ನ್ಯೂಸ್

ಅಮೆರಿಕ-ಇರಾನ್ ನಡುವೆ ಹೆಚ್ಚಿದ ಉದ್ವಿಗ್ನತೆ: ವಾಯುದಾಳಿಗೆ ಸಿದ್ಧವಾದ ಉಭಯ ರಾಷ್ಟ್ರಗಳು, ಮತ್ತೆ ಯುದ್ಧ ಭೀತಿ ಶುರು! Iran and America

Iran and America : ಇರಾನ್​ ಮತ್ತು ಅಮೆರಿಕ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಕ್ಷಣದಲ್ಲೂ ಅಮೆರಿಕ, ಇರಾನ್ ಮೇಲೆ ವಾಯುದಾಳಿ ನಡೆಸಬಹುದು ಎಂಬ ವರದಿಗಳಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಭಾನುವಾರ ಇರಾನ್‌ಗೆ ವಾರ್ನಿಂಗ್​ ನೀಡಿದ್ದಾರೆ. ಅಮೆರಿಕದೊಂದಿಗೆ ಪರಮಾಣು ಒಪ್ಪಂದ ಮಾಡಿಕೊಳ್ಳದಿದ್ದರೆ ಗಂಭೀರ ಬಾಂಬ್ ದಾಳಿಗಳು ಸಂಭವಿಸಬಹುದು ಎಂದು ಎಚ್ಚರಿಸಿದ್ದಾರೆ. ಇದೇ ಸಂದರ್ಭದಲ್ಲಿ, ಇರಾನ್ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿಗಳು ನಡೆಯಬಹುದು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿವೆ.

ಮತ್ತೊಂದೆಡೆ, ಇರಾನ್ ಕೂಡ ವಾಯುದಾಳಿಗಳನ್ನು ಎದುರಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಅಮೆರಿಕದೊಂದಿಗೆ ಸಂಬಂಧ ಹೊಂದಿರುವ ಸ್ನೇಹಪರ ರಾಷ್ಟ್ರಗಳ ನೆಲೆಗಳ ಮೇಲೆ ದಾಳಿ ಮಾಡಲು ಇರಾನ್ ಯೋಜನೆಗಳನ್ನು ರೂಪಿಸುತ್ತಿದೆ ಎಂದು ತೋರುತ್ತದೆ. ಈಗಾಗಲೇ ನೆಲೆಗಳನ್ನು ಟಾರ್ಗೆಟ್​ ಮಾಡುವ ಕ್ಷಿಪಣಿಗಳನ್ನು ಇರಾನ್ ಸಿದ್ಧಪಡಿಸಿದೆ ಎಂದು ಹೇಳಲಾಗುತ್ತಿದೆ.

ಇರಾನ್ ತನ್ನದೇ ಆದ ಪರಮಾಣು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಅಮೆರಿಕ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಇರಾನ್ ತಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕೆಂದು ಟ್ರಂಪ್ ಸೂಚಿಸಿದ್ದಾರೆ. ಆದರೆ, ಅದರಲ್ಲಿ ಆಸಕ್ತಿ ಹೊಂದಿಲ್ಲ ಎಂದು ಇರಾನ್​ ಹೇಳುತ್ತಿದ್ದು, ಟ್ರಂಪ್ ಮಾತಿಗೂ ಕ್ಯಾರೆ ಎನ್ನದೇ ಪರಮಾಣು ಅಭಿವೃದ್ಧಿಪಡಿಸುತ್ತಿದೆ. ಅಲ್ಲದೆ, ಅಮೆರಿಕ ಜೊತೆ ಯಾವುದೇ ನೇರ ಮಾತುಕತೆ ನಡೆಸುವುದಿಲ್ಲ ಎಂದು ನಿರ್ಧರಿಸಿದೆ.

ಇತ್ತ ಇರಾನ್​ ಪರೋಕ್ಷ ಮಾತುಕತೆಗೆ ಸಿದ್ಧ ಎಂದು ಹೇಳಿದೆ. ಆದರೆ, ಇದು ಟ್ರಂಪ್​ಗೆ ಇಷ್ಟವಾಗಿಲ್ಲ. ಪರಮಾಣು ವಿಚಾರದಲ್ಲಿ ಒಪ್ಪಂದ ಮಾಡಿಕೊಳ್ಳದಿದ್ದರೆ, ಹೆಚ್ಚಿನ ಸುಂಕಗಳನ್ನು ವಿಧಿಸುವುದಾಗಿ ಮತ್ತು ಮಾರಕ ಬಾಂಬ್ ದಾಳಿಗಳನ್ನು ನಡೆಸುವುದಾಗಿ ಟ್ರಂಪ್​ ಅವರು ಭಾನುವಾರ ಎಚ್ಚರಿಸಿದ್ದಾರೆ. ಹೀಗಾಗಿ ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿ ಬಿಗಡಾಯಿಸಿದೆ. (ಏಜೆನ್ಸೀಸ್​)