ನವದೆಹಲಿ: ಕರೊನಾ ವೈರಾಣುವಿನ ರುದ್ರ ನರ್ತನಕ್ಕೆ ರಷ್ಯನ್ನರು ತತ್ತರಿಸಿದ್ದಾರೆ. ಆರಂಭಿಕ ಹಂತದಲ್ಲಿ ರಷ್ಯಾದಲ್ಲಿ ದೊಡ್ಡ ಪ್ರಮಾಣದಲ್ಲಿ ವೈರಾಣುವಿನ ಹರಡುವಿಕೆ ಕಂಡುಬಂದಿರಲಿಲ್ಲ. ಆದರೆ ಏಪ್ರಿಲ್ 20ರ ನಂತರ ಕರೊನಾ ಕೇಸುಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಸರ್ಕಾರ ಮಹಾಮಾರಿಯನ್ನು ಅಲಕ್ಷಿಸಿದ್ದೇ ಇದಕ್ಕೆ ಕಾರಣವಾಯ್ತೇ ಎಂಬ ಚರ್ಚೆ ಕೇಳಿಬರುತ್ತಿದೆ.
ಅಮೆರಿಕ ನಂತರ ಈಗ ರಷ್ಯಾದಲ್ಲೇ ಅತಿ ಹೆಚ್ಚು ಕರೊನಾ ಕೇಸುಗಳು ದಾಖಲಾಗಿದೆ. ಈವರೆಗೆ ಅಧಿಕೃತಗೊಂಡಿರುವ 281752 ಕರೊನಾ ಪ್ರಕರಣಗಳಲ್ಲಿ 2631 ಮಂದಿ ಮೃತಪಟ್ಟಿದ್ದರೆ, 67373 ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ. 211748 ಮಂದಿ ಚಿಕಿತ್ಸೆ ಮುಂದುವರಿದಿದೆ. ಅಮೆರಿಕ, ಇಟಲಿ ಅಥವಾ ಸ್ಪೇನ್ನಂತೆ ರಷ್ಯಾದಲ್ಲಿ ಕರೊನಾ ಮರಣ ಪ್ರಮಾಣ ಕಡಿಮೆ ಏಕೆ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದ್ದು, ಜಾಗತಿಕ ಮಾಧ್ಯಮಗಳೂ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದೆ. ಅಮೆರಿಕದಲ್ಲಿ ಕರೊನಾ ಸಾವಿನ ಪ್ರಮಾಣ ಶೇ.6 ಮತ್ತು ಬ್ರಿಟನ್ ನಲ್ಲಿ ಶೇ.14.4ರಷ್ಟಿದ್ದರೆ, ರಷ್ಯಾದಲ್ಲಿ ಮಾತ್ರ ಇದು ಕೇವಲ 0.9ರಷ್ಟಿರಲು ಕಾರಣವೇನು ಎಂಬುದು ಅನೇಕರ ಪ್ರಶ್ನೆ.
ಇದನ್ನೂ ಓದಿ: ಶ್ರಮಿಕ ವಿಶೇಷ ರೈಲಿನಲ್ಲಿ ಬಳ್ಳಾರಿಯಿಂದ ಉತ್ತರ ಪ್ರದೇಶಕ್ಕೆ ವಲಸಿಗರ ಪ್ರಯಾಣ, ಜಿಲ್ಲಾಮಟ್ಟದ ಅಧಿಕಾರಿಗಳಿಂದ ಬೀಳ್ಕೊಡುಗೆ
ಒಂದು ವರದಿಯ ಪ್ರಕಾರ, ರಷ್ಯಾ ಸರ್ಕಾರ ವೈದ್ಯಾಧಿಕಾರಿಗಳ ಮೇಲೆ ಒತ್ತಡ ಹೇರಿ ಶೇ. 60ರಷ್ಟು ಶಂಕಿತ ಕರೊನಾ ಸಾವುಗಳನ್ನು ಹೃದಯಾಘಾತ, ನಾಲ್ಕನೇ ಹಂತದ ಕ್ಯಾನ್ಸರ್ ಹಾಗೂ ಮತ್ತಿತರ ಗುಣಪಡಿಸಲಾಗದ ಕಾಯಿಲೆಗಳ ಪಟ್ಟಿಗೆ ಸೇರಿಸಿದೆ ಎಂದು ವಾದಿಸಲಾಗುತ್ತಿದೆ. ಕರೊನಾ ಹೋರಾಟದಲ್ಲಿ ರಷ್ಯಾ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲೆಂದೇ ಈ ತಂತ್ರ ಅನುಸರಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಸೋಂಕಿತರನ್ನು ನಾವು ಶೀಘ್ರದಲ್ಲಿ ಪತ್ತೆಹಚ್ಚಿದೆವು ಮತ್ತು ಸಣ್ಣಪುಟ್ಟ ರೋಗಗಳ ಲಕ್ಷಣಗಳಿದ್ದರೂ ರಷ್ಯನ್ನರು ತಕ್ಷಣವೇ ಆರೋಗ್ಯಾಧಿಕಾರಿಗಳನ್ನು ಸಂರ್ಪಸುವ ಮನಸ್ಥಿತಿ ಹೊಂದಿದವರಾಗಿದ್ದಾರೆ ಎನ್ನುವುದು ರಷ್ಯಾ ಆರೋಗ್ಯ ಇಲಾಖೆ ಸಮರ್ಥನೆ.
