ನಮ್ಮ ದೇಶದಲ್ಲಿ ಉಷ್ಣ ವಿದ್ಯುತ್ ಮೇಲೆ ಅವಲಂಬನೆ ಹೆಚ್ಚು. ಜಾಗತಿಕ ತಾಪಮಾನ ತಗ್ಗಿಸಲು ಇಂಗಾಲ ಡೈಆಕ್ಸೆ ೃಡ್ ಹೊರಸೂಸುವಿಕೆಯನ್ನು ತಗ್ಗಿಸುವುದಾಗಿ ವಿಶ್ವ ಸಮುದಾಯದ ಮುಂದೆ ಭಾರತ ಘೋಷಿಸಿದೆ. ಕಲ್ಲಿದ್ದಲು ಸುಡದೆ ದೇಶದ ವಿದ್ಯುತ್ ಬೇಡಿಕೆಯನ್ನು ತಣಿಸುವಷ್ಟು ಪರ್ಯಾಯ ಮೂಲಗಳು ಅಭಿವೃದ್ಧಿ ಆಗಿವೆಯೇ? ಎಂಬ ಬೃಹತ್ ಪ್ರಶ್ನೆ ಇದೆ.
ಕಡಿಮೆ ದಾಸ್ತಾನು&ಆಮದಿಗೆ ನಿರ್ಧಾರ
ಭಾರತದಲ್ಲಿ ನೂರಕ್ಕೂ ಹೆಚ್ಚು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಸಮರ್ಪಕ ಕಾರ್ಯನಿರ್ವಹಣೆಗೆ ಅಗತ್ಯವಾದ ಕಲ್ಲಿದ್ದಲು ದಾಸ್ತಾನಿಗಿಂತ ಶೇ. 25ರಷ್ಟು ಕಡಿಮೆ ಶೇಖರಣೆ ಇದೆ. 50 ಸ್ಥಾವರಗಳಲ್ಲಿ ಶೇ. 10ಕ್ಕಿಂತ ಕಡಿಮೆ ಸಂಗ್ರಹ ಇದೆ. ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ, "72.50 ದಶಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ದೇಶದ ವಿವಿಧ ಗಣಿಗಳಲ್ಲಿ ಬಳಕೆಗೆ ಸಿದ್ಧವಿದೆ. ಇದು ದೇಶದ ಉಷ್ಣ ವಿದ್ಯುತ್ ಸ್ಥಾವರಗಳ ಬೇಡಿಕೆಗೆ ಸಾಕು' ಎಂದು ಕಳೆದ ವಾರ ಟ್ವೀಟ್ ಮಾಡಿದ್ದರು. ಗಣಿಗಳಲ್ಲಿ ಸಂಗ್ರಹವಾಗಿರುವ ದಾಸ್ತಾನನ್ನು ಸಾಗಣೆ ಮಾಡಲು ರೈಲ್ವೆ ಇಲಾಖೆ 167 ಪ್ಯಾಸೆಂಜರ್ ರೈಲುಗಳ ಓಡಾಟವನ್ನು ಕೆಲವು ಕಾಲ ತಡೆಹಿಡಿದೆ. ಇದರಿಂದ ಕಲ್ಲಿದ್ದಲು ಹೊತ್ತ ರೈಲುಗಳ ಸಂಚಾರ ಸುಗಮವಾಗಲಿದೆ. ಜತೆಗೆ ವಿದ್ಯುತ್ ಕೊರತೆ ನೀಗಿಸಲು ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಕೇಂದ್ರ ನಿರ್ಧರಿಸಿದೆ. ಆದರೆ, ಯೂಕ್ರೇನ್&ರಷ್ಯಾ ಸಂಗ್ರಾಮದಿಂದ ಹೊರ ದೇಶಗಳಿಂದ ಪೂರೈಕೆಗೆ ಅಡಚಣೆ ಎದುರಾಗಿದೆ.
