ಟೆಹರಾನ್: ಇಂಗ್ಲೆಂಡ್, ಕುವೈತ್ ಹಾಗೂ ಯುಎಇ ರಾಷ್ಟ್ರಗಳು ಕರೊನಾ ವ್ಯಾಪಕವಾಗಿ ಹರಡುತ್ತಿರುವ ಭಾರತಕ್ಕೆ ಈಗಾಗಲೇ ವಿಮಾನಸೇವೆಯನ್ನು ರದ್ದು ಮಾಡಿವೆ. ಇದೀಗ ಇರಾನ್ ಕೂಡ ಭಾರತಕ್ಕೆ ವಿಮಾನಸೇವೆಯನ್ನು ರದ್ದು ಮಾಡಿ ಆದೇಶ ಮಾಡಿದೆ.
ಇರಾನ್ನಿಂದ ಭಾರತಕ್ಕೆ ಹಾಗೂ ಪಾಕಿಸ್ತಾನ್ಕ್ಕೆ ಹೋಗುವ ಹಾಗೂ ಬರುವ ಎಲ್ಲ ವಿಮಾನಗಳನ್ನು ಮುಂದಿನ ಆದೇಶದವರೆಗೆ ರದ್ದು ಮಾಡಲಾಗಿದೆ ಎಂದು IRNA ಸುದ್ದಿ ಸಂಸ್ಥೆ ಅಲ್ಲಿನ ನಾಗರಿಕ ವಿಮಾನಯಾನ ವಕ್ತಾರರನ್ನು ಉಲ್ಲೇಖಿಸಿ ವರದಿ ಮಾಡಿದೆ.
43 ದೇಶಗಳಿಗೆ ಇರಾನ್ ಕಳೆದ ಒಂದು ವರ್ಷದಿಂದ ವಿಮಾನಸೇವೆಯನ್ನು ರದ್ದು ಮಾಡಿತ್ತು. ಆದರೆ ಭಾರತಕ್ಕೆ ಆಯ್ದ ವಿಮಾನಗಳ ಹಾರಾಟವನ್ನು ಮುಂದುವರೆಸಿತ್ತು. ಇದೀಗ ಭಾರತದಲ್ಲಿ ಮತ್ತೆ ಕೋವಿಡ್ ಅಲೆ ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇರಾನ್ ನಾಗರಿಕ ವಿಮಾನಯಾನ ಸಚಿವಾಲಯದ ವಕ್ತಾರ ಮಹಮ್ಮದ್ ಹಸನ್ ಜೈಬಾಕಾಶ್ ಅವರು ತಿಳಿಸಿದ್ದಾರೆ.
ಇರಾನ್ನಲ್ಲಿ ಗುರುವಾರ 18230 ಹೊಸ ಕೋವಿಡ್ ಪ್ರಕರಣಗಳು ಕಂಡು ಬಂದಿವೆ. ಒಟ್ಟಾರೆ ಆ ದೇಶದಲ್ಲಿ 24 ಲಕ್ಷ ಕರೊನಾ ಪ್ರಕರಣಗಳು ವರದಿಯಾಗಿವೆ.