ರಷ್ಯಾ ರಾಜಧಾನಿ ಮಾಸ್ಕೋ ಅತ್ಯಧಿಕ ಕರೊನಾ ಕೇಸುಗಳಿಗೆ ಸಾಕ್ಷಿಯಾಗಿದ್ದು, ದೇಶದ ಅರ್ಧಕ್ಕರ್ಧ ಕರೊನಾ ಸೋಂಕಿತರು ಈ ನಗರದಲ್ಲೇ ಇದ್ದಾರೆ. ಆದರೆ, ಈಚಿನ ದಿನಗಳಲ್ಲಿ ರಾಜಧಾನಿಯಾಚೆಗೂ ವೈರಾಣು ಹಬ್ಬುತ್ತಿದ್ದು, ದೇಶದ ನಾಲ್ಕೂ ದಿಕ್ಕುಗಳಿಗೆ ವ್ಯಾಪಿಸಿಕೊಂಡಿದೆ. ಹಾಗಿದ್ದರೂ, ಪುತಿನ್ ಹಲವು ಬಾರಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ವಾದಿಸಿದ್ದರು. ಮೇಲಾಗಿ, ಮುಂಚೂಣಿಯಲ್ಲಿ ನಿಂತು ಕರೊನಾ ವಿರುದ್ಧ ಹೋರಾಟ ನಡೆಸುವ ಬದಲು ಮಾರ್ಚ್ ನಲ್ಲಿ ಮಾಸ್ಕೋದಿಂದ ದೂರದಲ್ಲಿರುವ ನಿವಾಸದಲ್ಲಿ ಉಳಿದುಕೊಳ್ಳಲು ನಿರ್ಧರಿಸಿದ ಅವರು, ಸ್ಥಳೀಯ ಗವರ್ನರ್ ಗಳಿಗೆ ಹೆಚ್ಚು ಜವಾಬ್ದಾರಿಗಳನ್ನು ನೀಡಿದರು. ರಷ್ಯಾದ ಕೇಂದ್ರೀಕೃತ ರಾಜಕೀಯ ವ್ಯವಸ್ಥೆಯಲ್ಲಿ ನಿಜಕ್ಕೂ ಇದೊಂದು ವಿಚಿತ್ರ ಬೆಳವಣಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಏತನ್ಮಧ್ಯೆ, ಮೇ 11ರಂದು ಅಧ್ಯಕ್ಷ ಪುಟಿನ್ ಲಾಕ್ ಡೌನ್ ಸಡಿಲಗೊಳಿಸುವ ಘೊಷಣೆ ಮಾಡಿದ್ದರು. ವಿಪರ್ಯಾಸ ಎಂದರೆ ಅದೇ ದಿನ ದೇಶದಲ್ಲಿ 11000 ಕರೊನಾ ಕೇಸುಗಳು ದೃಢವಾಗಿದ್ದವು! ಲಾಕ್ಡೌನ್ ಸಡಿಲಗೊಳಿಸಿದರೂ, ಕಠಿಣ ಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳೇ ನಿರ್ಣಾಯಕ ಪಾತ್ರವಹಿಸಬೇಕು ಮತ್ತು ಆ ಮೂಲಕ ಆರ್ಥಿಕ ಚಟುವಟಿಕೆಗಳ ಪುನರಾರಂಭಕ್ಕೆ ಸಹಕರಿಸಬೇಕು ಎಂದು ಅಧ್ಯಕ್ಷರು ಹೇಳಿದ್ದಾರೆ.