ಹೊಸ ಉಷ್ಣ ವಿದ್ಯುತ್ ಸ್ಥಾವರ
ಇಂಗಾಲದ ಡೈಆಕ್ಸೆ ೃಡ್ ಹೊರಸೂಸುವಿಕೆ ತಡೆಯುವ ನಿಟ್ಟಿನಲ್ಲಿ ಹೊಸದಾಗಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಆರು ವರ್ಷದಿಂದ ಅನುಮತಿ ನೀಡದಿದ್ದ ಕೇಂದ್ರ ಸರ್ಕಾರ ಈಗ ಸ್ಥಾವರ ಸ್ಥಾಪನೆಗೆ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ಸ್ವಾಮ್ಯದ ಎನ್ಟಿಪಿಸಿ 2016ರ ನಂತರ ಹಸಿರು ಇಂಧನ ಉತ್ಪಾದನೆಗೆ ಒತ್ತು ನೀಡಿತ್ತು. ಆದರೀಗ ವಿದ್ಯುತ್ ಬೇಡಿಕೆ ತೀವ್ರವಾಗಿರುವ ಕಾರಣ ಒಡಿಶಾದ ತಲ್ಚಾರ್ನಲ್ಲಿ 1.32 ಗಿಗಾವಾಟ್ ಸಾಮರ್ಥ್ಯದ ಸ್ಥಾವರ ಸ್ಥಾಪನೆಗೆ ಮುಂದಾಗಿದೆ, ಕೆಲ ವಾರದಲ್ಲಿ ಟೆಂಡರ್ ಆಹ್ವಾನಿಸುವ ನಿರೀೆ ಇದೆ. ಎನ್ಟಿಪಿಸಿ ಛತ್ತೀಸ್ಗಢದ ಲಾರಾ ಮತ್ತು ಉತ್ತರ ಪ್ರದೇಶದ ಸಿಂಗರೌಲಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳನ್ನು ಹೊಂದಿದೆ. ಈ ಸ್ಥಾವರಗಳಲ್ಲಿ ಉತ್ಪಾದನೆ ಹೆಚ್ಚಿಸಲು ಪ್ರಸ್ತಕ ಹಣಕಾಸು ವರ್ಷದಲ್ಲಿ 20 ದಶಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಉದ್ದೇಶಿಸಿದೆ. ವಿದ್ಯುತ್ ಉತ್ಪಾದನೆ ಹೆಚ್ಚಿಸುವ ದೃಷ್ಟಿಯಿಂದ ಸ್ಥಾವರಗಳಿಗೆ ಶೇ.10ರಷ್ಟು ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಛತ್ತೀಸ್ಗಢ, ಒಡಿಶಾ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರಗಳು ಕೂಡ ಹೊಸ ಉಷ್ಣ ವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ಆಸಕ್ತಿ ತೋರಿವೆ.
ಉಷ್ಣ ವಿದ್ಯುತ್ ಸ್ಥಾವರದಿಂದ ಹೆಚ್ಚು ಪೂರೈಕೆ
ದೇಶದ ಒಟ್ಟಾರೆ ವಿದ್ಯುತ್ ಬೇಡಿಕೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳಿಂದ ಶೇ. 55 ಪೂರೈಕೆ ಆಗುತ್ತದೆ ಎಂದು ಕಲ್ಲಿದ್ದಲು ಸಚಿವರು ಹೇಳಿದ್ದಾರೆ. 2000ರ ನಂತರ ಭಾರತದಲ್ಲಿ ವಿದ್ಯುತ್ ಬೇಡಿಕೆ ದ್ವಿಗುಣಗೊಂಡಿದ್ದು, ಇದರಲ್ಲಿ ಶೇ. 80ರಷ್ಟನ್ನು ಪೂರೈಸುವ ಹೊಣೆ ಉಷ್ಣ ವಿದ್ಯುತ್ ಸ್ಥಾವರ, ತೈಲ ಮತ್ತು ಜೈವಿಕ ಇಂಧನದ ಮೇಲೆ ಇದೆ ಎಂದು ಅಂತಾರಾಷ್ಟ್ರೀಯ ವಿದ್ಯುಚ್ಛಕ್ತಿ ಸಂಸ್ಥೆ (ಐಇಎ) ತಿಳಿಸಿದೆ. 2040ರವರೆಗೆ ಭಾರತದಲ್ಲಿನ ವಿದ್ಯುತ್ ಬೇಡಿಕೆ ವಾರ್ಷಿಕವಾಗಿ ಶೇ. 5ರಷ್ಟು ಏರುತ್ತಿರುತ್ತದೆ. ಆದರೆ, ಇದನ್ನು ಈಡೇರಿಸುವಷ್ಟು ವಿದ್ಯುತ್ ಪೂರೈಕೆ ಪರ್ಯಾಯ ಇಂಧನ ಮೂಲಗಳಿಂದ ಸಾಧ್ಯವೆ ಎಂದು ಐಇಎ ಶಂಕಿಸಿದೆ.
