಾಬೀತುಪಡಿಸುವಂಥ ಯಾವುದೇ ಸಾಕ್ಷ್ಯಾಧಾರ ಸಿಗದ ಹಿನ್ನೆಲೆಯಲ್ಲಿ ಬಿಟ್ಟು ಕಳುಹಿಸಿದ್ದರು.

ಈಗ ಕೆಜಿ ಹಳ್ಳಿ ಗಲಭೆಯಲ್ಲಿ ಸಹ ಪಾತ್ರವಿರುವುದು ಕಂಡು ಬಂದಿರುವ ಕಾರಣಕ್ಕೆ ತನಿಖೆ ಮುಂದುವರೆಸಿದ ಉಗ್ರ ನಿಗ್ರಹ ಪಡೆ (ಎಟಿಎಸ್) ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ ಸಮಿಯುದ್ದೀನ್​ನನ್ನು ಕಸ್ಟಡಿಗೆ ಪಡೆದು ಗೌಪ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದೆ.

ಐಸಿಸ್ ಲಿಂಕ್ ಹೇಗೆ?:  ದಕ್ಷಿಣ ಭಾರತದಲ್ಲಿ ಐಸಿಸ್ ಉಗ್ರ ಸಂಘಟನೆ ಬಲಗೊಳಿಸುವ ಪ್ರಕರಣದಲ್ಲಿ ಬಂಧಿತ ತಮಿಳುನಾಡು ಮೂಲದ ಖ್ವಾಜಾ ಮೊಯಿದ್ದೀನ್, ‘ಅಲ್-ಹಿಂದ್ ಟ್ರಸ್ಟ್’ ಸ್ಥಾಪಿಸಿದ್ದ. ಹಿಂದು ಮುಖಂಡರ ಹತ್ಯೆ ಮತ್ತು ಐಸಿಸ್ ಬಲಪಡಿಸುವಂತೆ ಸದಸ್ಯರಿಗೆ ಟಾರ್ಗೆಟ್ ಕೊಟ್ಟಿದ್ದ. 2019ರ ಡಿಸೆಂಬರ್​ನಲ್ಲಿ ತಮಿಳುನಾಡಿನ ‘ಹಿಂದು ಮಕ್ಕಳ ಕಚ್ಚಿ’ ಸಂಘಟನೆಯ ಕೆ.ಸಿ. ಸುರೇಶ್ ಕೊಲೆ ಮಾಡಲಾಗಿತ್ತು. ಬೆಂಗಳೂರಿನ ಸುದ್ದುಗುಂಟೆಪಾಳ್ಯದ ಮೆಹಬೂಬ್ ಪಾಷನ ನೇತೃತ್ವದಲ್ಲಿ ನಗರದಲ್ಲಿಯೂ ಅಲ್-ಹಿಂದ್ ಟ್ರಸ್ಟ್ ಕಚೇರಿ ತೆರೆದು ಸದಸ್ಯರನ್ನು ನೇಮಕ ಮಾಡುತ್ತಿದ್ದರು. 2019ರಲ್ಲಿ ಗುರುಪ್ಪನಪಾಳ್ಯದಲ್ಲಿರುವ ಮೆಹಬೂಬ್ ಪಾಷಾ ಮನೆಯಲ್ಲಿ ಉಗ್ರ ಚಟುವಟಿಕೆಗಳ ಕುರಿತು ಸಭೆ ನಡೆಸಿದ್ದರು. ಈತ ಆನ್​ಲೈನ್​ನಲ್ಲಿ ವಿದೇಶಿ ಉಗ್ರ ಸಂಘಟನೆ ಮುಖ್ಯಸ್ಥರನ್ನು ಸಂಪರ್ಕ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ತಮಿಳುನಾಡು, ದೆಹಲಿ, ಎನ್​ಐಎ ಮತ್ತು ಸಿಸಿಬಿ ಪೊಲೀಸರು ತಮಿಳುನಾಡ, ಕರ್ನಾಟಕ, ದೆಹಲಿ ಸೇರಿ ದೇಶವ್ಯಾಪಿ ಕಾರ್ಯಾಚರಣೆ ನಡೆಸಿ 17 ಶಂಕಿತ ಉಗ್ರರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಬೆಂಗಳೂರು ಹೊರವಲಯ ಹಾಗೂ ಚಾಮರಾಜನಗರದ ಗುಂಡ್ಲುಪೇಟೆ ಮತ್ತು ಶಿವನಸಮುದ್ರದ ಬಳಿಯ ಅರಣ್ಯ ಪ್ರದೇಶದಲ್ಲಿ ಶಸ್ತ್ರಾಸ್ತ್ರ ತರಬೇತಿ ನಡೆಸಿರುವುದು ಬೆಳಕಿಗೆ ಬಂದಿತ್ತು. ಇತ್ತೀಚೆಗೆ ಎನ್​ಐಎ ಮೆಹಬೂಬ್ ಪಾಷ ಸೇರಿದಂತೆ 17 ಮಂದಿ ವಿರುದ್ಧ ಎನ್​ಐಎ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಈ ಎಲ್ಲ ಅಂಶವನ್ನು ಉಲ್ಲೇಖಿಸಿತ್ತು. ಇದೀಗ ಗಲಭೆ ಪ್ರಕರಣದಲ್ಲಿ ಬಂಧಿತ ಸಮಿಯುದ್ದೀನ್ ಸಹ ಅಲ್ ಹಿಂದ್ ಟ್ರಸ್ಟ್ ಜತೆ ನಿಕಟ ಸಂಪರ್ಕ ಇರುವುದು ಬೆಳಕಿಗೆ ಬಂದಿದ್ದು, ವಿದೇಶಿ ಉಗ್ರರ ದೇಣಿಗೆ ಕುಮ್ಮಕ್ಕಿನಿಂದ ಗಲಭೆ ನಡೆಸಿದರಾ ಎಂಬ ಶಂಕೆ ವ್ಯಕ್ತವಾಗಿದೆ.

