Thinking while drinking tea: ಚಹಾ ಕುಡಿಯುತ್ತಾ ಅಥವಾ ಊಟ ಮಾಡ್ತಾ ಇದ್ದಾಗ ಏಕಾಏಕಿ ಸುತ್ತಮುತ್ತಲ ಜಗತ್ತನ್ನೇ ಮರೆತು ಯೋಚನೆಯಲ್ಲಿ ಮುಳುಗಿವಿರಾ? ಹಳೆಯ ನೆನಪುಗಳು, ಮುಂದಿನ ದಿನಗಳ ಪ್ಲ್ಯಾನ್‌ಗಳು, ಯಾವುದೋ ಸಮಸ್ಯೆ ಅಥವಾ ಹೊಸ ಐಡಿಯಾಗಳು ಮನಸ್ಸಿನಲ್ಲಿ ಓಡಾಡೋದು ಹಲವರ ಅನುಭವ. ಇದನ್ನೇ ಸಾಮಾನ್ಯವಾಗಿ ‘ಮೈಂಡ್ ವಾಂಡರಿಂಗ್’ ಅಂತ ಕರೆಯಲಾಗುತ್ತೆ. ಕೆಲವೊಮ್ಮೆ ಇದನ್ನು ‘ಡೇಡ್ರೀಮಿಂಗ್’ ಎಂದೂ ಹೇಳ್ತಾರೆ.
ನಾವು ತುಂಬಾ ಏಕಾಗ್ರತೆ ಬೇಕಾಗದ ಸಾಮಾನ್ಯ ಕೆಲಸ ಮಾಡ್ತಿರುವಾಗ ಮೆದುಳಿನ ಡಿಫಾಲ್ಟ್ ಮೋಡ್ ನೆಟ್‌ವರ್ಕ್ (ಡಿಎಂಎನ್) ಸಕ್ರಿಯವಾಗಬಹುದು. ಈ ವೇಳೆ ನಮ್ಮ ಗಮನ ಹೊರಗಿನ ಕೆಲಸದಿಂದ ಸ್ವಲ್ಪ ದೂರ ಸರಿದು, ಒಳಗಿನ ಆಲೋಚನೆಗಳತ್ತ ಹೋಗಬಹುದು.
ಹೀಗಾಗಿ ಚಹಾ ಕುಡಿಯೋದು ಅಥವಾ ಊಟ ಮಾಡೋದು ಹೀಗೆ ರೂಢಿಯ ಕೆಲಸ ಮಾಡ್ತಿರುವಾಗ ಮನಸ್ಸು ಹಳೆಯ ನೆನಪು, ಭವಿಷ್ಯದ ಪ್ಲ್ಯಾನ್, ವೈಯಕ್ತಿಕ ವಿಚಾರಗಳು ಅಥವಾ ಯಾವುದಾದರೂ ಕಲ್ಪನೆಯತ್ತ ತಿರುಗಬಹುದು.
ದಿನವಿಡೀ ಕೆಲಸದ ಒತ್ತಡದಲ್ಲಿದ್ದಾಗ ನಮ್ಮ ಗಮನ ಬೇರೆ ಬೇರೆ ಕೆಲಸಗಳ ಮೇಲಿರುತ್ತೆ. ಆದರೆ ಚಹಾ ಅಥವಾ ಊಟದ ಸಮಯದಲ್ಲಿ ಸಿಗೋ ಸಣ್ಣ ಬ್ರೇಕ್‌ನಿಂದ ಮನಸ್ಸಿಗೆ ಸ್ವಲ್ಪ ರಿಲ್ಯಾಕ್ಸ್ ಆಗೋ ಅವಕಾಶ ಸಿಗುತ್ತೆ. ಚಹಾದ ರುಚಿ, ಸುವಾಸನೆ ಮತ್ತು ಬಿಸಿಯ ಅನುಭವ ಕೂಡ ವಿಶ್ರಾಂತಿಯ ಭಾವನೆ ಮೂಡಿಸಬಹುದು. ಈ ವೇಳೆ ಹೊರಗಿನ ಕೆಲಸದ ಮೇಲಿನ ಗಮನ ಕಡಿಮೆಯಾಗಿ, ಮನಸ್ಸು ತನ್ನದೇ ಆದ ಆಲೋಚನೆಗಳಲ್ಲಿ ಮುಳುಗಬಹುದು.
ಕೆಲವೊಮ್ಮೆ ಮನಸ್ಸಿನಲ್ಲಿ ಬಾಕಿ ಉಳಿದಿರುವ ಸಮಸ್ಯೆಗಳು, ಆತಂಕಗಳು ಅಥವಾ ಮಾಡಬೇಕಿರುವ ಕೆಲಸಗಳು ಇಂಥ ಸಮಯದಲ್ಲೇ ಮತ್ತೆ ನೆನಪಿಗೆ ಬರುತ್ತವೆ. ದಿನದ ಗಡಿಬಿಡಿಯಲ್ಲಿ ಗಮನಕ್ಕೆ ಬರದ ವಿಚಾರಗಳೂ ಚಹಾ ಅಥವಾ ಊಟದ ವೇಳೆ ತಲೆಯಲ್ಲಿ ಓಡಾಡಬಹುದು. ಆದ್ರೆ ‘ಮೈಂಡ್ ವಾಂಡರಿಂಗ್’ ಯಾವಾಗಲೂ ಕೆಟ್ಟದ್ದೇನಲ್ಲ. ಇದೇ ವೇಳೆ ಕೆಲವರಿಗೆ ಹೊಸ ಐಡಿಯಾಗಳು ಹೊಳೆಯಬಹುದು, ಬರವಣಿಗೆಗೆ ಹೊಸ ಕಲ್ಪನೆ ಸಿಗಬಹುದು ಅಥವಾ ಯಾವುದಾದರೂ ಸಮಸ್ಯೆಗೆ ಪರಿಹಾರವೂ ಹೊಳೆಯಬಹುದು.
ಹೌದು. ಚಹಾ ಕುಡಿಯುವಾಗ ಅಥವಾ ಊಟ ಮಾಡುವಾಗ ಕೆಲಕಾಲ ಸುತ್ತಮುತ್ತಲನ್ನೇ ಮರೆತು ಯೋಚನೆಯಲ್ಲಿ ಮುಳುಗೋದು ಸಾಮಾನ್ಯ. ಆ ಸಮಯದಲ್ಲಿ ಮನಸ್ಸು ಒಂದೇ ವಿಚಾರದ ಮೇಲೆ ಕೇಂದ್ರೀಕರಿಸದೆ, ಹಳೆಯ ನೆನಪುಗಳು, ಕಲ್ಪನೆಗಳು, ವೈಯಕ್ತಿಕ ವಿಚಾರಗಳು ಹಾಗೂ ಭವಿಷ್ಯದ ಪ್ಲ್ಯಾನ್‌ಗಳ ನಡುವೆ ಓಡಾಡುತ್ತಿರುತ್ತೆ. ಹೀಗಾಗಿ ಚಹಾ ಕಪ್ ಕೈಯಲ್ಲಿದ್ದಾಗ ಲೋಕವನ್ನೇ ಮರೆತು ಯೋಚನೆಯಲ್ಲಿ ಮುಳುಗೋದು ಕೂಡ ಮೆದುಳಿನ ಸಹಜ ಕಾರ್ಯವೈಖರಿಯ ಒಂದು ಭಾಗವೇ ಆಗಿರಬಹುದು.