ಬೆಂಗಳೂರು: ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದು ತನಿಖೆಗೆ ಅಸ್ತು ಎಂದಿದೆ. ಇವತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮೈಸೂರು ಲೋಕಾಯುಕ್ತ ತನಿಖೆ ಮಾಡಲು ಆದೇಶಿಸಿದೆ. ಕೋರ್ಟ್ ಆದೇಶಿಸಿದ ಬಳಿಕ ತನಿಖೆಗೆ ಸಿದ್ಧನಿಲ್ಲ ಎನ್ನುವುದುಸಾಧ್ಯವೆ? ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ನಿನ್ನೆಯ ಹೈಕೋರ್ಟ್ ಆದೇಶವನ್ನು ಗಮನಿಸಿದ್ದೇವೆ. ಗವರ್ನರ್ ಅವರ ಆದೇಶವನ್ನು ಕೋರ್ಟ್ ಎತ್ತಿಹಿಡಿದಿದೆ ಮುಖ್ಯಮಂತ್ರಿಗಳೂ ನಾನು ಯಾವುದೇ ತನಿಖೆಗೆ ಹೆದರುವುದಿಲ್ಲ; ತನಿಖೆ ಎದುರಿಸಲು ಸಿದ್ಧನಿದ್ದೇನೆ ಎಂದಿದ್ದಾರೆ ಎಂದು ವಿವರಿಸಿದರು.
ಕೋರ್ಟ್ ಆದೇಶ ಬಂದ ಬಳಿಕ ತನಿಖೆಗೆ ಸಿದ್ಧ ಎನ್ನುವುದು ಅಪಾರ್ಥ. ಆದೇಶ ಬಂದ ಬಳಿಕ ಸಿದ್ಧನಿಲ್ಲ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು. ನನ್ನ ಪ್ರಕಾರ ನಿನ್ನೆಯ ಆದೇಶಕ್ಕೂ ಇವತ್ತಿನ ಜನಪ್ರತಿನಿಧಿ ವಿಶೇಷ ಕೋರ್ಟಿನ ಆದೇಶಕ್ಕೂ ಬಹಳ ವ್ಯತ್ಯಾಸವಿದೆ.
ಇವತ್ತಿನ ಆದೇಶದಲ್ಲಿ ಮೈಸೂರಿನ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ 3 ತಿಂಗಳಿನಲ್ಲಿ ವರದಿ ಕೊಡಲು ತಿಳಿಸಿದ್ದಾರೆ. ಕೋರ್ಟ್ ಹೆಚ್ಚು ಕಡಿಮೆ ಶೇ 70-75 ಭಾಗದಷ್ಟು ತನಿಖೆಯನ್ನು ಮುಗಿಸಿದೆ. ಲೋಕಾಯುಕ್ತಕ್ಕೆ ಕೇವಲ ಶೇ 25ರಷ್ಟು ತನಿಖೆ ಬಾಕಿ ಇದೆ ಎಂದು ಛಲವಾದಿ ನಾರಾಯಣಸ್ವಾಮಿ ವಿಶ್ಲೇಷಿಸಿದರು.
1992ರಲ್ಲಿ ಮುಡಾ ಈ ಜಮೀನನ್ನು ಸ್ವಾಧೀನಪಡಿಸಿಕೊಂಡ ಬಳಿಕ 1996ರಲ್ಲಿ ಅದಕ್ಕೆ ಪರಿಹಾರವನ್ನೂ ಕೊಟ್ಟಿತ್ತು. 1998ರಲ್ಲಿ ಇದರ ಡಿನೋಟಿಫಿಕೇಶನ್ ಆಗಿದೆ. ಆ ಡಿನೋಟಿಫಿಕೇಶನ್‍ನಲ್ಲೇ ತಪ್ಪಿದೆ. ಅಲ್ಲಿಂದೀಚೆಗೆ ನಡೆದ ಎಲ್ಲ ವ್ಯವಹಾರಗಳೂ ತಪ್ಪಾಗಿವೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ತಡ ಮಾಡದೇ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.