* ಕಿರುವಾರ ಎಸ್.ಸುದರ್ಶನ್ ಕೋಲಾರ
ನಗರಸಭೆ ಖರೀದಿ ಮಾಡಿದ್ದ ಜಮೀನನ್ನು ಖಾಸಗಿಯವರು ಬೇರೊಬ್ಬರಿಗೆ ಮಾರಾಟ ಮಾಡಿರುವ ಪ್ರಕರಣ ದಿನೇದಿನೆ ತಿರುವು ಪಡೆದುಕೊಳ್ಳುತ್ತಿದ್ದು, ಈಗ ಮತ್ತಷ್ಟು ಜಮೀನು ಖಾಸಗಿ ವ್ಯಕ್ತಿಗಳ ಪಾಲಾಗಿರುವುದು ಬೆಳಕಿಗೆ ಬಂದಿದೆ.
ಜಾಗ ಖಾಸಗಿ ವ್ಯಕ್ತಿಗಳ ಪಾಲಾಗಲು ನಗರಸಭೆ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ನಕಲಿ ದಾಖಲೆ ಸೃಷ್ಟಿಸಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ದೂರು ನೀಡಿದ್ದರೂ ಇದುವರೆಗೂ ಕ್ರಮಕ್ಕೆ ಪೊಲೀಸರು ಮುಂದಾಗದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ತಾಲೂಕಿನ ಕಸಬಾ ಹೋಬಳಿಯ ಖಾದ್ರಿಪುರ ಸಮೀಪ ಸರ್ವೇ ನಂ.29ರ ಪೈಕಿ 1 ಎಕರೆ 19 ಗುಂಟೆ ಜಮೀನನ್ನು ನಗರಸಭೆ ಖರೀದಿ ಮಾಡಿತ್ತು. ಮಾಲೀಕನಿಂದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಶುದ್ಧ ಕ್ರಯ ಮಾಡಿಸಿಕೊಂಡು ನೋಂದಣಿ ಮಾಡಿಕೊಳ್ಳಲಾಗಿತ್ತು. ಆದರೆ ಅಂದಿನಿಂದ ಇಂದಿನ ವರೆಗೂ ಜಾಗವನ್ನು ನಗರಸಭೆಯ ಆಸ್ತಿಯಾಗಿಸಿಕೊಳ್ಳುವಲ್ಲಿ ಅಧಿಕಾರಿಗಳು ವಿಲರಾಗಿದ್ದಾರೆ.
ಮೂಲ ಮಾಲೀಕರಾಗಿದ್ದ ಮುನಿವೆಂಕಟಪ್ಪ ಹಾಗೂ ಮುನಿಸೊಣ್ಣಪ್ಪ ಅವರು ಜಂಟಿಯಾಗಿದ್ದರು. 2001&02ರಲ್ಲಿ ಮಹಮದ್ ಅಕ್ಬರ್, ಚಾಂದ್ ಪಾಷಾ ನೋಂದಣಿ ಮಾಡಿಸಿಕೊಂಡು, ನಗರಸಭೆಗೆ ಮಾರಾಟ ಮಾಡಿದ್ದಾರೆ. ಇದರ ನಡುವೆ ನಾರಾಯಣಮ್ಮ ಎಂಬುವರ ಹೆಸರಲ್ಲಿ ಪಹಣಿ ಬರುತ್ತಿರುತ್ತದೆ. ಇದಾದ ಬಳಿಕ ಏಜಾಜ್ ಪಾಷಾ ಖರೀದಿ ಮಾಡಿರುವ ಹಾಗೆ ದಾಖಲೆ ಸೃಷ್ಟಿಯಾಗುತ್ತದೆ.
ಅಂತೆಯೇ, ಜಾಗ ನನಗೆ ಸೇರಿದ್ದು ಎಂದು ತಹಸೀಲ್ದಾರ್ ಕಚೇರಿಯಲ್ಲಿ ಏಜಾಜ್ ಪಾಷಾ ದಾವೆ ಹೂಡುತ್ತಾರೆ. ಹಾಗೆಯೇ ರಾಜಕೀಯ ಪ್ರಭಾವ ಬೀರಿ ತಹಸೀಲ್ದಾರ್ ಮೇಲೆ ಒತ್ತಡ ತಂದು ಆದೇಶವನ್ನು ಅವರ ಪರ ಮಾಡಿಸಿಕೊಂಡಿದ್ದಾರೆ ಎಂದು ನಗರಸಭೆ ಸದಸ್ಯರು ದೂರಿದ್ದಾರೆ.
ದೂರುದಾರ ಪ್ರವಿಣ್ಗೌಡ ಜಮೀನು ದಾಖಲೆಗಳನ್ನು ಕಲೆ ಹಾಕಿದ್ದು, ನಗರಸಭೆ, ತಹಸೀಲ್ದಾರ್ ಅವರ ಗಮನಕ್ಕೆ ತರಲು ಭೇಟಿ ಮಾಡಿದ್ದಾರೆ. ಆಗ ಈ ಸಂಬಂಧ ಕಚೇರಿಗಳಲ್ಲಿ ದಾಖಲೆಗಳು ಲಭ್ಯವಾಗದೆ ಇರುವುದು ಬಯಲಿಗೆ ಬಂದಿದೆ. ಪ್ರಕರಣ ಸಂಬಂಧ ಚರ್ಚೆ ನಡೆಸುತ್ತಿದಾಗ ಅಧಿಕಾರಿಗಳು ಉತ್ತರ ನೀಡಲು ತಡಬಡಿಸಿದ್ದಾರೆ.
