ನ್ಯೂಸ್

ಪುರುಷ ಮತ ಖೋತಾ?: ಕಾಂಗ್ರೆಸ್​ಗೆ ಕಾಡ್ತಿದೆ ಗ್ಯಾರಂಟಿ ಸೈಡ್ ಎಫೆಕ್ಟ್ ಭೀತಿ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಗ್ಯಾರಂಟಿಗಳ ಪ್ರಭಾವದಿಂದ ಲೋಕಕದನದಲ್ಲಿ ಗೆಲುವಿನ ದಡ ಮುಟ್ಟುವ ಕನಸು ಕಾಣುತ್ತಿರುವ ಕಾಂಗ್ರೆಸ್​ಗೆ ಉಚಿತ ಯೋಜನೆ ಕೈಕೊಡಲೂಬಹುದೆಂಬ ಸರ್ವೆ ವರದಿ ನಡುಕ ಹುಟ್ಟಿಸಿದೆ. ಬೇರೆ ಬೇರೆ ತೆರಿಗೆ, ದರ ಏರಿಕೆ ರೂಪದಲ್ಲಿ ಕಿತ್ತುಕೊಂಡ ಹಣವನ್ನು ರಾಜ್ಯ ಸರ್ಕಾರ ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ ಸೇರಿಸುತ್ತಿದೆ ಎಂಬ ಅಸಮಾಧಾನ ಪುರುಷ ಮತದಾರರಲ್ಲಿದೆ ಎಂಬ ಸಮೀಕ್ಷಾ ವರದಿ ಈ ಆತಂಕಕ್ಕೆ ಕಾರಣ.

ಗ್ಯಾರಂಟಿಗಳಿಂದಾಗಿ ಮಹಿಳೆಯರು, ಅಹಿಂದ ವರ್ಗ ಖುಷಿಯಾಗಿದೆ ಎಂದು ಕಾಂಗ್ರೆಸ್ ಬೀಗುತ್ತಿತ್ತು. ಬೆಲೆ ಏರಿಕೆ ಹಾಗೂ ತೆರಿಗೆ, ಅನುದಾನ ವಿಚಾರದಲ್ಲಿ ಕೇಂದ್ರದಿಂದ ಅನ್ಯಾಯವಾಗುತ್ತಿದೆ ಎಂಬ ಆರೋಪ ವರವಾಗಬಹುದೆಂದು ಕೈ ಪಡೆ ಎಣಿಸಿತ್ತು. ಆದರೆ ತಳಮಟ್ಟದಲ್ಲಿ ಬೇರೆಯದೇ ಚಿತ್ರಣ ಇದೆ ಎಂಬುದು ಕಾಂಗ್ರೆಸ್ ನಾಯಕರ ಗಮನಕ್ಕೆ ಬಂದಿದೆ. ಉಚಿತ ವಿದ್ಯುತ್ ನೀಡಿಕೆ, ಮಹಿಳೆಯರ ಖಾತೆಗೆ ನೇರ ಹಣ ಹೋಗುವುದು ವಿಧಾನಸಭೆ ಬಳಿಕ ಲೋಕಸಭೆ ಚುನಾವಣೆಯಲ್ಲೂ ಭರ್ಜರಿ ಮತ ಫಸಲು ಬರಬಹುದೆಂದು ಕೈಪಡೆ ಲೆಕ್ಕಾಚಾರ ಹಾಕಿತ್ತು. ಆದರೆ ಶ್ರಮಿಕ ವರ್ಗ ಸೇರಿದಂತೆ ತಳಮಟ್ಟ ದಲ್ಲೂ ಮತದಾರರ ನಾಡಿಬಡಿತಕ್ಕೆ ಸ್ಟೆತ ಸ್ಕೋಪ್ ಇಟ್ಟಿರುವ ಕಾಂಗ್ರೆಸ್​ಗೆ ಪುರುಷ ಮತ ದಾರರ ಮುನಿಸಿನ ಅರಿವಾಗಿದೆ.

ಮಹಿಳೆಯರು ಕೈಕೊಟ್ಟರೆ?: ಗ್ಯಾರಂಟಿಗಳ ಬಗ್ಗೆ ಮಹಿಳಾ ವಲಯದಲ್ಲಿ ಸಕಾರಾತ್ಮಕ ಅಭಿಪ್ರಾಯ ಇದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಒಂದಷ್ಟು ಮಹಿಳಾ ಮತಗಳು ಬಿಜೆಪಿ, ಜೆಡಿಎಸ್​ಗೂ ಶಿಫ್ಟ್ ಆಗಬಹುದು. ಗ್ಯಾರಂಟಿಯ ಪೂರ್ಣ ಲಾಭ ನಮಗೆ ಸಿಗುತ್ತದೆ ಎಂದು ಹೇಳೋದಕ್ಕೆ ಆಗಲ್ಲ ಎಂಬುದು ಕೈ ನಾಯಕರೊಬ್ಬರ ಅಭಿಪ್ರಾಯ. ಸರ್ವೆ ತಂಡದ ಪ್ರತಿನಿಧಿ ಕೂಡ ಇದೇ ವಾದವನ್ನು ವಿಜಯವಾಣಿ ಮುಂದಿಟ್ಟಿದ್ದಾರೆ.

ಪುರುಷರಿಗೇಕೆ ಸಿಟ್ಟು?

1. ಮದ್ಯದ ದರ ಏರಿಸಿ ಗೃಹಲಕ್ಷ್ಮಿ ಯೋಜನೆಗೆ ಹಣ

2. ನಮ್ಮಿಂದ ಕಸಿದು ಹೆಂಗಸರಿಗೆ ಕೊಟ್ಟರೇನು ಲಾಭ?

3. ಶಕ್ತಿ ಯೋಜನೆಯಿಂದಾಗಿ ವಾಹನ ಬಾಡಿಗೆ ನಷ್ಟ

4. ವಾಹನ ಸಾಲ ತೀರಿಸುವುದಕ್ಕೂ ಹಣ ಸಿಗುತ್ತಿಲ್ಲ

5. ಮನೆ ಬಾಡಿಗೆ ಕಟ್ಟುವುದಕ್ಕೂ ಕಷ್ಟವಾಗಿದೆ ಬದುಕು

6. ಸರ್ಕಾರಕ್ಕೆ ಆಟೋ, ಕ್ಯಾಬ್ ಚಾಲಕರ ಹಿಡಿಶಾಪ

ಸರ್ವೆ ಸಲಹೆ ಏನು?

1. ಕೆಲವೆಡೆ ಗ್ಯಾರಂಟಿ ಲಾಭ ಸರಿಯಾಗಿ ಮುಟ್ಟಿಲ್ಲ

2. ಕೂಡಲೇ ಅಡ್ಡ ಪರಿಣಾಮಕ್ಕೆ ಪರಿಹಾರ ಆಗಲಿ

3. ಬಿಜೆಪಿಗೂ ಚುನಾವಣೆ ಹೂವಿನ ಹಾಸಿಗೆಯಲ್ಲ

4. ಕಳೆದ ಬಾರಿ ಗಳಿಸಿದಷ್ಟು ಸ್ಥಾನ ಸಿಗುವುದು ಕಷ್ಟ

5. ಕಾಂಗ್ರೆಸ್ ಸರ್ಕಾರ ಇರುವುದರಿಂದ ಸ್ಥಾನ ಹೆಚ್ಚಳ