ಏಪ್ರಿಲ್ 30ರಂದು ರಷ್ಯಾ ಪ್ರಧಾನಿ ಮಿಖೈಲ್ ಮಿಶುಸ್ತಿನ್ ಅವರಲ್ಲಿ ಕರೊನಾ ವೈರಾಣು ಇರುವುದು ದೃಢವಾಗಿತ್ತು. ಇದರಿಂದಾಗಿ ಹಾಲಿ ಪ್ರಧಾನಿ ಗುಣಮುಖರಾಗುವ ತನಕ ಉಪ ಪ್ರಧಾನಿ ಆಂಡ್ರಿ ಬಿಲೊಸೊವ್ ಅವರನ್ನು ತಾತ್ಕಾಲಿಕ ಪ್ರಧಾನಿಯನ್ನಾಗಿ ರಷ್ಯಾ ಅಧ್ಯಕ್ಷ ಪುಟಿನ್ ಅವರು ನೇಮಕ ಮಾಡಿದರು. ಮೇ 1ರಂದು ವಸತಿ, ಕಾಮಗಾರಿ ಸಚಿವ ವ್ಲಾಡಿಮಿರ್ ಯಕುಶೆವ್ ಮತ್ತು ಸಹ ಸಚಿವ ಡಿಮಿಟ್ರಿ ವೊಲ್ಕೊವ್, ಮೇ 6ರಂದು ಸಂಸ್ಕೃತಿ ಸಚಿವರಾದ ಒಲ್ಗಾ ಲ್ಯುಂಬಿಮೊವಾ, ಮೇ 14ರಂದು ಶಿಕ್ಷಣ ಸಚಿವ ವಲೆರಿ ಫಲ್ಕೊವ್ ಅವರಿಗೂ ಕರೊನಾ ಸೋಂಕು ತಗುಲಿತು.
ಕರೊನಾ ಬಿಕ್ಕಟ್ಟು ಅಧ್ಯಕ್ಷ ಪುಟಿನ್ ಮೇಲೆ ಇನ್ನಿಲ್ಲದ ಒತ್ತಡ ತಂದಿಟ್ಟಿದೆ. ಆರಂಭಿಕ ಹಂತದಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದುದು ಮತ್ತು ವೈರಾಣುವಿನ ಗಂಭೀರತೆ ಅರಿಯದ್ದರ ಪರಿಣಾಮವೇ ಕರೊನಾ ಕೇಸುಗಳು ವಿಪರೀತ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಆರೋಪಿಸಲಾಗಿದೆ. ಸರ್ಕಾರ ಹಾಗೂ ಅಧ್ಯಕ್ಷರ ಆಡಳಿತದ ಬಗ್ಗೆ ದೇಶದ ಹಲವೆಡೆ ಜನರು ತಮ್ಮ ಅಸಮಾಧಾನ, ಹತಾಶೆ ಹೊರಹಾಕುತ್ತಿದ್ದು, ಆರ್ಥಿಕತೆ ಹಾಗೂ ಉದ್ಯಮಗಳ ರಕ್ಷಣೆಗೂ ಪರಿಣಾಮಕಾರಿ ಕ್ರಮಗಳನ್ನು ಘೊಷಿಸಿಲ್ಲ ಎಂದು ದೂರಲಾಗುತ್ತಿದೆ. ಏಪ್ರಿಲ್ ತಿಂಗಳಾಂತ್ಯದಲ್ಲಿ ವ್ಲಾಡಿಕವ್ಕಾಜ್ ನಗರದಲ್ಲಿ ನೂರಾರು ಮಂದಿ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿರುವುದಲ್ಲದೆ, ತಮ್ಮ ಭವಿಷ್ಯದ ಬಗ್ಗೆಯೂ ಚಿಂತಿತರಾಗಿದ್ದಾರೆ. ಆದರೆ, ಜನರ ರಕ್ಷಣೆಗೆ ಸರ್ಕಾರದಲ್ಲಿ ಯಾವುದೇ ಸಮರ್ಪಕ ಯೋಜನೆಗಳಿಲ್ಲ. ನಿರುದ್ಯೋಗಿಗಳಿಗೆ ಅನುದಾನ ನೀಡಿದರೂ ಅದು ಶಾಶ್ವತ ಪರಿಹಾರ ಆಗುವುದೇ ಎಂದು ಯುವಕರು ಪ್ರಶ್ನಿಸಿದ್ದಾರೆ. ಪುಟಿನ್ ಕಾರ್ಯನಿರ್ವಹಣೆ ಬಗ್ಗೆ ಏಪ್ರಿಲ್ನಲ್ಲಿ ಲವಾಡಾ ಸೆಂಟರ್ ಎಂಬ ಸ್ವತಂತ್ರ ಸಂಸ್ಥೆ ನಡೆಸಿದ್ದ ಸಮೀಕ್ಷೆ ಪ್ರಕಾರ, ಫೆಬ್ರವರಿಯಲ್ಲಿ ಪುಟಿನ್ ಬೆಂಬಲಿಸಿ ಶೇ.69ರಷ್ಟು ಮತಗಳು ದಾಖಲಾಗಿದ್ದವು. ಆದರೆ ಕರೊನಾ ನಿರ್ವಹಣೆ ವೈಫಲ್ಯದಿಂದಾಗಿ ಇದೇ ಪ್ರಮಾಣ ಮೇ 6ಕ್ಕೆ ಶೇ.59ಕ್ಕೆ ಇಳಿಕೆಯಾಗಿದೆ.