ನಗರಸಭೆಯ ಕೋಟ್ಯಂತರ ಜಮೀನು ಎರಡ್ಮೂರು ಕೈ ಬದಲಾವಣೆಯಾಗಿದ್ದು, ಇದರಲ್ಲಿ ನಗರಸಭೆ, ಉಪ ನೋಂದಣಿ ಕಚೇರಿ ಅಧಿಕಾರಿ, ಸಿಬ್ಬಂದಿ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.
* ಶಾಸಕರ ಮಧ್ಯ ಪ್ರವೇಶಕ್ಕೆ ಒತ್ತಾಯ
ನಗರಸಭೆಯಲ್ಲಿನ ಆಶ್ರಯ ಸಮಿತಿಗೆ ಕ್ಷೇತ್ರದ ಶಾಸಕ ಕೊತ್ತೂರು ಜಿ.ಮಂಜುನಾಥ್ ಅಧ್ಯಕ್ಷರಾಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಬೇಕಾಗಿದೆ. ಜತೆಗೆ ನಗರಸಭೆಗೆ ಸಂಬಂಧಿಸಿದ ಆಸ್ತಿಗಳ ಮಾಹಿತಿ ಪಡೆದುಕೊಂಡು ರಕ್ಷಣೆಗೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
* ನಗರಸಭೆ, ಸಬ್ರಿಜಿಸ್ಟ್ರಾರ್ ಇಲಾಖೆ ಸಿಬ್ಬಂದಿ ಶಾಮೀಲು..?
ಜಾಗವನ್ನು ನಗರಸಭೆಗೆ ವಾಪಸ್ ಪಡೆದುಕೊಳ್ಳಲು ಅಧಿಕಾರಿಗಳು ಕಾನೂನು ಕ್ರಮವಹಿಸಿದ್ದು, ನಗರದ ಗಲ್ಪೇಟೆ ಠಾಣೆಗೆ ಏ.25ರಂದು ನಗರಸಭೆಯಿಂದ ದೂರು ನೀಡಿದ್ದರೂ ಇದುವರೆಗೂ ಎ್ಐಆರ್ ದಾಖಲಿಸಿ ತಪ್ಪಿತಸ್ಥರ ಕ್ರಮಕ್ಕೆ ಮುಂದಾಗದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ನಗರಸಭೆಗೆ ಕ್ರಯವಾಗಿದ್ದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ 2024ರ ಆ.2ರಂದು ಖಾದ್ರಿಪುರ ಸರ್ವೇ ನಂ.29ರ ಪೈಕಿ ಜಮೀನನ್ನು ಯಾರ ಹೆಸರಿಗೂ ನೋಂದಣಿ ಮಾಡಬಾರದು ಎಂದು ಉಪನೋಂದಣಾಧಿಕಾರಿಗೆ ನಗರಸಭೆಯಿಂದ ಅರ್ಜಿ ಬರೆಯಲಾಗಿದೆ. ಆದರೂ 2024ರ ನ.27ರಂದು ನಗರಸಭೆ ಪೌರಾಯುಕ್ತರ ಸಹಿ ಪೋರ್ಜರಿ ಮಾಡಿ, ಪುರಸಭೆ ಕಾರ್ಯಾಲಯ ಕೋಲಾರ ಎಂದು ಬೋಗಸ್ ಲೆಟರ್ ಹೆಡ್ನಲ್ಲಿ ಅರ್ಜಿ ಹಿಂಪಡೆಯುತ್ತಿರುವ ಬಗ್ಗೆ ಉಪ ನೋಂದಣಾಧಿಕಾರಿ ಕಚೇರಿಗೆ ಲಿಖಿತವಾಗಿ ಸಲ್ಲಿಸಿದ್ದಾರೆ. ಇದರಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ಶಾಮೀಲಾಗಿ ಹಲವು ಬಾರಿ ನೋಂದಣಿ ವಹಿವಾಟು ಮಾಡಿಸಿರುತ್ತಾರೆ. ನಕಲಿ ದಾಖಲೆ ಸೃಷ್ಟಿ ಮಾಡಿರುವವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಬೇಕು ಎಂದು ಕೋರಿ ನಗರಸಭೆಯಿಂದ ಪೊಲೀಸರಿಗೆ ದೂರು ನೀಡಿದ್ದಾರೆ.
* ಮತ್ತಷ್ಟು ಪ್ರಕರಣ ಬಯಲು
ಖಾದ್ರಿಪುರದ ಜಮೀನು ಖಾಸಗಿಯವರ ಪಾಲಾಗಿರುವುದು ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ನಗರಸಭೆಯ ಇನ್ನೂ ಕೆಲ ಆಸ್ತಿಗಳನ್ನು ಪರಭಾರೆ ಮಾಡಿಕೊಂಡಿರುವ ಅನುಮಾನ ಕಾಡುತ್ತಿದೆ. ಖಾದ್ರಿಪುರ ಸರ್ವೇ ನಂ& 30/2, 34/1, 33/2ಎ ಸೇರಿ ಇನ್ನೂ ಕೆಲ ಜಮೀನುಗಳು ನಗರಸಭೆಗೆ ಕ್ರಯ ಆಗಿದ್ದು, ನಗರಸಭೆಯವರು, ದಾಖಲೆ ನಿರ್ವಹಣೆ ಮಾಡದೆ, ಖಾತೆಗೆ ಮಾಡಿಸಿಕೊಳ್ಳದೆ ಇರುವುದರಿಂದ ಖಾಸಗಿಯವರ ಪಾಲಾಗಿದೆ ಎಂದು ದೂರುದಾರ ಹಾಗೂ ನಗರಸಭೆ ಸದಸ್ಯ ಪ್ರವಿಣ್ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.