ನವೀಕರಿಸಬಹುದಾದ ಮೂಲ
ಈಗೀಗ ಉಷ್ಣ ವಿದ್ಯುತ್ ಸ್ಥಾವರಗಳ ಮೇಲಿನ ಹೊಣೆಯನ್ನು ನವೀಕರಿಸಬಹುದಾದ ಇಂಧನ ಮೂಲಗಳು ಕಡಿಮೆ ಮಾಡುತ್ತಿವೆ. ಖಾಸಗಿ ಕಂಪನಿಗಳು ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿವೆ. ೆಬ್ರವರಿ ಅಂತ್ಯದ ವೇಳೆಗೆ, ದೇಶದಲ್ಲಿ 152.90 ಗಿಗಾವಾಟ್ ವಿದ್ಯುತ್ ಪರ್ಯಾಯ ಇಂದನ ಮೂಲದಿಂದ ಸಿಗುತ್ತಿದೆ. ಆದರೆ, ಭಾರತದ ವಿದ್ಯುತ್ ಬೇಡಿಕೆಯನ್ನು ಗಮನದಲ್ಲಿ ಇರಿಸಿಕೊಂಡರೆ ನವೀಕರಿಸಬಹುದಾದ ಇಂಧನ ಮೂಲಗಳಿಂದ ಮುಂದಿನ 10 ವರ್ಷದಲ್ಲಿ ಜನ್ಯವಾಗುವ ವಿದ್ಯುತ್ ಏನೇನೂ ಸಾಲದು ಎಂದು ಐಇಎ ಹೇಳಿದೆ. ಆದರೆ, ಭಾರತದ ಕೇಂದ್ರೀಯ ವಿದ್ಯುಚ್ಛಕ್ತಿ ಪ್ರಾಧಿಕಾರವು 2029&30ರ ಹೊತ್ತಿಗೆ ನವೀಕರಿಸಬಹುದಾದ ಇಂಧನ ಮೂಲದಿಂದ ಶೇ.40ರಷ್ಟು ವಿದ್ಯುತ್ ದೊರೆಯುತ್ತದೆ ಎಂದು ಅಂದಾಜಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು "ಕಾಪ್26'ರ ಶೃಂಗದಲ್ಲಿ ಘೋಷಿಸಿದಂತೆ 2030ರ ಹೊತ್ತಿಗೆ ಭಾರತದಲ್ಲಿ 500 ಗಿಗಾವಾಟ್ ವಿದ್ಯುತ್ ನವೀಕರಿಸಬಹುದಾದ ಇಂಧನ ಮೂಲದಿಂದ ಸಿಗುತ್ತದೆ ಎಂಬ ನಿರೀೆ ಇದೆ.
ಸೋರಿಕೆ ತಡೆ ಹೇಗೆ?
ಜಲ ಮತ್ತು ಅಣು ವಿದ್ಯುತ್ಗೆ ಹೋಲಿಸಿದರೆ ಉಷ್ಣ ವಿದ್ಯುತ್ ಉತ್ಪಾದನೆ ಕಡಿಮೆ ಖರ್ಚಿನದ್ದು. ಹೀಗಾಗಿಯೇ ಭಾರತದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳ ಮೇಲೆ ಅವಲಂಬನೆ ಅಧಿಕ. ಆದರೆ, ಸ್ಥಾವರಗಳ ನಿರ್ವಹಣೆ ಕೊರತೆ, ವಿದ್ಯುತ್ ಸರಬರಾಜಿನಲ್ಲಿ ಹಾಗೂ ಸಂಗ್ರಹದಲ್ಲಿ ಆಗುವ ಸೋರಿಕೆಯಿಂದ ವಿದ್ಯುಚ್ಛಕ್ತಿ ಅಪವ್ಯಯ ಆಗುತ್ತಿದೆ. ಇದನ್ನು ತಡೆಗಟ್ಟಲು ಅತ್ಯಾಧುನಿಕ ವಿಧಾನಗಳ ಅನುಷ್ಠಾನ ಮತ್ತು ಬದ್ಧತೆಯನ್ನು ವಿದ್ಯುತ್ ಉತ್ಪಾದನಾ ಕಂಪನಿಗಳು ಮತ್ತು ಪವರ್ ಗ್ರಿಡ್ಗಳು ತೋರಬೇಕಿದೆ ಎಂದು ಐಇಎ ಸಲಹೆ ನೀಡಿದೆ.