ಪಹಲ್ಗಾಮ್ ಭಯೋತ್ಪಾದಕ ಹತ್ಯಾಕಾಂಡ ಘಟಿಸಿದಾಗ (ಏಪ್ರಿಲ್ 22) ಭಾರತದ ಪರವಾಗಿ ಬಂದ ಮೊದಲ ದನಿ ಅಮೆರಿಕಾದ್ದಾಗಿತ್ತು. ಸೌದಿ ಅರೇಬಿಯಾದ ಜೆಡ್ಡಾದಲ್ಲಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆ ಸಂಜೆಯೇ ಅಲ್ಲಿಗೇ ಕರೆಮಾಡಿ ಸಂತಾಪ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಸೌದಿ ಪ್ರಧಾನಿ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ಅವರ ಜತೆಗೆ ನಿಗದಿಯಾಗಿದ್ದ ಉಭಯ ದೇಶಗಳ ನಡುವಿನ ಸಾಮರಿಕ ಸಹಯೋಗದ ಕುರಿತಾದ ಮಹತ್ವದ ಮಾತುಕತೆಗಳನ್ನು ರದ್ದುಪಡಿಸಿ ಸ್ವದೇಶಕ್ಕೆ ಹಿಂತಿರುಗಿದ ಮೇಲೂ ಅವರೊಂದಿಗೆ ಅಧ್ಯಕ್ಷ ಟ್ರಂಪ್ ಸಂಪರ್ಕ ಮುಂದುವರಿಸಿದರು. ಏಪ್ರಿಲ್ 24ರ ಬೆಳಗ್ಗೆಯೂ ಅವರಿಬ್ಬರ ನಡುವೆ ಮಾತುಕತೆ ನಡೆಯಿತು ಮತ್ತು ತನ್ನ ಸುರಕ್ಷೆಗೆ ಅಗತ್ಯವಾದ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಭಾರತ ಸ್ವತಂತ್ರವಾಗಿದೆ ಹಾಗೂ ಅದಕ್ಕೆ ತಮ್ಮ ಬೆಂಬಲ ಇರುತ್ತದೆ ಎಂಬ ಆಶ್ವಾಸನೆ ಅಮೆರಿಕಾದ ಅಧ್ಯಕ್ಷರಿಂದ ಬಂತು. ಆರು ವರ್ಷಗಳ ಹಿಂದೆ ಪುಲ್ವಾಮಾ ಭಯೋತ್ಪಾದಕ ಹತ್ಯಾಕಾಂಡವಾದಾಗಲೂ ಟ್ರಂಪ್ ಶ್ವೇತಭವನದಲ್ಲಿದ್ದವರು ಮತ್ತು ಆಗಲೂ ಅವರ ನಿಲುವು ಹೀಗೇ ಇತ್ತು ಎನ್ನವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಮೇ 6-7ರ ರಾತ್ರಿ ಭಾರತ ‘ಆಪರೇಷನ್ ಸಿಂಧೂರ’ ಆರಂಭಿಸಿತು. ಮೇ 8ರಂದು ಆ ಬಗ್ಗೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಉಪಖಂಡದಲ್ಲಿನ ಬೆಳವಣಿಗೆಗಳ ಬಗೆಗೂ ಅಮೆರಿಕಾಗೂ ಸಂಬಂಧವಿಲ್ಲ ಎಂಬರ್ಥದ ಮಾತುಗಳನ್ನಾಡಿದರು. ಅದೇ ಸಮಯದಲ್ಲಿ ಭಾರತದ ವಿದೇಶಾಂಗ ಮಂತ್ರಿ ಎಸ್. ಜೈಶಂಕರ್ ಅವರ ಜತೆ ಮಾತಾಡಿದ ವಿದೇಶಾಂಗ ಕಾರ್ಯದರ್ಶಿ ಮಾಕೋ ರೂಬಿಯೋ ಭಾರತದ ಕ್ರಮದ ಬಗ್ಗೆ ಅಪಸ್ವರವೆತ್ತಲಿಲ್ಲ. ಭಾರತ-ಪಾಕಿಸ್ತಾನಗಳ ನಡುವಿನ ಸಂಘರ್ಷ ಏಷ್ಯಾದಲ್ಲಿ ಒಂದು ಪ್ರಾದೇಶಿಕ ಸಮರವಾಗದಂತೆ ಅಂದರೆ ಇತರ ದೇಶಗಳು ಸೇರದಂತೆ ನೋಡಿಕೊಳ್ಳಬೇಕು ಎನ್ನುವುದು ಅವರ ಸಲಹೆಯಾಗಿತ್ತು. ಟರ್ಕಿ ಮತ್ತು ಚೀನಾ ಬಹಿರಂಗವಾಗಿ ಪಾಕಿಸ್ತಾನದ ಪರವಾಗಿ ನಿಂತ ಹಿನ್ನೆಲೆಯಲ್ಲಿ ರೂಬಿಯೋ ಅವರ ಕಾಳಜಿ ಅರ್ಥಪೂರ್ಣವೇ ಆಗಿತ್ತು.