ಇಲ್ಲಿಯೂ ಇದೇ ಎಸ್​ಡಿಪಿಐ: 2016ರ ಅ.16ರಂದು ನಡೆದ ಆರ್​ಎಸ್​ಎಸ್ ಕಾರ್ಯಕರ್ತ ಆರ್. ರುದ್ರೇಶ್ ಕೊಲೆ ಪ್ರಕರಣದಲ್ಲಿಯೂ ಎಸ್​ಡಿಪಿಐ, ಪಿಎಫ್​ಐ ಮುಖಂಡರು ಬಂಧನಕ್ಕೆ ಒಳಗಾಗಿದ್ದಾರೆ. ಇವರೊಂದಿಗೆ ಸಮಿಯುದ್ದೀನ್ ಸಂಪರ್ಕ ಹೊಂದಿದ್ದ. ಎನ್​ಐಎ ಮತ್ತು ಸ್ಥಳೀಯ ಪೊಲೀಸರು, ಅಂದು ತನಿಖೆ ವೇಳೆ ಸಮಿಯುದ್ದೀನ್​ನ್ನು ಕರೆದು ವಿಚಾರಣೆ ನಡೆಸಿ ಬಿಟ್ಟುಕಳುಹಿಸಿದ್ದರು.

ಬೆಂಗಳೂರಲ್ಲಿ ಎನ್​ಐಎ ವಶಕ್ಕೆ ಐಸಿಸ್ ಸದಸ್ಯ: ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಯಲ್ಲಿ ಐಸಿಸ್ ಉಗ್ರರ ನಂಟು ಇರುವುದು ಪತ್ತೆಯಾದ ಬೆನ್ನಲ್ಲೇ ಸೋಮವಾರ ಕೇಂದ್ರೀಯ ತನಿಖಾ ತಂಡಗಳು ಬೆಂಗಳೂರಿನಲ್ಲಿ ಶಂಕಿತ ಉಗ್ರನೊಬ್ಬನನ್ನು ವಶಕ್ಕೆ ಪಡೆದಿವೆ. ಶಂಕಿತನನ್ನು ಐಸಿಸ್ ಸದಸ್ಯ ಅಫ್ರೋಜ್ ಎಂದು ಗುರುತಿಸಲಾಗಿದೆ. ಎನ್​ಐಎ, ಐಬಿ ಅಧಿಕಾರಿಗಳು, ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಭಾರತದಲ್ಲಿ ಐಸಿಎಸ್ ಸಂಘಟನೆಗೆ ಯತ್ನಿಸಿದ್ದ ಜಾಲ ಸಕ್ರಿಯವಾಗಿರುವುದು ಜನವರಿಯಲ್ಲಿ ಬೆಳಕಿಗೆ ಬಂದಿತ್ತು. ಈ ಸಂಬಂಧ ಸದ್ದುಗುಂಟೆಪಾಳ್ಯ, ಕೋಲಾರ, ಶಿವಮೊಗ್ಗ ಸೇರಿ ವಿವಿಧೆಡೆ ದಾಳಿ ನಡೆಸಿ 17ಕ್ಕೂ ಅಧಿಕ ಶಂಕಿತ ಉಗ್ರರನ್ನು ಎನ್​ಐಎ ಹಾಗೂ ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದರ ಮುಂದುವರಿದ ಭಾಗವಾಗಿ ಮತ್ತೊಬ್ಬನನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. ಆದರೆ ಕೆ.ಜಿ ಹಳ್ಳಿ ಗಲಭೆಯಲ್ಲಿ ಈತನ ಕೈವಾಡವಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.

ವಿಡಿಯೋ ಸಾಕ್ಷ್ಯ ಲಭ್ಯ:  ಆ.11ರಂದು ಡಿಜೆ ಹಳ್ಳಿ, ಕೆಜಿ ಹಳ್ಳಿಯ ಗಲಭೆ ನಡೆದ ಸ್ಥಳದಲ್ಲಿ ಸಮಿಯುದ್ದೀನ್ ಇರುವ ವಿಡಿಯೋ ಲಭ್ಯವಾಗಿದೆ. ಸ್ಥಳದಲ್ಲಿ ನಿಂತು ಪೊಲೀಸರ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚುವಂತೆ ಯುವಕನೊಬ್ಬನಿಗೆ ಪ್ರಚೋದನೆ ನೀಡುತ್ತಿರುವುದು ಸೆರೆಯಾಗಿದೆ. ವಾಟ್ಸ್ ಆಪ್ ಕಾಲ್ ಮಾಡಿ ಸ್ಥಳಕ್ಕೆ ನೂರಾರು ಗಲಭೆಕೋರರನ್ನು ಕರೆಸಿರುವುದು ಗೊತ್ತಾಗಿದೆ. ಈತ ಈ ಹಿಂದೆ ರುದ್ರೇಶ್ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿ ಇರುವ ಆರೋಪಿಗಳನ್ನು ಹಲವಾರು ಬಾರಿ ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿದ್ದಾನೆ. ಇದಲ್ಲದೆ, ಅಲ್ ಹಿಂದ್ ಟ್ರಸ್ಟ್ ಸಂಘಟನೆ ಮುಖಂಡರ ಜತೆಗೂ ಸಂಪರ್ಕ ಮಾಡಿ ಐಸಿಸ್ ಬಲಗೊಳಿಸುವ ಕುರಿತು ಚರ್ಚೆ ನಡೆಸಿರುವುದು ಸಮಿಯುದ್ದೀನ್ ಮೊಬೈಲ್ ಕರೆಗಳ ಪರಿಶೀಲನೆಯಿಂದ ದೃಢಪಟ್ಟಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

80 ಸಾವಿರ ಫೋನ್ ಕರೆ ಪರಿಶೀಲನೆ: ಗಲಭೆಗೆ ನಡೆದ ರಾತ್ರಿ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣೆ ಬಳಿ ಬಂದು ಹೋದವರ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, 80 ಸಾವಿರಕ್ಕೂ ಹೆಚ್ಚು ಫೋನ್ ಕರೆಗಳ ವಿವರ ಪರಿಶೀಲಿಸಲಾಗಿದೆ. ಇದೇ ವೇಳೆ ಅಲ್ ಹಿಂದ್ ಸಂಘಟನೆಯ ಸದಸ್ಯರ ಜತೆ ಸಮೀವುದ್ಧೀನ್ ಸಂಪರ್ಕದಲ್ಲಿದ್ದ ಎಂಬುದು ಗೊತ್ತಾಗಿದೆ. ಈ ವಿಚಾರವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.

ವಿವಾದಿತ ಪೋಸ್ಟ್ ನೆಪಕ್ಕಷ್ಟೇ: ಫೇಸ್​ಬುಕ್​ನಲ್ಲಿ ವಿವಾದಾತ್ಮಕ ಫೋಸ್ಟ್ ಇದ್ದ ವಿಚಾರ ಗಲಭೆಗೆ ನೆಪಮಾತ್ರ. ಇದರ ಹಿಂದೆ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ (370) ರದ್ದು, ತಲಾಕ್ ನಿಷೇಧ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ), ಅಯೋಧ್ಯ ರಾಮಜನ್ಮ ಭೂ ವಿವಾದದ ಕೋರ್ಟ್ ತೀರ್ಪು ಪ್ರಕಟ ಹಾಗೂ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಗಳ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸುವುದು ಅಥವಾ ಶಾಂತಿ ಕದಡಬೇಕೆಂದು ದೊಡ್ಡ ಸಂಚು ರೂಪಿತವಾಗಿತ್ತು. ಆದರೆ, ಯಶಸ್ವಿಗೊಳಿಸಲು ಸಾಧ್ಯವಾಗಿರಲಿಲ್ಲ. ಆದರೆ, ಆ.11ರಂದು ಫೇಸ್​ಬುಕ್ ಫೋಸ್ಟ್ ಜಗಳ ಗಲಭೆಗೆ ತಿರುಗಿತ್ತು. ಪೊಲೀಸರು, ಸೂಕ್ಷ್ಮವಾಗಿ ತನಿಖೆ ಕೈಗೊಂಡಾಗ ಉಗ್ರರ ಕೈವಾಡದ ಅನುಮಾನ ಬೆಳಕಿಗೆ ಬರಲಾರಂಭಿಸಿದೆ. ಬಂಧಿತ ಗಲಭೆಕೋರರ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಸ್ಪೋಟಕ ಮಾಹಿತಿ ಲಭ್ಯವಾಗಿದ್ದು, ಅಲ್ ಹಿಂದ್ ಸಂಘಟನೆ ಹಾಗೂ ರುದ್ರೇಶ್ ಕೊಲೆ ಪ್ರಕರಣದ ಆರೋಪಿಗಳ ಜತೆ ನಂಟಿರುವುದು ಬೆಳಕಿಗೆ ಬಂದಿದೆ. ಐಸಿಸ್ ಆಣತಿಯಂತೆ ಅಲ್ ಹಿಂದ್ ಮುಖಂಡರು ಯುವಕರಿಗೆ ಪ್ರಚೋದನೆ ನೀಡಿ ಗಲಭೆ ನಡೆಸಿರುವುದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.