ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದ ಸಂಘರ್ಷ 
ನ್ಯೂಸ್

ಅಮೆರಿಕದ ದಾಳಿಗೆ ಇರಾನ್ ಪ್ರತೀಕಾರ: ಬಹ್ರೇನ್ ಮೇಲೆ ಕ್ಷಿಪಣಿ ದಾಳಿ, ಕುವೈತ್‌ನಲ್ಲೂ ಹೈ ಅಲರ್ಟ್! | Iran Attacks Bahrain

Iran Attacks Bahrain: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಹಾರ್ಮುಜ್ ಜಲಸಂಧಿಯ ಕ್ಯೂಶ್ಮ್ ದ್ವೀಪದ ಕ್ಷಿಪಣಿ ತಾಣದ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಬಹ್ರೇನ್ ಮತ್ತು ಕುವೈತ್‌ನಲ್ಲಿ ಭದ್ರತಾ ಆತಂಕ ಎದುರಾಗಿದೆ. ನವೆಂಬರ್ 18ರ ಬುಧವಾರ ಬಹ್ರೇನ್ ಮೇಲೆ ಇರಾನ್ ನಡೆಸಿದ ವೈಮಾನಿಕ ದಾಳಿಗಳನ್ನು ಅಲ್ಲಿನ ವಾಯು ರಕ್ಷಣಾ ವ್ಯವಸ್ಥೆ ತಡೆದಿದ್ದು, ಇತ್ತ ಕುವೈತ್‌ನಲ್ಲೂ ಶತ್ರು ಡ್ರೋನ್‌ಗಳ ಬೆದರಿಕೆಯನ್ನು ಎದುರಿಸಲು ಸೇನೆ ಸಜ್ಜಾಗಿದೆ.

ಬಹ್ರೇನ್ ರಕ್ಷಣಾ ಪಡೆ ನೀಡಿರುವ ಮಾಹಿತಿ ಪ್ರಕಾರ, ಬುಧವಾರ ಮುಂಜಾನೆ ಇರಾನ್‌ನಿಂದ ನಡೆದ ಹಲವು ವೈಮಾನಿಕ ದಾಳಿಗಳನ್ನು ವಾಯು ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿ ತಡೆದಿದೆ. ಇರಾನ್ ತನ್ನ ದೇಶದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ ಎಂದು ಬಹ್ರೇನ್ ರಕ್ಷಣಾ ಪಡೆ ಆರೋಪಿಸಿದೆ.

ಈ ಹಿನ್ನೆಲೆಯಲ್ಲಿ ಬಹ್ರೇನ್‌ನ ಆಂತರಿಕ ಸಚಿವಾಲಯ ನಿವಾಸಿಗಳಿಗೆ ಎರಡು ಬಾರಿ ತುರ್ತು ಎಚ್ಚರಿಕೆ ಸಂದೇಶ ರವಾನಿಸಿತ್ತು. ಜನರು ಆತಂಕಪಡದೆ ಹತ್ತಿರದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿತ್ತು. ಬಳಿಕ ಎರಡೂ ಎಚ್ಚರಿಕೆಗಳನ್ನು ಹಿಂಪಡೆದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬ ಸಂದೇಶ ನೀಡಲಾಯಿತು.

ಇದಕ್ಕೂ ಮೊದಲು ನವೆಂಬರ್ 17ರಂದು, ಅಮೆರಿಕದ ಡ್ರೋನ್‌ಗಳು ತನ್ನ ವಾಯುಪ್ರದೇಶವನ್ನು ಉಲ್ಲಂಘಿಸುತ್ತಿವೆ ಎಂಬ ಕಾರಣ ನೀಡಿ ಬಹ್ರೇನ್‌ನ ಶೇಖ್ ಇಸಾ ವಾಯುನೆಲೆಯಲ್ಲಿರುವ ಅಮೆರಿಕದ ರಾಡಾರ್ ವ್ಯವಸ್ಥೆ ಮೇಲೆ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್‌ನ IRGC ಹೇಳಿಕೊಂಡಿತ್ತು. ಆದರೆ, ಈ ದಾಳಿಯನ್ನು ತಡೆಯಲಾಗಿದ್ದು ಯಾವುದೇ ಹಾನಿಯಾಗಿಲ್ಲ ಎಂದು ಬಹ್ರೇನ್ ಮತ್ತು ಅಮೆರಿಕ ಸ್ಪಷ್ಟಪಡಿಸಿವೆ. ಅಮೆರಿಕದ ನೌಕಾಪಡೆಯ ಐದನೇ ಫ್ಲೀಟ್ (US Fifth Fleet) ಪ್ರಧಾನ ಕಚೇರಿ ಇಲ್ಲಿರುವುದರಿಂದ ಬಹ್ರೇನ್‌ಗೆ ಹೆಚ್ಚಿನ ಆಯಕಟ್ಟಿನ ಮಹತ್ವವಿದೆ.