ನಿಜವೋ ಸುಳ್ಳೋ, ಒಂದು ವರದಿಯ ಪ್ರಕಾರ ಮೇ 9ರ ಬೆಳಗ್ಗೆ ಉಪಾಧ್ಯಕ್ಷ ವ್ಯಾನ್ಸ್ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂರ್ಪಸಿ, ಆ ರಾತ್ರಿ ಪಾಕಿಸ್ತಾನ ಬಹುದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸುವುದಾಗಿ ಹೇಳಿದರಂತೆ, ‘ನಾವು ತಯಾರಾಗಿದ್ದೇವೆ’ ಎಂದು ಮೋದಿ ಉತ್ತರಿಸಿದರಂತೆ. ಆಪರೇಷನ್ ಸಿಂಧೂರದ ಹಿಂದೆ ಮತ್ತು ಮುಂದೆ ನವದೆಹಲಿ ಹಾಗೂ ಇತರ ಪ್ರಮುಖ ಜಾಗತಿಕ ರಾಜಧಾನಿಗಳ ನಡುವೆ ಏನೇನು ಮಾತು ನಡೆಯಿತೆಂಬ ಬಗ್ಗೆ, ಅಷ್ಟೇಕೆ ಮೇ 6-7ರ ರಾತ್ರಿಯಿಂದ ಮೇ 10ರ ಸಂಜೆಯವರೆಗೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆದದ್ದೆಲ್ಲದರ ಬಗ್ಗೆ ವಿವರಗಳು ಕಂತಿನಲ್ಲಿ ಹೊರಬರುತ್ತಿವೆ. ಅವು ಪೂರ್ಣವಾಗಿ ಹೊರಬರುತ್ತವೆ ಎಂದೂ ಹೇಳಲಾಗುವುದಿಲ್ಲ. ಆದಾಗ್ಯೂ, ಮೇ 9ರ ಬೆಳಗ್ಗೆ ಉಪಾಧ್ಯಕ್ಷ ವ್ಯಾನ್ಸ್ ಮತ್ತು ಪ್ರಧಾನಿ ಮೋದಿ ನಡುವೆ ನಡೆಯಿತೆನ್ನಲಾದ ದೂರವಾಣಿ ಸಂಭಾಷಣೆಯ ಕುರಿತಾದ ‘ವರದಿ’ ನಿಜವಿರಬಹುದು ಎಂದು ಊಹಿಸಲು ಕನಿಷ್ಠ ಎರಡು ಆಧಾರಗಳಿವೆ. ಒಂದು- ಆ ಸಂಭಾಷಣೆ ಕನಿಷ್ಠ ಏಪ್ರಿಲ್ 22ರ ಸಂಜೆಯಿಂದ ಅಮೆರಿಕಾ ಮತ್ತು ಭಾರತದ ಉಚ್ಚ ನಾಯಕತ್ವದ ನಡುವಿನ ಮಾತುಕತೆ ಮತ್ತು ವಿಚಾರವಿನಿಮಯಕ್ಕೆ ಅನುಗುಣವಾಗಿಯೇ ಇದೆ, ಎರಡು- ಮೇ 9ರ ರಾತ್ರಿಯೇ ಪಾಕಿಸ್ತಾನ ದೆಹಲಿಯನ್ನು ಗುರಿಯಾಗಿಸಿಕೊಂಡು ತನ್ನ ದೂರಗಾಮಿ ಕ್ಷಿಪಣಿ ಫತೇ1 ಅಥವಾ ಶಾಹೀನ್ ಅನ್ನು ಹಾರಿಸಿತು! ಇದರರ್ಥ ಭಾರತಕ್ಕೆ ಹಾನಿಯೆಸಗಬಹುದಾದ ಪಾಕಿಸ್ತಾನಿ ನಡೆಗಳ ಬಗ್ಗೆ ಅಮೆರಿಕಾಗೆ ತಿಳಿಯುತ್ತಿತ್ತು ಮತ್ತು ಆ ಮಾಹಿತಿಯನ್ನು ಅಮೆರಿಕಾದ ರಾಜಕೀಯ ನಾಯಕತ್ವ ಭಾರತದ ರಾಜಕೀಯ ನಾಯಕತ್ವದ ಜತೆ ಹಂಚಿಕೊಳ್ಳುತ್ತಿತ್ತು. ಅಂದರೆ ಭಾರತದ ಬಗ್ಗೆ ಅಮೆರಿಕಾಗೆ ಕಾಳಜಿ ಇತ್ತು ಎಂದರ್ಥ. ಆ ‘ಕಾಳಜಿ’ಯನ್ನು ಭಾರತದ ಮಾಧ್ಯಮಗಳು ಮುಕ್ತಕಂಠದಿಂದ ದಿನದ ಇಪ್ಪತ್ತನಾಲ್ಕು ತಾಸುಗಳೂ ಶ್ಲಾಘಿಸುತ್ತಿದ್ದುದನ್ನು ನಾವೆಲ್ಲ ಕಿವಿ ತೂತಾಗುವಷ್ಟು ಕೇಳಿಯೇ ಇದ್ದೇವೆ.
