IShowSpeed 
ನ್ಯೂಸ್

ಬೌಲಿಂಗ್ ಮಾಡಿ ಕೊಹ್ಲಿಗೆ ಸವಾಲು ಹಾಕಿದ ಅಮೆರಿಕದ ಯೂಟ್ಯೂಬರ್ IShowSpeed: ವಿಡಿಯೋ ವೈರಲ್!

ಆಂಟಿಗುವಾ: ಅಮೆರಿಕದ ಖ್ಯಾತ ಯೂಟ್ಯೂಬರ್ ಹಾಗೂ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಡೇರೆನ್ ವಾಟ್ಕಿನ್ಸ್ ಜೂನಿಯರ್, ಅಲಿಯಾಸ್ 'ಐಶೋಸ್ಪೀಡ್' (IShowSpeed), ಈಗ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಕೆರಿಬಿಯನ್ ಪ್ರವಾಸದಲ್ಲಿರುವ ಇವರು, ಟೀಮ್ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿಗೆ ಸವಾಲು ಹಾಕುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರಿಕೆಟ್ ಸ್ಟೇಡಿಯಂಗೆ ಭೇಟಿ ನೀಡಿದ್ದ ಸ್ಪೀಡ್, ಅಲ್ಲಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸುಮಾರು 5.5 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿರುವ ಈ ಯುವ ಪ್ರತಿಭೆ, ವೆಸ್ಟ್ ಇಂಡೀಸ್ ವೇಗಿ ಅಲ್ಜಾರಿ ಜೋಸೆಫ್ ಅವರೊಂದಿಗೆ ಕ್ರಿಕೆಟ್ ಆಡಿ ಎಲ್ಲರ ಗಮನ ಸೆಳೆದಿದ್ದಾರೆ.

ಕೊಹ್ಲಿಗೆ ಬಹಿರಂಗ ಸವಾಲು!

ಆಂಟಿಗುವಾ ಮತ್ತು ಬಾರ್ಬುಡಾ ತಂಡದ ಜರ್ಸಿ ಧರಿಸಿದ್ದ ಸ್ಪೀಡ್, ಅಲ್ಜಾರಿ ಜೋಸೆಫ್ ಬೌಲಿಂಗ್ ಮಾಡುವುದನ್ನು ಕುತೂಹಲದಿಂದ ಗಮನಿಸಿದರು. ನಂತರ ತಾವೇ ಚೆಂಡನ್ನು ಕೈಗೆತ್ತಿಕೊಂಡು ಬೌಲಿಂಗ್ ಮಾಡುವ ಸಾಹಸಕ್ಕೆ ಕೈಹಾಕಿದರು. ಅಸಲಿಗೆ ಅವರು ಮಾಡಿದ್ದು ಬೌಲಿಂಗ್‌ಗಿಂತ ಹೆಚ್ಚಾಗಿ 'ಥ್ರೋ' ಆಗಿತ್ತು. ಆದರೂ, ಚೆಂಡು ಸ್ಟಂಪ್‌ಗೆ ಬಡಿಯುತ್ತಿದ್ದಂತೆಯೇ ಸಂಭ್ರಮಿಸಿದ ಅವರು, ವಿರಾಟ್ ಕೊಹ್ಲಿಗೆ ನೇರವಾಗಿ ಸಂದೇಶ ರವಾನಿಸಿದರು.
"ನಾನೇ ಶ್ರೇಷ್ಠ ಬೌಲರ್ ಇರಬೇಕು! ವಿರಾಟ್ ಕೊಹ್ಲಿ, ನೀನು ನನಗೆ ಕಾಲ್ ಮಾಡು... ಐಸಿಸಿ ನನಗೆ ಕಾಲ್ ಮಾಡಿ, ಮುಂಬೈ ಕ್ರಿಕೆಟ್ ತಂಡದವರೇ ನನಗೆ ಕರೆ ಮಾಡಿ," ಎಂದು ಜೋರಾಗಿ ಕೂಗುತ್ತಾ ಮೈದಾನದಲ್ಲಿ ಓಡಾಡಿದರು. "ವಿರಾಟ್ ಕೊಹ್ಲಿ ಬ್ರೋ, ನೀವು ನಿಜವಾಗಿಯೂ ನನಗೆ ಫೋನ್ ಮಾಡಲೇಬೇಕು" ಎಂದು ಅವರು ಹೇಳಿರುವ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಬೆಂಕಿಯಂತೆ ಹರಡುತ್ತಿದೆ.