ಕುವೈತ್‌ನಲ್ಲೂ ಡ್ರೋನ್ ದಾಳಿ ಆತಂಕ

ಇತ್ತ ಕುವೈತ್‌ನಲ್ಲೂ ಬುಧವಾರ ವೈಮಾನಿಕ ಬೆದರಿಕೆ ಎದುರಾಗಿದೆ. ಶತ್ರು ಡ್ರೋನ್ ದಾಳಿಗಳನ್ನು ಎದುರಿಸಲು ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಕುವೈತ್ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ತಿಳಿಸಿದೆ.

ಇರಾನ್ ಹೇಳಿದ್ದೇನು?

ಇರಾನ್​ ವಾಯು ರಕ್ಷಣಾ ವ್ಯವಸ್ಥೆಗಳು ಡ್ರೋನ್‌ಗಳನ್ನು ತಡೆಯುವ ವೇಳೆ ಸ್ಫೋಟದ ಶಬ್ದ ಕೇಳಿಸಬಹುದು ಎಂದು ಸೇನೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಅಲ್ಲದೆ, ಅಧಿಕಾರಿಗಳು ನೀಡುವ ಭದ್ರತಾ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದೆ. ಆದರೆ, ಆರಂಭಿಕ ಹೇಳಿಕೆಯಲ್ಲಿ ಡ್ರೋನ್‌ಗಳು ಯಾವ ದೇಶದಿಂದ ಬಂದಿವೆ ಅಥವಾ ಯಾವುದೇ ಸಾವು-ನೋವು ಸಂಭವಿಸಿದೆಯೇ ಎಂಬ ಬಗ್ಗೆ ಮಾಹಿತಿ ನೀಡಿರಲಿಲ್ಲ.

ಇದರ ಬೆನ್ನಲ್ಲೇ ಇರಾನ್ ಸೇನೆ ಮಹತ್ವದ ಹೇಳಿಕೆ ನೀಡಿದೆ. ಕುವೈತ್‌ನ ಅಲಿ ಅಲ್ ಸೇಲಂ ವಾಯುನೆಲೆಯಲ್ಲಿರುವ ಅಮೆರಿಕದ ಪೇಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆಗಳು ಹಾಗೂ ಡ್ರೋನ್ ಮತ್ತು ಕ್ಷಿಪಣಿ ಉಡಾವಣಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇರಾನ್ ಸೇನೆ ಹೇಳಿಕೊಂಡಿದೆ. ಈ ಮಾಹಿತಿಯನ್ನು ಇರಾನ್‌ನ ಸರ್ಕಾರಿ ದೂರದರ್ಶನ ಪ್ರಸಾರ ಮಾಡಿದೆ.

ಇದನ್ನೂ ಓದಿ: ಟಿಕೆಟ್ ಕೇಳಿದ್ದಕ್ಕೆ 'ಪರ್ಸ್ ಕಳ್ಳತನ'ದ ನಾಟಕ; ಪ್ರಯಾಣಿಕನ ಕಾಲರ್ ಹಿಡಿದ ಟಿಟಿಇ | Udhna Railway Incident

ಆದರೆ, ಇರಾನ್ ಹೇಳಿಕೊಂಡಿರುವ ದಾಳಿಯಿಂದ ಯಾವುದೇ ಹಾನಿಯಾಗಿದೆಯೇ ಎಂಬುದಕ್ಕೆ ಸ್ವತಂತ್ರ ದೃಢೀಕರಣ ಲಭ್ಯವಾಗಿಲ್ಲ. ಕುವೈತ್‌ನ ಅಲಿ ಅಲ್ ಸೇಲಂ ವಾಯುನೆಲೆ ಅಮೆರಿಕದ ಸೇನಾ ಕಾರ್ಯಾಚರಣೆಗಳಿಗೆ ಪ್ರಮುಖ ನೆಲೆಯಾಗಿದೆ. ಹೀಗಾಗಿ, ಬಹ್ರೇನ್ ಮತ್ತು ಕುವೈತ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಗಲ್ಫ್ ರಾಷ್ಟ್ರಗಳಲ್ಲಿ ಭದ್ರತಾ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ. (ಏಜೆನ್ಸೀಸ್​)