ನ್ಯೂಸ್

ಹಿರಿಯ ಗಾಯಕ ಯೇಸುದಾಸ್​ ಆಸ್ಪತ್ರೆಗೆ ದಾಖಲು! ಇದು ಸತ್ಯಕ್ಕೆ ದೂರವಾದ ಮಾತು ಎಂದ ಮಗ

ಚೆನ್ನೈ: ವಯೋಸಹಜ ಖಾಯಿಲೆಯಿಂದ ಬಳಲುತ್ತಿರುವ ಹಿರಿಯ ಗಾಯಕ ಕೆಜೆ ಯೇಸುದಾಸ್ (KJ Yesudas) (85) ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿಯಾಗಿದೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಯೇಸುದಾಸ್​ ಅವರು ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಅವರ ಮಗ ವಿಜಯ್​ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ವಿಜಯ್ ಯೇಸುದಾಸ್ (Vijay Yesudas)​, ನನ್ನ ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಅವರು ಆರೋಗ್ಯ ಚೆನ್ನಾಗಿದ್ದು, ಸದ್ಯ ಯುಎಸ್​ಎನಲ್ಲಿ ನೆಲೆಸಿದ್ದಾರೆ ಎಂದು ಅವರ ಮಗ ವಿಜಯ್ ಯೇಸುದಾಸ್​ ತಿಳಿಸಿದ್ದಾರೆ.

ಗಾನ ಗಂಧರ್ವ ಎಂದೇ ಖ್ಯಾತಿ ಪಡೆದಿರುವ ಯೇಸುದಾಸ್ (Yesudas) ಅವರು 2025ರ ಜನವರಿ 10ರಂದು 85ನೇ ವಸಂತಕ್ಕೆ ಕಾಲಿಟ್ಟಿದ್ದರು. ಸಂಗೀತ ಕ್ಷೇತ್ರದಲ್ಲಿ ಆರು ದಶಕದಿಂದ ಸೇವೆ ಸಲ್ಲಿಸುತ್ತಿರುವ ಯೇಸುದಾಸ್​ ಅವರು 50 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಯೇಸುದಾಸ್ ಅವರು ಮಲಯಾಳಂ, ತಮಿಳು, ಕನ್ನಡ, ತೆಲುಗು, ತೆಲುಗು, ಅರೇಬಿಕ್, ರಷ್ಯನ್ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡನ್ನು ಹಾಡಿ ಖ್ಯಾತಿ ಗಳಿಸಿದ್ಧಾರೆ. 

ಎಂಟು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಯೇಸುದಾಸ್​ ಅವರು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಿಂದ ರಾಜ್ಯ ಸರ್ಕಾರದ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1975 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2017 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ಯೇಸುದಾಸ್ ಅವರು ಪಡೆದಿದ್ದಾರೆ.