ನ್ಯೂಸ್

ಇಸ್ರೇಲ್ ತೀವ್ರ ದಾಳಿ ಬೆನ್ನಲ್ಲೇ ಮಹತ್ವದ ನಿರ್ಧಾರ ಕೈಗೊಳ್ಳಲು ಇರಾನ್​ ಸಜ್ಜು! ತಾರಕಕ್ಕೇರಿದ ಸಂಘರ್ಷದ ಕಾವು | Iran

Iran Nuclear Treaty: ಇಸ್ರೇಲ್​ನ ಸರಣಿ ಕ್ಷಿಪಣಿ ಮತ್ತು ಡ್ರೋನ್​ ದಾಳಿಗಳಿಂದ ನಲುಗಿರುವ ಇರಾನ್, ಪ್ರತೀಕಾರದ ದಾಳಿಗೆ ಪಣತೊಟ್ಟು ನಿಂತಿದೆ. ಇರಾನ್-ಇಸ್ರೇಲ್ ಸಂಘರ್ಷದಲ್ಲಿ 90ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದು, ಕಳೆದ ನಾಲ್ಕು ದಿನಗಳಿಂದ ವೈಮಾನಿಕ ದಾಳಿಗಳು ನಡೆಯುತ್ತಿವೆ. ಯುದ್ಧ ಭೀತಿ ಭುಗಿಲೆದ್ದ ಹಿನ್ನೆಲೆ ಇದೀಗ ಇರಾನ್ ಪ್ರಮುಖ ಹಾಗೂ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಪರಮಾಣು ಪ್ರಸರಣ ರಹಿತ ಒಪ್ಪಂದದಿಂದ (NPT) ಹಿಂದೆ ಸರಿಯಲು ಇರಾನ್ ಸಂಸತ್ತಿನಲ್ಲಿ ಮಸೂದೆಯನ್ನು ಸಿದ್ಧಪಡಿಸುತ್ತಿದೆ. ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಅಭಿವೃದ್ಧಿಯನ್ನು ಟೆಹ್ರಾನ್ ಇಂದಿಗೂ ವಿರೋಧಿಸುತ್ತದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಮೊದಲು, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಮಾತನಾಡಿ, ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿಲ್ಲ ಮತ್ತು ಪರಮಾಣು ಶಕ್ತಿ ಹಾಗೂ ಸಂಶೋಧನೆಯ ಹಕ್ಕನ್ನು ಉಳಿಸಿಕೊಳ್ಳುತ್ತದೆ ಎಂದರು.

ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ವಿರುದ್ಧ ಧಾರ್ಮಿಕ ಶಾಸನವನ್ನು ಸುಪ್ರೀಂ ಲೀಡರ್​ ಅಯತೊಲ್ಲಾ ಅಲಿ ಖಮೇನಿ ಪುನರುಚ್ಚರಿಸಿದ್ದರು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಇರಾನ್ ಎನ್​ಪಿಟಿ ಒಪ್ಪಂದದಿಂದ ಹಿಂದೆ ಸರಿಯುವ ಬಗ್ಗೆ ಚಿಂತಿಸಿದೆ. ಇದಲ್ಲದೇ ಇರಾನ್ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಯಲ್ಲಿನ ತನ್ನ ಸದಸ್ಯತ್ವದಿಂದ ಹಿಂದೆ ಸರಿಯುವ ಬಗ್ಗೆಯೂ ಯೋಚಿಸುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಯುದ್ಧ ಭೀತಿ ಬೆನ್ನಲ್ಲೇ ನಾಗರಿಕರು ಸ್ಥಳಾಂತರ

ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತೀವ್ರಗೊಳ್ಳುತ್ತಿದ್ದಂತೆ, ಎರಡೂ ದೇಶಗಳ ಮಧ್ಯೆ ಯುದ್ಧದ ಭೀತಿ ಮೂಡಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಇರಾನ್​ ಈ ನಿರ್ಧಾರ ತೆಗೆದುಕೊಳ್ಳಲು ಸಿದ್ಧರೆ ನಡೆಸುತ್ತಿದೆ. ಇರಾನಿನ ಶಸ್ತ್ರಾಸ್ತ್ರ ಸೌಲಭ್ಯಗಳ ಸಮೀಪ ವಾಸಿಸುವ ನಿವಾಸಿಗಳಿಗೆ ಎಚ್ಚರಿಕೆ ರವಾನಿಸಿರುವ ಇಸ್ರೇಲ್​, ಶೀಘ್ರವೇ ಸ್ಥಳಾಂತರಗೊಳ್ಳುವಂತೆ ಹೇಳಿದೆ,(ಏಜೆನ್ಸೀಸ್).