ಬೆಂಗಳೂರು : ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್, ಬಿಜೆಪಿಗೆ ಸೇರಿದರಾ..? ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಅದಕ್ಕೆ ಕಾರಣ ಹ್ಯಾರಿಸ್ ಹೆಸರಿನಲ್ಲಿರುವ ವೆಬ್ಸೈಟ್ನಲ್ಲಿ ಇರುವ ಬಿಜೆಪಿ ಲೋಗೋ.
ಆದರೆ ಇದು ಪಕ್ಕಾ ಸುಳ್ಳು ಸುದ್ದಿ. ಎನ್.ಎ.ಹ್ಯಾರಿಸ್ ಅವರು ಕಾಂಗ್ರೆಸ್ನಲ್ಲೇ ಇದ್ದಾರೆ. ಬಿಜೆಪಿ ಸೇರಿಲ್ಲ. ಆದರೆ ಅವರು ಬಿಜೆಪಿ ಸೇರಿದ್ದಾರೆ ಎಂಬಂತೆ ಬಿಂಬಿಸಿದ್ದು ಕಿಡಿಗೇಡಿಗಳು. ಹ್ಯಾರಿಸ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಖಾತೆ ತೆರೆದು, ಬಿಜೆಪಿ ಚಿಹ್ನೆಯನ್ನೂ ಅಪ್‌ಲೋಡ್ ಮಾಡಿದ್ದಾರೆ.
ಈ ಕುರಿತು ಶಾಸಕರ ಪುತ್ರ ಮಹಮ್ಮದ್ ಹ್ಯಾರಿಸ್ ನಲಪಾಡ್, ಕೇಂದ್ರ ಸಿಇಎನ್ ಠಾಣೆಗೆ ದೂರ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ. ಇದನ್ನೂ ಓದಿ: ಸುಶಾಂತ್ ಸಿಂಗ್ ಕೇಸ್ನಲ್ಲೊಂದು ಬಿಗ್ ಟ್ವಿಸ್ಟ್; ಜೂ.13ರಂದು ನಡೆದ ಅಚ್ಚರಿಯ ಘಟನೆ ಇದು
ಎನ್.ಎ.ಹ್ಯಾರಿಸ್ ಹೆಸರಿನ ಅಧಿಕೃತ ವೆಬ್‌ಸೈಟ್ ಅವಧಿ ಮುಕ್ತಾಯವಾಗಿತ್ತು. ಆದರೆ, ಕಿಡಿಗೇಡಿಗಳು ಮತ್ತೆ ಹ್ಯಾರಿಸ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು ಶಾಸಕರ ಫೋಟೋ ಜತೆಗೆ ಬಿಜೆಪಿ ಚಿಹ್ನೆ ಭಿತ್ತರಿಸಿದ್ದಾರೆ. ಜತೆಗೆ ಹ್ಯಾರಿಸ್ ಕುಟುಂಬಸ್ಥರ ಫೋಟೋ ಅಪ್‌ಲೋಡ್ ಮಾಡಿ ಅವರ ಖಾಸಗಿ ಮಾಹಿತಿಯನ್ನು ಅನುಮತಿ ಇಲ್ಲದೆ ವೆಬ್‌ಸೈಟ್‌ಗೆ ಹಾಕಿದ್ದಾರೆ. ಇದರಿಂದ ಶಾಸಕರ ವ್ಯಕ್ತಿತ್ವ, ಪ್ರತಿಷ್ಠೆ ಮತ್ತು ಕುಟುಂಬದ ಗೌರವಕ್ಕೆ ಧಕ್ಕೆ ಉಂಟಾಗಿದೆ. ಕೂಡಲೇ ವೆಬ್‌ಸೈಟ್ ಸ್ಥಗಿತಗೊಳಿಸಿ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ನಲಪಾಡ್ ಮನವಿ ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಸೈಬರ್ ಲ್ಯಾಬ್ ತಜ್ಞರಿಂದ ಮಾಹಿತಿ ಕೋರಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.