ನ್ಯೂಸ್

ಮತ್ತೆ ಲಾಕ್‌ಡೌನ್ ಹೇರಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಯೇ ಪ್ರಧಾನಿ ಮೋದಿ?

ರಮೇಶ್​ ಕುಮಾರ್​​ ಬಿ ಎಡಮೋಳೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಚ್ಚರಿಯ ರೀತಿಯಲ್ಲಿ ದಿಢೀರನೆ ಘೋಷಣೆಗಳನ್ನು ಹೊರಡಿಸುವುದು ಮಾಮೂಲಿ. ಈ ಹಿಂದೆಯೂ ದೇಶದ ಜನರಿಗೆ ಇದರ ಅನುಭವವಾಗಿದೆ. ಈ ಬಾರಿ ಅವರು ತಮ್ಮ ಸಂಪುಟದ ಮಂತ್ರಿಗಳ ಸಭೆ ನಡೆಸಿರುವುದು, ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿಗಳ ಸಭೆ ಕರೆದಿರುವುದು.. ಇದೆಲ್ಲವೂ ಅವರು ದೇಶದ ಮೇಲೆ ಮತ್ತೆ ಹಠಾತ್ತನೆ ಲಾಕ್‌ಡೌನ್ ಹೇರುತ್ತಾರೆಯೇ ಎಂಬ ಅನುಮಾನಕ್ಕೆಡೆ ಮಾಡಿಕೊಟ್ಟಿದೆ.

ಕೇಂದ್ರ ಸರ್ಕಾರ ಜೂನ್ 15ರಿಂದ ಮತ್ತೆ ದಿಢೀರನೆ ದೇಶಾದ್ಯಂತ ಲಾಕ್‌ಡೌನ್‌ಘೋಷಿಸಲಿದೆ ಎಂಬ ಮಾಹಿತಿ ಇತ್ತೀಚೆಗೆ ವರದಿಯಾಗಿತ್ತು. ಅದು ತೀವ್ರ ಸಂಚಲನ ಸೃಷ್ಟಿಸುತ್ತಿದ್ದಂತೆಯೇ ಕೇಂದ್ರ ಸರ್ಕಾರವೇ ಆ ರೀತಿಯ ಯಾವುದೇ ಪ್ರಸ್ತಾವನೆ ಇಲ್ಲವೆಂದು ಸ್ಪಷ್ಟಪಡಿಸಿತ್ತು. ಆದರೆ ಅದಾಗಿ ಎರಡು ದಿನಗಳು ಕಳೆಯುತ್ತಿದ್ದಂತೆ, ಮತ್ತೆ ಅಂಥದೇ ಸುದ್ದಿಗೆ ಇಂಬು ಕೊಡುವಂತಹ ಬೆಳವಣಿಗೆಗಳು ನಡೆಯುತ್ತಿವೆ.

ಆರಂಭದಲ್ಲಿ ಭಾರಿ ಕಟ್ಟುನಿಟ್ಟಾಗಿದ್ದ ಲಾಕ್‌ಡೌನನ್ನು ನಾಲ್ಕು ಹಂತಗಳ ಬಳಿಕ ಕೇಂದ್ರ ಸರ್ಕಾರ ಶೇಕಡಾ 95ರಷ್ಟು ಸಡಿಲಿಸಿದೆ. ಈ ಸಡಿಲಿಕೆಯಿಂದಲೋ ಏನೋ, ಕರೊನಾದಿಂದ ಸಾಯುವವರ ಸಂಖ್ಯೆ ಮತ್ತು ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ದಿನೇದಿನೆ ಏರುತ್ತಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಸೋಂಕಿತರ ಸಂಖ್ಯೆ ಮೂರು ಲಕ್ಷ ದಾಟಿದ್ದು, ಸತ್ತವರ ಸಂಖ್ಯೆ 9 ಸಾವಿರಕ್ಕೇರಿದೆ.

ಪರಿಸ್ಥಿತಿಯನ್ನು ನಿಭಾಯಿಸಲು ಏನು ಮಾಡಬೇಕೆಂದು ಚರ್ಚಿಸುವುದಕ್ಕೋಸ್ಕರವೇ ಶನಿವಾರ ಸಂಜೆ ಪ್ರಧಾನಿ ಮೋದಿಯವರು ಹಿರಿಯ ಸಚಿವರ ಸಭೆ ನಡೆಸಿದರು. ಈ ಸಭೆಯಲ್ಲಿ ಗೃಹ ಸಚಿವರು, ಆರೋಗ್ಯ ಸಚಿವರು, ಮೋದಿಯವರ ಪ್ರಧಾನ ಕಾರ‌್ಯದರ್ಶಿ, ಆರೋಗ್ಯ ಇಲಾಖೆ ಕಾರ‌್ಯದರ್ಶಿ, ಸಂಪುಟ ಕಾರ‌್ಯದರ್ಶಿ, ಐಸಿಎಂಆರ್‌ನ ಮಹಾನಿರ್ದೇಶಕರು ಮುಂತಾದವರು ಪಾಲ್ಗೊಂಡಿದ್ದರು.

‘ಈ ಸಭೆಯಲ್ಲಿ ದೇಶದಲ್ಲಿನ ಕರೊನಾ ಸ್ಥಿತಿಗತಿಯನ್ನು ಪರಾಮರ್ಶಿಸಲಾಯಿತು. ಮುಂದೆ ಪರಿಸ್ಥಿತಿಯನ್ನು ಎದುರಿಸಲು ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು, ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆಯೂ ಚರ್ಚಿಸಲಾಯಿತು’ ಎಂದು ಪ್ರಧಾನಿಯವರ ಕಾರ‌್ಯಾಲಯ ಟ್ವೀಟರ್ ಮೂಲಕ ತಿಳಿಸಿದೆ.

ಇದೇ 16 ಮತ್ತು 17ರಂದು ಎಲ್ಲ ರಾಜ್ಯಗಳ ಸಿಎಂಗಳ ಜತೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದು, ಅವರ ಸಲಹೆಗಳನ್ನೂ ಪಡೆಯಲಿದ್ದಾರೆ. ನಂತರ ಮತ್ತೊಂದು ಹಂತದ ಕಠಿಣ ಲಾಕ್‌ಡೌನ್ ವಿಧಿಸಬೇಕೆ, ಬೇಡವೇ ಎಂಬ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.