ನ್ಯೂಸ್

ಇರಾನ್​-ಇಸ್ರೇಲ್​ ಸಂಘರ್ಷ| ಆಪರೇಷನ್ ಸಿಂಧು ಅಡಿಯಲ್ಲಿ ಈವರೆಗೆ 517 ಭಾರತೀಯರು ವಾಪಸ್ |Israel vs iran

ನವದೆಹಲಿ: ಆಪರೇಷನ್ ಸಿಂಧು ಅಡಿಯಲ್ಲಿ ಇದುವರೆಗೆ 517 ಭಾರತೀಯ ಪ್ರಜೆಗಳು ಇರಾನ್‌ನಿಂದ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಅಪರೇಷನ್‌ ಸಿಂಧು ವಿಮಾನ ನಾಗರಿಕರನ್ನು ತವರಿಗೆ ಕರೆತಂದಿದೆ. ಧಾರ್ಮಿಕ ಯಾತ್ರಿಕರು ಹಾಗೂ ವಿದ್ಯಾರ್ಥಿಗಳು ಸೇರಿ ಭಾರತದ ನಾಗರಿಕರನ್ನು ಚಾರ್ಟಡ್ ವಿಮಾನದಲ್ಲಿ ಕರೆತರಲಾಗಿದೆ. ಜೂನ್ 20 ರಾತ್ರಿ 11.30ಕ್ಕೆ ವಿಮಾನ ದೆಹಲಿಗೆ ಬಂದಿಳಿಯಿತು. ಅವರನ್ನು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಅರುಣ್ ಚಟರ್ಜಿ ಬರಮಾಡಿಕೊಂಡರು ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ 'ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ತುರ್ಕಮೆನಿಸ್ತಾನದ ಅಶ್ಗಬಾತ್‌ನಿಂದ ವಿಶೇಷ ವಿಮಾನ ನವದೆಹಲಿಗೆ ಬಂದಿತು ಎಂದು ಜೈಸ್ವಾಲ್ ಹೇಳಿದ್ದಾರೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ಪರಿಸ್ಥಿತಿ ಹದಗೆಡುತ್ತಿರುವುದರಿಂದ, ಇರಾನ್‌ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಸರ್ಕಾರ ಆಪರೇಷನ್ ಸಿಂಧುವನ್ನು ಪ್ರಾರಂಭಿಸಿದೆ.

ಆಪರೇಷನ್‌ ಸಿಂಧು ಮುಂದುವರೆದಿದ್ದು, ತುರ್ಕಮೆನಿಸ್ತಾನ್‌ನ ಅಶಾಬಾತ್‌ನಿಂದ ಭಾರತೀಯರು ಇದ್ದ ವಿಶೇಷ ವಿಮಾನ ಜೂನ್ 21ರ ಮುಂಜಾನೆ 3 ಗಂಟೆಗೆ ದೆಹಲಿಗೆ ಬಂದಿತು. ಇದರೊಂದಿಗೆ ಆಪರೇಷನ್ ಸಿಂಧು ಅಡಿ 517 ಭಾರತೀಯರು ತಾಯ್ಕಾಡಿಗೆ ಮರಳಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸ್ಥಳಾಂತರ ಕಾರ್ಯದಲ್ಲಿ ನೇಪಾಳ ಹಾಗೂ ಶ್ರೀಲಂಕಾದ ಪ್ರಜೆಗಳು ಕೂಡ ಭಾಗಿಯಾಗಲಿದ್ದಾರೆ ಎಂದು ಇರಾನ್​​ನಲ್ಲಿರುವ ಭಾರತದ ರಾಯಭಾರಿ ಕಚೇರಿ ಹೇಳಿದೆ. ಇಸ್ಲಾಮಿಕ್ ಗಣರಾಜ್ಯದ ಮಿಲಿಟರಿ ಮತ್ತು ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಆಪರೇಷನ್ ರೈಸಿಂಗ್ ಲಯನ್ ಅಡಿಯಲ್ಲಿ ಟೆಹ್ರಾನ್ ಮೇಲೆ ದಾಳಿಯನ್ನು ನಡೆಸಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಪಶ್ಚಿಮ ಏಷ್ಯಾದಿಂದ ತನ್ನ ಪ್ರಜೆಗಳನ್ನು ಸ್ಥಳಾಂತರಿಸುವ ನಿರ್ಣಾಯಕ ಕಾರ್ಯಾಚರಣೆಯಾದ ಆಪರೇಷನ್ ಸಿಂಧುವನ್ನು ಭಾರತ ಪ್ರಾರಂಭಿಸಿತ್ತು.

ಜೂನ್ 19ರಿಂದ ಈ ಕಾರ್ಯಚರಣೆ ನಡೆದಿದೆ. ಮೊದಲು ವಿಮಾನದಲ್ಲಿ ಉರ್ಮಿಯಾ ವಿಶ್ವವಿದ್ಯಾಲಯದ 110 ಭಾರತೀಯ ವಿದ್ಯಾರ್ಥಿಗಳು ದೆಹಲಿಯಲ್ಲಿ ಇಳಿದಿದ್ದಾರೆ. ಈ ವಿದ್ಯಾರ್ಥಿಗಳನ್ನು ಭೂ ಮಾರ್ಗದ ಮೂಲಕ ಅರ್ಮೇನಿಯಾಗೆ ಸ್ಥಳಾಂತರಿಸಲಾಯಿತು, ನಂತರ ಯೆರೆವಾನ್‌ನಿಂದ ನವದೆಹಲಿಗೆ ವಿಮಾನದಲ್ಲಿ ಕರೆದೊಯ್ಯಲಾಯಿತು. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.