ಇದನ್ನೂ ಓದಿ: ಅಮ್ಮನ ಬಳಿ ಹೋಗುವಂತಿಲ್ಲ, ಅಪ್ಪ ಯಾರು ಗೊತ್ತೇ ಇಲ್ಲ- ತಾಯಿಯ ಸ್ಪರ್ಶಕ್ಕೆ ಕಾದಿವೆ ಸಾವಿರಾರು ಕಂದಮ್ಮಗಳು…
ರಷ್ಯಾದಲ್ಲಿ ಮೊದಲ ಕೇಸು ಕಂಡುಬಂದಿದ್ದು ಜನವರಿ 31ರಂದು. ಟ್ಯುಮೆನ್ನಲ್ಲಿ ಇಬ್ಬರು ಚೀನಾ ಮೂಲದ ವ್ಯಕ್ತಿಗಳಿಗೆ ಸೋಂಕು ದೃಢವಾಗುತ್ತಿದ್ದಂತೆಯೇ ಸುರಕ್ಷತಾ ಕ್ರಮಗಳನ್ನಯ ಕೈಗೊಂಡಿದ್ದ ಸರ್ಕಾರ, ಚೀನಾ ಗಡಿಗಳನ್ನೂ ಮುಚ್ಚಲು ಆದೇಶಿಸಿತ್ತು. ಮಾರ್ಚ್ ಆರಂಭದಲ್ಲಿ ಇಟಲಿ ವ್ಯಕ್ತಿಗಳ ಸಂಪರ್ಕದಿಂದಾಗಿ ರಷ್ಯನ್ನರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಾ ಸಾಗಿತು. ಮಾರ್ಚ್ ಅಂತ್ಯಕ್ಕೆ ದೇಶಾದ್ಯಂತ ಲಾಕ್ ಡೌನ್ ಘೊಷಿಸಲಾಯಿತು ಮತ್ತು ಏಪ್ರಿಲ್ ಮಧ್ಯಾವಧಿ ವೇಳೆ ರಷ್ಯಾದ ಬಹುತೇಕ ಭಾಗಗಳಲ್ಲಿ ಕರೊನಾ ಸೋಂಕಿತ ಕೇಸುಗಳು ಕಂಡುಬರಲು ಶುರುವಾಗಿತ್ತು. ಏಪ್ರಿಲ್ 27ಕ್ಕೆ ರಷ್ಯಾದ ಕರೊನಾ ಸೋಂಕಿತರ ಸಂಖ್ಯೆ ಚೀನಾವನ್ನೂ ಮೀರಿಸಿತು.
ಜಾಗತಿಕವಾಗಿ ಕರೊನಾ ಸೋಂಕಿಗೆ ಒಳಗಾದವರ ಪ್ರಮಾಣ ಕೆಲವೇ ದಿನಗಳಲ್ಲಿ 50 ಲಕ್ಷದ ಗಡಿ ದಾಟುವ ಸಾಧ್ಯತೆ ಇದೆ. ಈಗಾಗಲೇ 47 ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಪ್ರತಿದಿನ ಸುಮಾರು 90 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಮೂರು ದಿನಗಳಲ್ಲಿ ಸೋಂಕಿತರ ಪ್ರಮಾಣ 50 ಲಕ್ಷಕ್ಕಿಂತ ಹೆಚ್ಚಾಗಲಿದೆ. ಅಮೆರಿಕವೊಂದರಲ್ಲೇ 15 ಲಕ್ಷಕ್ಕೂ ಅಧಿಕ ಸೋಂಕಿತರಿದ್ದು, ಇಟಲಿ, ಬ್ರೆಜಿಲ್, ಸ್ಪೇನ್, ರಷ್ಯಾ ಹಾಗೂ ಬ್ರಿಟನ್ನಲ್ಲಿ ತಲಾ 2 ಲಕ್ಷ, ಫ್ರಾನ್ಸ್, ಜರ್ಮನಿ, ಟರ್ಕಿ ಹಾಗೂ ಇರಾನ್ನಲ್ಲಿ ತಲಾ 1 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ. ವಿಶ್ವಾದ್ಯಂತ ಈವರೆಗೆ 18 ಲಕ್ಷಕ್ಕೂ ಅಧಿಕ ರೋಗಿಗಳು ಗುಣಮುಖರಾಗಿದ್ದು, ಇನ್ನೂ 26 ಲಕ್ಷ ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 44 ಸಾವಿರಕ್ಕೂ ಅಧಿಕ ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ.