ನವದೆಹಲಿ: ದೇಶದಲ್ಲಿ ಕಳೆದ 24 ತಾಸುಗಳಲ್ಲಿ 60,975 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಆ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 31,67,323ಕ್ಕೆ ಏರಿಕೆಯಾಗಿದೆ.
ಕೋವಿಡ್ ನಿಯಂತ್ರಣಕ್ಕೆ ಸಿಗದೆ ಹೆಚ್ಚಾಗುತ್ತಿರುವುದಕ್ಕೆ ಕಳವಳವೂ ವ್ಯಕ್ತವಾಗುತ್ತಿದೆ. ಹಿರಿಯರೂ ಅಲ್ಲ, ಕಿರಿಯರೂ ಅಲ್ಲ, ಅರಿವುಗೇಡಿ ಜನರೇ ಇದಕ್ಕೆ ಕಾರಣರಾಗುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೆಚ್ಚು ಕಾಳಜಿ ಇಲ್ಲದ, ಮಾಸ್ಕ್ ಧರಿಸದೇ ಓಡಾಡುತ್ತಿರುವ ಜನರಿಂದಲೇ ಕರೊನಾ ಸಂಕಷ್ಟ ಮುಂದುವರಿಯುತ್ತಿದೆ ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ್ ಹೇಳಿದ್ದಾರೆ.
ಸದ್ಯ ದೇಶದಲ್ಲಿ ಮೂರು ಕರೊನಾ ಲಸಿಕೆಗಳು ಕ್ಲಿನಿಕಲ್ ಟ್ರಯಲ್ ನಡೆಸುತ್ತಿವೆ. ಪುಣೆಯ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಲಸಿಕೆ ಎರಡನೇ ಹಂತದಲ್ಲಿದ್ದರೆ, ದೇಶೀಯ ಕೋವಾಕ್ಸಿನ್ ಹಾಗೂ ಝೈಡಸ್ ಕ್ಯಾಡಿಲ್ಲಾದ ಲಸಿಕೆ ಮೊದಲನೇ ಹಂತದ ಪರೀಕ್ಷೆ ಪೂರ್ಣಗೊಳಿಸಿವೆ ಎಂದು ಅವರು ಮಾಹಿತಿ ನೀಡಿದರು.
ದೇಶದಲ್ಲಿ ಕರೊನಾದಿಂದ ಗುಣಮುಖರಾಗುತ್ತಿರುವವ ಪ್ರಮಾಣ ಶೇ.75.92ಕ್ಕೆ ಏರಿಕೆಯಾಗಿದ್ದು, ಈವರೆಗೆ 24,04,585 ಜನರು ಚೇತರಿಸಿಕೊಂಡಿದ್ದಾರೆ. ಸಾವಿನ ಪ್ರಮಾಣ ಶೇ.1.84 ಆಗಿದೆ ಎಂದು ಅವರು ತಿಳಿಸಿದ್ದಾರೆ.