ನ್ಯೂಸ್

ಊಟಕ್ಕೆ ಕರೆದ ಅಮ್ಮನ ತಲೆಗೆ ಗುಂಡು ಹೊಡೆದ ಮಗ; ಕಾರಣ ತೀರ ಕ್ಷುಲ್ಲಕ

ಪಟನಾ: ಪುತ್ರನಿಂದ ಗುಂಡೇಟು ತಿಂದ 55 ವರ್ಷದ ಮಹಿಳೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. 20 ವರ್ಷದ ಕಿರಾತಕ ಮಗ ತಾಯಿಗೆ ಗುಂಡು ಹೊಡೆದಿದ್ದು ಒಂದು ಕ್ಷುಲ್ಲಕ ಕಾರಣಕ್ಕೆ.

ಬಿಹಾರದ ಗ್ರಾಮಾಂತರ ಪಟನಾದಲ್ಲಿ ಘಟನೆ ನಡೆದಿದೆ. 20 ವರ್ಷದ ಯುವಕ ಅಂಗದ್​ ಯಾದವ್​, ತನ್ನ ಸ್ನೇಹಿತರೊಂದಿಗೆ ಚಾಟಿಂಗ್​ನಲ್ಲಿ ಮುಳುಗಿದ್ದ. ರಾತ್ರಿ 10.30 ಆದರೂ ಊಟಕ್ಕೆ ಬಾರದೆ, ಮೊಬೈಲ್​ ನೋಡುತ್ತಿದ್ದ ಮಗನನ್ನು ಅಮ್ಮ ಕರೆದಿದ್ದಾರೆ. ಪದೇಪದೆ ತನ್ನನ್ನು ಅಮ್ಮ ಕರೆಯುತ್ತಿರುವುದರಿಂದ ಕಿರಿಕಿರಿಗೊಂಡ ಮಗ, ಸಿಟ್ಟಿನಿಂದ ಅಲ್ಲಿಯೇ ಇದ್ದ ಪಿಸ್ತೋಲ್​ನಿಂದ ಅವರ ತಲೆಗೆ ಗುಂಡು ಹೊಡೆದಿದ್ದಾನೆ.

ಅಂಗದ್​​ನನ್ನು ಬಂಧಿಸಿರುವ ಪೊಲೀಸರು, ಆತ ಅಮ್ಮನಿಗೆ ಶೂಟ್​ ಮಾಡಲು ಬಳಸಿದ ಪಿಸ್ತೂಲ್​ನ್ನು ವಶಪಡಿಸಿಕೊಂಡಿದ್ದಾರೆ.

ಗಾಯಗೊಂಡ ತಾಯಿ ಮಂಜುರ್​ ದೇವಿ ಅವರಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಪಟನಾದ ವೈದ್ಯಕೀಯ ಕಾಲೇಜು ಮತ್ತು ಹಾಸ್ಪಿಟಲ್​ಗೆ ದಾಖಲಿಸಲಾಗಿದೆ.

ಯುವಕ ತಾಯಿಯ ತಲೆಗೆ ಹಿಂದಿನಿಂದ ಶೂಟ್​ ಮಾಡಿದ್ದಾನೆ. ಈತ ಮನೆಯ ಹೊರಗೆ ಕುಳಿತು ಚಾಟ್​ ಮಾಡುತ್ತಿದ್ದ. ಎಷ್ಟೇ ಸಲ ಕರೆದರು ಮನೆಯೊಳಗೆ ಬಾರದ ಮಗನನ್ನು ಕರೆಯಲೆಂದು ಮುಖ್ಯಬಾಗಿಲಿಗೆ ಹೋದರು. ಅಲ್ಲಿ ನಿಂತು ಕರೆದು, ವಾಪಸ್​ ಹೋಗುವಷ್ಟರಲ್ಲಿ ತಲೆಗೆ ಗುಂಡು ಹೊಡೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಅಮ್ಮಾ ಕ್ಷಮಿಸಿಬಿಡು, ಅವನೂ ನನ್ನ ಮದ್ವೆ ಆಗಲ್ಲ, ಬೇರೆಯವರನ್ನೂ ಆಗಲು ಬಿಡಲ್ಲ…

ಬಂಧಿಸಲು ಹೋದ ಪೊಲೀಸರತ್ತ ಕೂಡ ಆತ ಫೈರ್​ ಮಾಡಿದ್ದಾನೆ. ಆದರೆ ಅದು ವ್ಯರ್ಥವಾಗಿದೆ. ಘಟನೆ ವೇಳೆ ಮಂಜುರ್​ ದೇವಿ ಅವರ ನಾದಿನಿ ಕೂಡ ಇದ್ದರು. ಅವರ ಹೇಳಿಕೆಯನ್ನಾಧರಿಸಿ, ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. (ಏಜೆನ್ಸೀಸ್​)