ಚನ್ನಪಟ್ಟಣ ಬೆಂ-ಮೈ ಹೆದ್ದಾರಿಯಲ್ಲಿ ಸಂಭವಿಸಿರುವ ರಸ್ತೆ ಅವಘಡದ ಚಿತ್ರ. 
ನ್ಯೂಸ್

ಬೆಂ-ಮೈ ದಶಪಥ ಸಂಚಾರಕ್ಕೆ ಸುರಕ್ಷಿತವೇ?: ಆತಂಕಕ್ಕೆ ಕಾರಣವಾಗಿದೆ ಹೆಚ್ಚುತ್ತಿರುವ ಅಪಘಾತಗಳು

| ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಉದ್ಘಾಟನೆಗೆ ಸಿದ್ಧಗೊಂಡಿರುವ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ಸುರಕ್ಷಿತವೇ ಎಂಬ ಅನುಮಾನ ಮೂಡಿದೆ. ಈ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅವಘಡಗಳು ರಸ್ತೆಯ ಸುರಕ್ಷತೆ ಬಗ್ಗೆ ಆತಂಕ ಮೂಡಿಸಿವೆ.

ಹೌದು.., ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೆ ಸಿದ್ಧಗೊಂಡಿದ್ದು, ಈಗಾಗಲೇ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಕೆಲದಿನಗಳ ಹಿಂದೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡ ರಸ್ತೆ ಕಾಮಗಾರಿ ಪರಿಶೀಲಿಸಿ ಹೋಗಿದ್ದಾರೆ.

ಮುಂದಿನ ತಿಂಗಳ ಅಂತ್ಯಕ್ಕೆ ಹೆದ್ದಾರಿ ಅಧಿಕೃತವಾಗಿ ಲೋಕಾರ್ಪಣೆಯಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ, ಈ ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ, ಅಡ್ಡಾದಿಡ್ಡಿ ವಾಹನ ಚಾಲನೆ, ಹೆದ್ದಾರಿ ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಸೇರಿ ಹಲವು ನ್ಯೂನತೆಗಳಿದ್ದು, ಈ ಕಾರಣದಿಂದ ಉದ್ಘಾಟನೆಗೂ ಮುನ್ನವೇ ಈ ರಸ್ತೆ ಹಲವು ಜೀವಗಳನ್ನು ಬಲಿ ಪಡೆದುಕೊಳ್ಳುತ್ತಿದೆ.

ಪ್ರತಿನಿತ್ಯ ಒಂದಲ್ಲ ಒಂದು ಅವಘಡಗಳು ನಡೆಯುತ್ತಲೇ ಇವೆ. ಅದರಲ್ಲೂ ಚನ್ನಪಟ್ಟಣ - ರಾಮನಗರದ ಬಳಿ ಹೆಚ್ಚು ಅಪಘಾತಗಳಾಗುತ್ತಿವೆ. ಈ ಅಪಘಾತಗಳಿಗೆ ಸಂಚಾರ ನಿಯಮ ಉಲ್ಲಂಘನೆ ಹಾಗೂ ರಸ್ತೆ ಅಸುರಕ್ಷತೆ ಕಾರಣ ಎನ್ನಲಾಗಿದೆ.

ಅತಿವೇಗ ಕಾರಣ?: ಬೆಂಗಳೂರು-ಮೈಸೂರು ಮಹಾನಗರಗಳ ನಡುವೆ ಸುಗಮ ಸಂಚಾರ ಹಾಗೂ ಪ್ರಯಾಣದ ಸಮಯ ಉಳಿಸುವ ಉದ್ದೇಶದಿಂದ ನಿರ್ಮಾಣವಾಗಿರುವ ಈ ಹೆದ್ದಾರಿಯಲ್ಲಿ ವೇಗದ ಮಿತಿಯನ್ನು ಪ್ರತಿ ಗಂಟೆಗೆ 100 ಕಿ.ಮೀ.ಗೆ ನಿಗದಿ ಪಡಿಸಲಾಗಿದೆ. ಆದರೆ, ಕೆಲ ವಾಹನ ಚಾಲಕರು ಇದಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತಿರುವ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚಲು ಕಾರಣ ಎನ್ನಲಾಗುತ್ತಿದೆ. ಅತಿಹೆಚ್ಚು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಅಗತ್ಯವಾದ ಸುರಕ್ಷಿತ ಕ್ರಮ ಕೈಗೊಳ್ಳದಿರುವುದೂ ಅವಘಡ ಹೆಚ್ಚಾಗಲು ಪ್ರಮುಖ ಕಾರಣ ಎನ್ನುವ ದೂರುಗಳು ವ್ಯಾಪಕವಾಗಿವೆ.

ಇತ್ತೀಚೆಗೆ ಮುದುಗೆರೆ ಸಮೀಪ ಮೂವರನ್ನು ಬಲಿ ತೆಗೆದುಕೊಂಡ ಟಿಟಿ-ಟ್ರಕ್ ನಡುವಿನ ಅಪಘಾತದ ಜತೆಗೆ, ಇದೇ ರಸ್ತೆಯಲ್ಲಿ ಬೈರಾಪಟ್ಟಣ ಬಳಿ ಇಬ್ಬರು ಬೈಕ್ ಸವಾರರ ಸಾವಿಗೆ ಕಾರಣವಾದ ಅಪಘಾತ, ಸರಣಿ ಅಪಘಾತ ಸೇರಿ ಕೆಲವು ದಿನಗಳಿಂದ ನಡೆಯುತ್ತಿರುವ ಅಪಘಾತಗಳಿಗೆ ಅತಿವೇಗ ಪ್ರಮುಖ ಕಾರಣವಾದರೆ, ಮತ್ತೊಂದೆಡೆ ಮುಂದೆ ಚಲಿಸುತ್ತಿರುವ ವಾಹನಗಳು ಏಕಾಏಕಿ ನಿಲುಗಡೆ ಮಾಡುವುದು ಹಾಗೂ ಹೆದ್ದಾರಿ ಬದಿಯಲ್ಲಿ ವಾಹನ ನಿಲ್ಲಿಸಿರುವುದರಿಂದಲೇ ಹಲವು ಅಪಘಾತಗಳು ಸಂಭವಿಸಿವೆ.

ಸಂಚಾರ ನಿಯಮ ಉಲ್ಲಂಘನೆಯೂ ಕಾರಣ: ಅಜಾಗರೂಕತೆ ಹಾಗೂ ಹೆದ್ದಾರಿ ನಿಯಮ ಪಾಲನೆಯಾಗದಿರುವ ಜತೆಗೆ, ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂದಗತಿಯಲ್ಲಿ ಚಲಿಸುವ ಟ್ರಾಕ್ಟರ್, ಟ್ರಕ್, ಬೈಕ್, ಆಟೋ ಮೊದಲಾದ ಸಣ್ಣ ವಾಹನಗಳಿಂದಲೂ ಸಮಸ್ಯೆ ಎದುರಾಗುತ್ತಿದೆ. ಕಡಿಮೆ ವೇಗದಲ್ಲಿ ಚಲಿಸುವುದು, ಎಲ್ಲೆಂದರಲ್ಲಿ ನಿಲುಗಡೆ ಮಾಡುವುದು, ಯಾವುದೇ ಸೂಚನೆ ನೀಡದೆ ಲೈನ್ ಬದಲಾಯಿಸುವುದರಿಂದಲೂ ಅಪಘಾತಗಳು ನಿರಂತರವಾಗಲು ಕಾರಣವಾಗುತ್ತಿದೆ.

ಜನರ ಓಡಾಟವೂ ಕಾರಣ: ರಾಷ್ಟ್ರೀಯ ಹೆದ್ದಾರಿಗಳು ಬಹುತೇಕ ಜನಸಂಚಾರಕ್ಕೆ ನಿಷಿದ್ಧವಾಗಿರುತ್ತದೆ. ಈ ಹೆದ್ದಾರಿಯ ಇಕ್ಕೆಲಗಳಲ್ಲಿ ಬೇಲಿ ನಿರ್ಮಿಸಿ ಜನ ಹಾಗೂ ಜಾನುವಾರುಗಳು ಬರದಂತೆ ತಡೆವೊಡ್ಡಲಾಗಿದೆ. ಆದರೆ, ಈ ಬೇಲಿಯನ್ನು ಕಿತ್ತು ಒಂದು ಕಡೆಯಿಂದ ಮತ್ತೊಂದು ಕಡೆ ಸಂಚರಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಸಹ ಅಪಘಾತಕ್ಕೆ ಕಾರಣವಾಗುತ್ತಿದೆ. ಶುಕ್ರವಾರ ಮುಂಜಾನೆ ಹೆದ್ದಾರಿಯ ಪುಟ್ಟಪ್ಪನದೊಡ್ಡಿ ಬಳಿ ಅಪರಿಚಿತನೊಬ್ಬ ರಸ್ತೆ ದಾಟಲು ಹೋಗಿ ವಾಹನವೊಂದಕ್ಕೆ ಸಿಲುಕಿ ಮೃತಪಟ್ಟಿರುವುದು ಇದಕ್ಕೆ ಉದಾಹರಣೆಯಾಗಿದೆ.

ಒಟ್ಟಾರೆ, ಹಲವು ಕಾರಣಗಳಿಂದ ಈ ಹೆದ್ದಾರಿ ಅಪಘಾತಗಳ ಹಾಟ್‌ಸ್ಪಾಟ್ ಎಂದೆನಿಸುತ್ತಿದ್ದು, ಎಕ್ಸ್‌ಪ್ರೆಸ್ ಹೈವೇಯಲ್ಲಿ ಪಾಲಿಸಬೇಕಾದ ನಿಯಮಗಳನ್ನು ಈ ರಸ್ತೆಯಲ್ಲೂ ಪಾಲಿಸಿದರೆ, ಪ್ರಯಾಣಿಕರಿಗೆ ಸುರಕ್ಷತೆ ಸಿಗಲಿದೆ. ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಲಿ ಎಂಬ ಆಗ್ರಹ ಕೇಳಿಬಂದಿದೆ.