ಇಶಾ ಲಂಕೇಶ್​ 
ನ್ಯೂಸ್

ಸ್ಯಾಂಡಲ್‌ವುಡ್‌ಗೆ ಇಶಾ ಲಂಕೇಶ್: ಚಂದನವನಕ್ಕೆ ಕಾಲಿಟ್ಟ ನಿರ್ದೇಶಕಿ ಕವಿತಾ ಲಂಕೇಶ್ ಪುತ್ರಿ

ಪ್ರಮುಖ ಮುಖ್ಯಾಂಶಗಳು

  • ಲಂಕೇಶ್ ಕುಟುಂಬದ ಮೂರನೇ ಕುಡಿ ಚಿತ್ರರಂಗಕ್ಕೆ
  • ರಂಗಭೂಮಿಯಲ್ಲಿ ಪಳಗಿ ಸಿನಿಮಾ ರಂಗದತ್ತ ಬಂದ ಇಶಾ ಲಂಕೇಶ್
  • ಆಗಸ್ಟ್​ನಿಂದ ಶೂಟಿಂಗ್ ಶುರುವಾಗುವ ಚಿತ್ರಕ್ಕೆ ಪ್ರೀತಂ ಗುಬ್ಬಿ ಆ್ಯಕ್ಷನ್​-ಕಟ್​
ಬೆಂಗಳೂರು: ಹಿರಿಯ ಸಾಹಿತಿ, ನಿರ್ದೇಶಕ ಪಿ. ಲಂಕೇಶ್ ಕುಟುಂಬದ ಮೂರನೇ ತಲೆಮಾರಿನ ಕುಡಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದೆ. ನಿರ್ದೇಶಕಿ ಕವಿತಾ ಲಂಕೇಶ್ ಪುತ್ರಿ ಇಶಾ ಲಂಕೇಶ್ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಲಂಕೇಶ್ ಕುಟುಂಬದವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸ್ವತ: ಲಂಕೇಶ್ ‘ಪಲ್ಲವಿ’, ‘ಖಂಡವಿದೆಕೋ ಮಾಂಸವಿದೆಕೋ’, ‘ಎಲ್ಲಿಂದಲೋ ಬಂದವರು’ ಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದರು. ಅವರ ಬಳಿಕ ಪುತ್ರಿ ಕವಿತಾ ಲಂಕೇಶ್ (‘ದೇವೀರಿ’, ‘ಪ್ರೀತಿ ಪ್ರೇಮ ಪ್ರಣಯ’, ‘ಅವ್ವ’, ‘ಸಮ್ಮರ್ ಹಾಲಿಡೇಸ್’) , ಪುತ್ರ ಇಂದ್ರಜಿತ್ ಲಂಕೇಶ್ (‘ಐಶ್ವರ್ಯಾ’, ‘ಮೊನಾಲಿಸಾ’, ‘ತುಂಟಾ’, ‘ಲವ್ ಯೂ ಆಲಿಯಾ’, ‘ಶಕೀಲಾ’) ಕೂಡ ಹಲವು ಸಿನಿಮಾಗಳನ್ನು ನಿರ್ದೇಶಿಸಿ, ಗಮನ ಸೆಳೆದಿದ್ದರು. ಇದೀಗ ಮೂರನೇ ತಲೆಮಾರಿನ ಕುಡಿ ಚಿತ್ರರಂಗದಲ್ಲಿ ಸಕ್ರಿಯವಾಗಿದೆ. ಈಗಾಗಲೇ ಇಂದ್ರಜಿತ್ ಪುತ್ರ ಸಮರ್ಜಿತ್ ಲಂಕೇಶ್ ‘ಗೌರಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ ಪ್ಯಾನ್ ಇಂಡಿಯಾ ‘ವೃಷಭ’ ಚಿತ್ರದಲ್ಲಿ ನಟಿಸಿ, ಗುರುತಿಸಿಕೊಂಡಿದ್ದಾರೆ. ಅವರ ತರುವಾಯ ಇದೀಗ ಕವಿತಾ ಲಂಕೇಶ್ ಪುತ್ರಿ ಇಶಾ ಸ್ಯಾಂಡಲ್‌ವುಡ್‌ಗೆ ಡೆಬ್ಯೂ ಮಾಡುತ್ತಿದ್ದಾರೆ. ‘ಬಾನ ದಾರಿಯಲಿ’ ಖ್ಯಾತಿಯ ಪ್ರೀತಂ ಗುಬ್ಬಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಇಶಾ ಪದವಿ ಪೂರ್ಣಗೊಳಿಸಿದ್ದು, ರಂಗಭೂಮಿಯಲ್ಲಿ ಸಕ್ರಿಯರಾಗಿ ನಟನಾ ತರಬೇತಿ ಪಡೆದಿದ್ದಾರೆ. ಸದ್ಯ ಅವರು ಚೊಚ್ಚಲ ಸಿನಿಮಾದ ಪಾತ್ರಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ಚಿತ್ರಕ್ಕೆ ಇನ್ನಷ್ಟೇ ಟೈಟಲ್ ಫಿಕ್ಸ್ ಆಗಬೇಕಿದೆ. ಸದ್ಯ ಚಿತ್ರತಂಡ ನಾಯಕಿಯನ್ನು ಮಾತ್ರ ಘೋಷಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ನಾಯಕ ಸೇರಿ ಉಳಿದ ತಾರಾ, ತಾಂತ್ರಿಕ ಬಳಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ. ಆಗಸ್ಟ್‌ನಲ್ಲಿ ಸಿನಿಮಾ ಸೆಟ್ಟೇರಲಿದೆ.
"

ನಾನು ಕೂಡ ಎಲ್ಲರಂತೆ ಆಡಿಷನ್ ನೀಡುತ್ತಿದ್ದೆ. ಅದೃಷ್ಟವಶಾತ್ ಈ ಚಿತ್ರಕ್ಕೆ ನಾನು ಆಯ್ಕೆಯಾದೆ. ಕಥೆ ನನಗೆ ತುಂಬಾ ಇಷ್ಟವಾಗಿದ್ದರಿಂದ ಚಿತ್ರವನ್ನು ಒಪ್ಪಿಕೊಂಡೆ. ಇನ್ನು ಅಮ್ಮ ನಿರ್ದೇಶನದ ಸಿನಿಮಾಗಳಿಗೆ ಕಲಾ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ರಂಗಭೂಮಿಯಲ್ಲಿ ಸಾಕಷ್ಟು ಕಲಿತೆ.

— ಇಶಾ ಲಂಕೇಶ್, ನಟಿ