ಆದರೆ ಇದೆಲ್ಲವೂ ಮೇ 10ರ ಸಂಜೆ ಏಕಾಏಕಿ ನಿಂತುಹೋಯಿತು! ಭಾರತದ ‘ನ್ಯಾಷನಲಿಸ್ಟ್’ ಮಾಧ್ಯಮಗಳು ಮತ್ತು ಪತ್ರಕರ್ತರು ಅಮೆರಿಕಾವನ್ನೂ, ಅದರ ಅಧ್ಯಕ್ಷರನ್ನೂ ವಾಚಾಮಗೋಚರ ಬೈಯತೊಡಗಿದರು! ಅವರ ಮಾತುಗಳನ್ನು ಕೇಳಿದ ಅಮಾಯಕ ಭಾರತೀಯ ವೀಕ್ಷಕ ಟ್ರಂಪ್ ಬಗೆಗಷ್ಟೇ ಅಲ್ಲ ಮೋದಿಯವರ ಬಗೆಗೂ ಬೇಸರ, ನಿರಾಸೆ ತಾಳಿದ. ಹಾಗಿದ್ದರೆ ಮೇ 9ರ ಬೆಳಗಿನಿಂದ ಮೇ 10ರ ಸಂಜೆಯ ಒಳಗೆ ಆದದ್ದಾದರೂ ಏನು?
ನಮಗೆ ‘ಸದ್ಯಕ್ಕೆ’ ಲಭ್ಯವಿರುವ ಮಾಹಿತಿಗಳ ಪ್ರಕಾರ ಮೇ 10ರ ರಾತ್ರಿ ಪಾಕಿಸ್ತಾನ ದೆಹಲಿಯತ್ತ ಉಡಾಯಿಸಿದ ಕ್ಷಿಪಣಿಯನ್ನು ಹರಿಯಾಣದ ಸಿರ್ಸಾ ಬಳಿ ನಮ್ಮ ಆಕಾಶ್ ತೀರ್ ವಾಯು ಸುರಕ್ಷಾ ವ್ಯವಸ್ಥೆ ಅಡ್ಡಗಟ್ಟಿ ಹೊಡೆದು ನೆಲಕ್ಕುರುಳಿಸಿತು. ಆ ಕ್ಷಿಪಣಿ ವಾಸ್ತವವಾಗಿ ದೆಹಲಿಯನ್ನು ತಲುಪಬಲ್ಲುದೇ ಎಂದು ಪಾಕಿಸ್ತಾನ ಪರೀಕ್ಷಿಸುವ ಪ್ರಯತ್ನವಾಗಿತ್ತು, ಅದರಲ್ಲೇನೂ ಮಾರಕಾಸ್ತ್ರವಿರಲಿಲ್ಲ ಎಂದು ವರದಿ. ಅದೂ ನಿಜವಿರಬಹುದೆಂಬ ಸಾಧ್ಯತೆಯಿದೆ. ಪಾಕಿಸ್ತಾನದ ಮುಂದಿನ ನಡೆಯ ಸುಳಿವು ಪಡೆದ ಭಾರತ ತೀವ್ರ ಕ್ರಮಕ್ಕೆ ಮುಂದಾದದ್ದನ್ನು ಜಗತ್ತೇ ನೋಡಿದೆ. ತಾನು ತನ್ನ ದಾಳಿಗೆ ಅದುವರೆಗೂ ಪಾಕಿಸ್ತಾನದ ರಾಜಧಾನಿ ಅಥವಾ ಇನ್ನಾವುದೇ ಜನನಿಬಿಡ ನಗರವನ್ನು ಗುರಿಯಾಗಿಸಿಕೊಳ್ಳದ ಸಂಯಮವನ್ನು ತೋರಿದ್ದರೂ ತನ್ನ ರಾಜಧಾನಿಯ ಮೇಲೆ ದಾಳಿಯೆಸಗುವ ದುಷ್ಟತನಕ್ಕೆ ಆ ವೈರಿರಾಷ್ಟ್ರ ಹೊರಟದ್ದರ ಬಗ್ಗೆ ಭಾರತಕ್ಕೆ ಉಕ್ಕಿದ ರೋಷ ಅರ್ಥವಾಗುವಂತಹದೇ. ಒಡನೆಯೇ ಕಾರ್ಯಪ್ರವೃತ್ತವಾದ ಭಾರತೀಯ ವಾಯುಪಡೆ ಪಾಕಿಸ್ತಾನದಲ್ಲಿನ ಹತ್ತು ಮತ್ತು ಅದು ಆಕ್ರಮಿಸಿಕೊಂಡಿದ್ದ ಕಾಶ್ಮೀರದಲ್ಲಿನ ಒಂದು ವಾಯುನೆಲೆಯ ಮೇಲೆ ದಾಳಿಯೆಸಗಿ ಅವು ಕಾರ್ಯಾಚರಣೆಗೆ ನಿರುಪಯುಕ್ತ ಮಾಡಿದ್ದಲ್ಲದೆ, ಅವುಗಳಲ್ಲಿದ್ದ ಕ್ಷಿಪಣಿ ಉಡಾವಣಾ ವ್ಯವಸ್ಥೆ ಹಾಗೂ ಡ್ರೋನ್ ನಿಯಂತ್ರಣ ವ್ಯವಸ್ಥೆಗಳನ್ನು ನಾಶಮಾಡಿತು. ಅಂದರೆ ಪಾಕಿಸ್ತಾನ ತನ್ನ ಹೋರಾಟದ ಸಾಮರ್ಥ್ಯವನ್ನು ಕಳೆದುಕೊಂಡಿತು. ಬ್ರಹ್ಮೋಸ್ ಕ್ಷಿಪಣಿಗಳು ಎಸಗಿದ ಆ ಘಾತಕ ಹೊಡೆತಕ್ಕೆ ಪ್ರತಿಕ್ರಿಯಿಸಲು ತಮಗೆ ಆಗಲಿಲ್ಲ ಎಂದು ಎರಡು ವಾರಗಳ ನಂತರ ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್ ಅಜರ್ಬೈಜಾನ್ನಲ್ಲಿ ಕಣ್ಣುಮುಚ್ಚಿಕೊಂಡು ಬಿಡುತ್ತಿದ್ದ ಬುರುಡೆಗಳ ನಡುವೇ ಬಾಯಿತಪ್ಪಿ ಹೇಳಿಯೂಬಿಟ್ಟರು.
ಪಾಕಿಸ್ತಾನಿ ವಾಯುದಳವನ್ನು ಭಾರತೀಯ ವಾಯುಪಡೆ ಹೀಗೆ ಹಣ್ಣುಗಾಯಿ ನೀರುಗಾಯಿ ಮಾಡಿ ಉರುಳಿಸಿದ ಹನ್ನೆರಡು ತಾಸುಗಳಲ್ಲಿ ಅಧ್ಯಕ್ಷ ಟ್ರಂಪ್ ಭಾರತ ಮತ್ತು ಪಾಕಿಸ್ತಾನಗಳ ನಡುವೆ ತಾವು ಮಧ್ಯವರ್ತಿಯಾಗಿ ನಿಂತು ಕದನವಿರಾಮವನ್ನು ಸಾಧಿಸಿರುವುದಾಗಿಯೂ, ಆ ಮೂಲಕ ಲಕ್ಷಾಂತರ ಜನರು ಅಣುಪ್ರಕೋಪಕ್ಕೆ ಬಲಿಯಾಗುವುದನ್ನು ತಡೆದುದಾಗಿಯೂ ತಮ್ಮದೇ ಮೈಕ್ರೋ ಬ್ಲಾಗ್ ‘ಟ್ರೂಥ್’ ಸೋಷಿಯಲ್ನಲ್ಲಿ ಸಾರಿದರು. ಆಮೇಲೆ ಭಾರತ ಸರ್ಕಾರವೂ ತಾನು ‘ಆಪರೇಷನ್ ಸಿಂಧೂರ’ವನ್ನು ತಾತ್ಕಾಲಿಕವಾಗಿ ನಿಲುಗಡೆಗೆ ತಂದಿರುವುದಾಗಿ ಘೊಷಿಸಿತು. ಇನ್ನೊಂದೆರಡು ಹೊಡೆತಗಳಿಗೆ ಪೂರ್ಣವಾಗಿ ಕುಸಿದುಹೋಗಬಹುದಾಗಿದ್ದ ಪಾಕಿಸ್ತಾನಕ್ಕೆ ಟ್ರಂಪ್ರಿಂದಾಗಿ ಜೀವದಾನ ಸಿಕ್ಕಿತೆಂದೂ, ಅಮೆರಿಕಾದ ಅಧ್ಯಕ್ಷರ ಮಾತು ಕೇಳಿ ಪ್ರಧಾನಿ ಮೋದಿ ವೈರಿಯನ್ನು ನಾಶಮಾಡುವ ಸುವರ್ಣಾವಕಾಶವನ್ನು ಕಳೆದುಕೊಂಡರೆಂದೂ ಭಾರತದಲ್ಲಿ ಕೂಗೆದ್ದಿತು. ಅದೇ ಸಮಯದಲ್ಲಿ ಪಾಕಿಸ್ತಾನಕ್ಕೆ ಎರಡು ಕಂತುಗಳಲ್ಲಿ ಒಟ್ಟು 2.3 ಬಿಲಿಯನ್ ಡಾಲರ್ಗಳ ನೆರವನ್ನು ಐಎಂಎಫ್ ಮಂಜೂರು ಮಾಡಿದ ಸುದ್ದಿಯೂ ಹೊರಬಂದು ಭಾರತೀಯರನ್ನು ಇನ್ನಷ್ಟು ರೊಚ್ಚಿಗೆಬ್ಬಿಸಿತು. ಟ್ರಂಪ್ ಭಾರತವನ್ನು ತೊರೆದು ಪಾಕಿಸ್ತಾನವನ್ನು ಅಪ್ಪಿಕೊಂಡುಬಿಟ್ಟರೆಂಬ ಗೋಳಾಟ ಎಲ್ಲೆಡೆ. ಭಾರತದಲ್ಲೇ ಕೆಲವರು ಕುಹಕಿಗಳು ‘ಮೋದಿಯವರ ಸನ್ಮಿತ್ರ ಟ್ರಂಪ್ ಭಾರತಕ್ಕೆ ಹೇಗೆ ಕೈಕೊಟ್ಟುಬಿಟ್ಟರು, ನೋಡಿ’ ಎಂದು ನಗೆಯಾಡಿದರು. ತಾವೇನೂ ಮಧ್ಯವರ್ತಿಯ ಪಾತ್ರ ವಹಿಸಲಿಲ್ಲವೆಂದೂ, ಸಂಘರ್ಷವನ್ನು ನಿಲುಗಡೆಗೆ ತರಲು ಎರಡೂ ದೇಶಗಳಿಗೆ ತಾವು ಸಹಕಾರವನ್ನಷ್ಟೆ ನೀಡಿದ್ದಾಗಿ ಐದು ದಿನಗಳ ನಂತರ ಟ್ರಂಪ್ ಹೇಳಿಕೆ ನೀಡಿದರೂ ಅವರ ಮೇಲಿನ ಭಾರತೀಯ ‘ನ್ಯಾಷನಲಿಸ್ಟ್’ ಮಾಧ್ಯಮಗಳ ಕೆಸರೆರಚಾಟ, ಕುಹಕಿಗಳ ಅಪಹಾಸ್ಯ, ಸಾಮಾನ್ಯ ಭಾರತೀಯರ ಬೇಸರ ತಗ್ಲಲಿಲ್ಲ. ಇವರೆಲ್ಲರ ಮಾತಿನ ಅಬ್ಬರದಲ್ಲಿ, ಭಾವನೆಗಳ ಪ್ರವಾಹದಲ್ಲಿ ಜಾಗತಿಕ ಭೂ-ಸಾಮರಿಕ ರಹಸ್ಯವೊಂದು ಸ್ಪೋಟಗೊಂಡ ಸದ್ದು ಅಡಗಿಯೇಹೋಗಿತ್ತು!
ರಾವಲ್ಪಿಂಡಿ ಬಳಿಯ ನೂರ್ ಖಾನ್ ವಾಯುನೆಲೆಯ ಮೇಲೆ ಅಮೆರಿಕಾದ ನಿಯಂತ್ರಣವಿರುವ ವಿಷಯ ಮೂರುವಾರಗಳ ಹಿಂದೆ ಇದೇ ಅಂಕಣದಲ್ಲಿ ಪ್ರಸ್ತಾಪವಾಗಿತ್ತು. ಈಗ ಅದನ್ನು ಪಾಕಿಸ್ತಾನದ ಸಾಮರಿಕ ವಿಶ್ಲೇಷಕ ಇಸ್ಮಾಯಿಲ್ ಗುಲ್ ಇದೇ ಜೂನ್ 2ರಂದು ಇನ್ನಷ್ಟು ವಿವರವಾಗಿ ಹೇಳಿದ್ದಾರೆ. ಅದನ್ನು ಹೇಳುವ ಮೊದಲು ಗುಲ್ ಅವರ ಬಗ್ಗೆ ಕೆಲವು ವಿವರಗಳು ಅಗತ್ಯ.
2020ರವರೆಗೆ ಪಾಕಿಸ್ತಾನದ ಸರ್ಕಾರಿ ವಾಹಿನಿ ‘ಪಿಟಿವಿ’ಯಲ್ಲಿದ್ದ ಗುಲ್ ಅಲ್ಲಿಂದೀಚೆಗೆ ಇಸ್ಲಾಮಾಬಾದ್ನಲ್ಲಿರುವ ‘ಸೆಂಟರ್ ಫಾರ ರಿಸರ್ಚ್ ಆಂಡ್ ಸೆಕ್ಯೂರಿಟಿ ಸ್ಟಡೀಸ್’ನಲ್ಲಿ ಉಪಾಧ್ಯಕ್ಷರಾಗಿದ್ದಾರೆ. ಸಿಆರ್ಎಸ್ಎಸ್ ಭದ್ರತೆ ವಿಷಯಗಳ ಕುರಿತಾಗಿ ಸರ್ಕಾರದ ನಿಯಂತ್ರಣಗಳಿಗೆ ಹೊರತಾಗಿ ಅಧ್ಯಯನ ನಡೆಸಲು ನಾಗರಿಕ ಭದ್ರತಾ ಕಾರ್ಯಕರ್ತರು ಹುಟ್ಟುಹಾಕಿರುವ ಸಂಸ್ಥೆ. ಗುಲ್ ಹಲವು ಸ್ವತಂತ್ರ ಹಾಗೂ ಗಂಭೀರ ಅಧ್ಯಯನಗಳ ಪರಿಣಾಮವಾಗಿ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. "Pakistan Before and After Osama bin Laden', "Pakistan: The Lawless Frontier', "Unholy Nexus: Afghan Pak Relations under Taliban', "Pakistan: Pivot to Hizbul Tehrir Global Caliphate' ಅವರ ಕೃತಿಗಳಲ್ಲಿ ಕೆಲವು. ವಿಶ್ವಾಸಾರ್ಹ ವಿಶ್ಲೇಷಕರಿಲ್ಲದ ಪಾಕಿಸ್ತಾನದಲ್ಲಿ ಗುಲ್ ಬೇರೆಯೇ ಬಗೆಯ ಸಂಶೋಧಕ ಮತ್ತು ಬರಹಗಾರ. ಒಬ್ಬ ಪಾಕಿಸ್ತಾನಿಯಾಗಿ ಅವರಲ್ಲಿ ಪೂರ್ವಗ್ರಹಗಳಿರಬಹುದು. ಆದರೆ ಅವು ಇತರರಲ್ಲಿ ಇರುವಷ್ಟಿಲ್ಲ ಎನ್ನುವುದನ್ನು ಗುರುತಿಸಲೇಬೇಕು. ನೂರ್ ಖಾನ್ ವಾಯುನೆಲೆಯ ಬಗ್ಗೆ ಅವರು ಹೀಗೆ ಹೇಳುತ್ತಾರೆ: ‘ಅದು ಅಮೆರಿಕನ್ನರ ನಿಯಂತ್ರಣದಲ್ಲಿತ್ತು ಅಮೆರಿಕನ್ ಸೇನೆಯ ಕಾಗೋ ವಿಮಾನಗಳು ಅಲ್ಲಿಗೆ ಬರುತ್ತಿದ್ದವು. ಅವು ಹೊತ್ತುತರುತ್ತಿದ್ದ ವಸ್ತುಗಳ ಮೇಲೆ ಒಮ್ಮೆ ಅಲ್ಲಿನ ಪಾಕಿಸ್ತಾನಿ ವಾಯುದಳದ ಅಧಿಕಾರಿಯೊಬ್ಬರಿಗೆ ಶಂಕೆಯಾಯಿತು. ಪೆಟ್ಟಿಗೆಗಳಲ್ಲಿ ಏನಿದೆ ಎಂದವರು ಪ್ರಶ್ನಿಸಿದರು. ಅದನ್ನು ಹೇಳಲಾಗದು ಎಂದು ಅಮೆರಿಕನ್ ಮರೀನ್ ಅಧಿಕಾರಿ ಉತ್ತರಿಸಿದರು. ಆದರೆ ಪಾಕಿಸ್ತಾನಿ ಅಧಿಕಾರಿ ಮತ್ತೆ ಕೇಳಿದಾಗ ಅಮೆರಿಕನ್ ಅಧಿಕಾರಿ ತಮ್ಮ ಪಿಸ್ತೂಲು ಹೊರಗೆಳೆದರು ಮತ್ತು ಇಲ್ಲೇನಿದೆ ಎಂದು ಕೇಳುವ ಅಧಿಕಾರ ನಿಮಗಿಲ್ಲ ಎಂದು’ ಪಾಕ್ ಅಧಿಕಾರಿಗೆ ಹೇಳಿದರು.
ಶೀತಲ ಸಮರದ ದಿನಗಳಲ್ಲಿ ಪೇಷಾವರ್ ಬಳಿ ಅಮೆರಿಕಾಕ್ಕೆ ಒಂದು ರಹಸ್ಯ ವಾಯುನೆಲೆಯನ್ನು ನಿರ್ವಿುಸಿಕೊಳ್ಳಲು ಪಾಕಿಸ್ತಾನಿ ಸರ್ಕಾರ ಅವಕಾಶ ಒದಗಿಸಿತ್ತು. ಅದರ ಬಗ್ಗೆ ಸೇನಾ ಸರ್ವಾಧಿಕಾರಿ ಅಯೂಬ್ ಖಾನ್ ಮತ್ತು ಕೆಲವೇಕೆಲವು ಉನ್ನತ ಸೇನಾಧಿಕಾರಿಗಳ ಹೊರತಾಗಿ ಪಾಕಿಸ್ತಾನದಲ್ಲಿ ಯಾರಿಗೂ ತಿಳಿದಿರಲಿಲ್ಲ. ಒಮ್ಮೆ ಆ ಬಗ್ಗೆ ಸುಳಿವು ಹತ್ತಿದ ವಿದೇಶ ಮಂತ್ರಿ ಜುಲ್ಪಿಕಾರ್ ಆಲಿ ಭುಟ್ಟೋ ಅಲ್ಲಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲು ಪ್ರಯತ್ನ ಮಾಡಿದರು. ಆ ಕುರಿತಾಗಿ ವಾಯುನೆಲೆಯ ಅಮೆರಿಕನ್ ಮುಖ್ಯಸ್ಥನಿಗೆ ಅವರು ಬರೆದ ಪತ್ರಕ್ಕೆ ಈ ಉತ್ತರ ಬಂತು: ‘ಮಾನ್ಯ ಮಂತ್ರಿಗಳು ವಾಯುನೆಲೆಯ ಸ್ವಾಗತ ವಿಭಾಗಕ್ಕೆ ಬರಬಹುದು. ಅಲ್ಲಿ ಅವರು ಚಹಾ ಮತ್ತು ಬಿಸ್ಕೆಟ್ ಸೇವಿಸಬಹುದು. ಅಲ್ಲಿಂದಾಚೆಗೆ ಅವರಿಗೆ ಪ್ರವೇಶವಿಲ್ಲ’.
1963ರಲ್ಲಿ ನಡೆದ ಈ ಪ್ರಕರಣದ ಹಿನ್ನೆಲೆಯಲ್ಲಿ ನೂರ್ ಖಾನ್ ನೆಲೆಯ ಬಗ್ಗೆ ಇಸ್ಮಾಯಿಲ್ ಗುಲ್ ಹೇಳುವ ಮಾತುಗಳು ನಂಬಲರ್ಹವಾದುವು. ಇದರೊಂದಿಗೆ ಆ ನೆಲೆಯ ಬಗ್ಗೆ ಈಗಾಗಲೇ ಲಭ್ಯವಿರುವ ಕೆಲವು ಮಾಹಿತಿಗಳು ಇಲ್ಲಿ ಉಲ್ಲೇಖಾರ್ಹ. ಪಾಕಿಸ್ತಾನ ಅಣ್ವಸ್ತ್ರಗಳು ಪಾಕ್ ತಾಲಿಬಾನ್ ಕೈಗೆ ಬೀಳಬಹುದಾದ ಆತಂಕ 2007ರಲ್ಲಿ ಕಾಣಿಸಿಕೊಂಡಾಗ ಅದನ್ನು ತಡೆಯಲು 2010ರವರೆಗೆ ಬರಾಕ್ ಒಬಾಮ ಆಡಳಿತ ಪಾಕಿಸ್ತಾನಕ್ಕೆ 300 ಮಿಲಿಯನ್ ಡಾಲರ್ಗಳ ನೆರವು ನೀಡಿತು. ಅದರೊಂದಿಗೆ ಪಾಕಿಸ್ತಾನಿ ಅಣ್ವಸ್ತ್ರಗಳ ನಿಯಂತ್ರಣ ವ್ಯವಸ್ಥೆ ಇರುವ ನೂರ್ ಖಾನ್ ವಾಯುನೆಲೆಯನ್ನು ಅಮೆರಿಕಾ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಅದರರ್ಥ ಪಾಕಿಸ್ತಾನಿ ಅಣ್ವಸ್ತ್ರಗಳ ಮೇಲೆ ಅಮೆರಿಕಾದ ನಿಯಂತ್ರಣವಿದೆ ಮತ್ತು ಅದಕ್ಕಾಗಿ ಅಮೆರಿಕನ್ ಸುರಕ್ಷಾ ಅಧಿಕಾರಿಗಳು ಅಲ್ಲಿದ್ದಾರೆ!
ಭಾರತದ ದಾಳಿಗಳಲ್ಲಿ ಪಾಕಿಸ್ತಾನಿ ವಾಯುದಳದ ಹಲವರು ಅಧಿಕಾರಿಗಳೂ ಮೃತಪಟ್ಟದ್ದು ಸುದ್ದಿಯಾಗಿದೆ. ಅವರೊಂದಿಗೆ ಮುರೀದ್ನಲ್ಲಿದ್ದ ಡ್ರೋನ್ ನಿಯಂತ್ರಣ ಕಚೇರಿಯಲ್ಲಿದ್ದ ಕನಿಷ್ಠ ಇಬ್ಬರು ಟರ್ಕಿ ತಂತ್ರಜ್ಞರು, ಜಾಕೋಬಾಬಾದ್ನಲ್ಲಿ ಎಫ್-16 ಯುದ್ಧವಿಮಾನಗಳ ಉಸ್ತುವಾರಿಗಾಗಿ ಇದ್ದ ಲಾಕ್ಹೀಡ್ ಮಾರ್ಟೀನ್ ಕಂಪನಿಯ ಕೆಲವರು ತಂತ್ರಜ್ಞರೂ ಮರಣಹೊಂದಿದ್ದಾರೆ. ಹೀಗಾಗಿ ನೂರ್ ಖಾನ್ ನೆಲೆಯಲ್ಲಿದ್ದ ಅಮೆರಿಕನ್ ಅಧಿಕಾರಿಗಳೂ ಮೃತಪಟ್ಟಿರುವುದು ನಿಶ್ಚಿತ. ಅದರೊಂದಿಗೆ, ‘ನ್ಯೂಕ್ಲಿಯರ್ ಕಮ್ಯಾಂಡ್ ಆಂಡ್ ಕಂಟ್ರೋಲ್ ಸಿಸ್ಟಂ’ ಅಸ್ತವ್ಯಸ್ತಗೊಂಡಿರುವ ಸಾಧ್ಯತೆ ಇದೆ! ಇಂತಹ ಸನ್ನಿವೇಶದಲ್ಲಿ ಟ್ರಂಪ್ ಆಡಳಿತ ಗಾಬರಿಗೊಂಡು ದಿಢೀರನೆ ಕಾರ್ಯಪ್ರವೃತ್ತವಾದದ್ದರಲ್ಲಿ ಅಚ್ಚರಿಯೇನಿದೆ? ಹಾಗೆಯೇ ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ದಾಳಿಯನ್ನು ಮುಂದುವರಿಸಿ ಅಮೆರಿಕಾದ ಅಸಂತೋಷಕ್ಕೆ ಕಾರಣವಾಗಿ ಇತರ ಮುಖ್ಯ ಕ್ಷೇತ್ರಗಳಲ್ಲಿ ಟ್ರಂಪ್ ಆಡಳಿತದ ಬೆಂಬಲವನ್ನು ಕಳೆದುಕೊಳ್ಳುವ ಬದಲು ‘ಸದ್ಯಕ್ಕೆ’ ಸುಮ್ಮನಾಗಿ, ಪರಿಸ್ಥಿತಿ ನಮಗೆ ಅನುಕೂಲವಾಗುವವರೆಗೆ ಕಾಯುವುದು ವಿವೇಕ ಎಂದು ಮೋದಿ ಸರ್ಕಾರ ತಿಳಿದಿರಬಹುದಾದರೆ ಅದರಲ್ಲೂ ಅಚ್ಚರಿಯೇನಿದೆ?
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)