ಬಾಬರ್ ಅಜಮ್‌ಗೆ ಕಾಲೆಳೆದ ಯೂಟ್ಯೂಬರ್

ಇಷ್ಟಕ್ಕೇ ಸುಮ್ಮನಾಗದ ಸ್ಪೀಡ್, ಕ್ರಿಕೆಟ್ ಆಡುವಾಗ ತಮ್ಮ ಗೆಳೆಯನೊಬ್ಬ ಕೆಟ್ಟದಾಗಿ ಶಾಟ್ ಹೊಡೆದಾಗ ಪಾಕಿಸ್ತಾನದ ಬ್ಯಾಟರ್ ಬಾಬರ್ ಅಜಮ್ ಅವರ ಹೆಸರನ್ನು ಎಳೆದು ತಂದಿದ್ದಾರೆ. "ಇದು ಬಾಬರ್ ಅಜಮ್ ಆಡುವಂತಹ ಶಾಟ್" ಎಂದು ಕಾಲೆಳೆದಿದ್ದಾರೆ. ಅದೇ ವೇಳೆ ತಾವೊಂದು ಉತ್ತಮ ಶಾಟ್ ಬಾರಿಸಿದಾಗ, "ನನ್ನ ಹೋಮಿ ವಿರಾಟ್ ಕೊಹ್ಲಿಗೆ ಇದು ಅರ್ಪಣೆ" ಎಂದು ಸಂಭ್ರಮಿಸಿದ್ದಾರೆ.

ಕೊಹ್ಲಿ ಅಭಿಮಾನಿ ಈ 'ಸ್ಪೀಡ್'

ಸ್ಪೀಡ್ ಕೇವಲ ತಮಾಷೆಗಾಗಿ ಕ್ರಿಕೆಟ್ ಆಡುತ್ತಿಲ್ಲ, ಅವರು ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿ. 2023ರ ವಿಶ್ವಕಪ್ ವೇಳೆ ಭಾರತಕ್ಕೆ ಬಂದಿದ್ದ ಅವರು, ಟೀಮ್ ಇಂಡಿಯಾದ ಜರ್ಸಿ ಧರಿಸಿ ಗ್ಯಾಲರಿಯಲ್ಲಿ ಕುಳಿತು ಕೊಹ್ಲಿಯನ್ನು ಹುರಿದುಂಬಿಸಿದ್ದರು. ಕಳೆದ ವರ್ಷ ಕೊಹ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದಾಗ ಸ್ಪೀಡ್ ತೀವ್ರ ಬೇಸರ ವ್ಯಕ್ತಪಡಿಸಿದ್ದರು.
"ಇದು ತುಂಬಾ ಬೇಸರದ ಸಂಗತಿ. ಎಲ್ಲಾ ದಿಗ್ಗಜರು ನಿವೃತ್ತಿಯಾಗುತ್ತಿದ್ದಾರೆ. ಐಸಿಸಿ ಟ್ರೋಫಿ ಗೆದ್ದ ತಕ್ಷಣ ಅವರು ಯಾಕೆ ನಿವೃತ್ತರಾಗಬೇಕು? ಅವರಿಗೆ ಇನ್ನೂ 36 ವರ್ಷ ಅಷ್ಟೇ ಅಲ್ವಾ?" ಎಂದು ಪ್ರಶ್ನಿಸುವ ಮೂಲಕ ಕೊಹ್ಲಿ ಮೇಲಿರುವ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದರು.
ಒಟ್ಟಿನಲ್ಲಿ, ಅಮೆರಿಕದ ಯುವಕನೊಬ್ಬ ಭಾರತೀಯ ಕ್ರಿಕೆಟ್ ತಾರೆಯ ಹೆಸರನ್ನು ಜಾಗತಿಕ ಮಟ್ಟದಲ್ಲಿ ಇಷ್ಟು ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿರುವುದು ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ,(ಏಜೆನ್ಸೀಸ್​).