ನ್ಯೂಸ್

ಅಮೆರಿಕ ಏರ್​ಬೇಸ್​ ಗುರಿಯಾಗಿಸಿ ಡಜನ್​ಗಿಂತಲೂ ಹೆಚ್ಚಿನ ಕ್ಷಿಪಣಿಗಳಿಂದ ದಾಳಿ ನಡೆಸಿದ ಇರಾನ್​

ಬಾಗ್ದಾದ್​: ಇರಾಕ್​ನಲ್ಲಿರುವ ಅಮೆರಿಕ ಮತ್ತು ಸಮ್ಮಿಶ್ರ ಪಡೆಗಳು ನೆಲೆಸಿರುವ ಎರಡು ವಾಯುನೆಲೆಗಳನ್ನು ಗುರಿಯಾಗಿರಿಸಿಕೊಂಡು ಇರಾನ್​​ ಡಜನ್​ಗಿಂತಲೂ ಹೆಚ್ಚಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿರುವುದಾಗಿ ಪೆಂಟಗಾನ್(ಯುಎಸ್​ ರಕ್ಷಣಾ ಇಲಾಖೆಯ ಮುಖ್ಯ ಕಚೇರಿ) ತಿಳಿಸಿದೆ.

​ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಡಜನ್​ಗಿಂತಲೂ ಹೆಚ್ಚಿನ ಕ್ಷಿಪಣಿಗಳನ್ನು ಇರಾನ್​ ಫೈರ್​ ಮಾಡಿದೆ. ಇರಾಕ್​ನಲ್ಲಿರುವ ಯುಎಸ್​ ಮಿಲಿಟರಿ ಮತ್ತು ಸಮ್ಮಿಶ್ರ ಪಡೆಗಳ ಏರ್​ಬೇಸ್​ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಇರಾನ್​ನಿಂದ ದಾಳಿ ನಡೆದಿರುವುದು ಸ್ಪಷ್ಟವಾಗಿದೆ ಎಂದು ಸಾರ್ವಜನಿಕ ವ್ಯವಹಾರಗಳ ರಕ್ಷಣಾ ಕಾರ್ಯದರ್ಶಿಗೆ ಸಹಾಯಕ ಜೊನಾಥನ್ ಹಾಫ್​ಮ್ಯಾನ್​ ಹೇಳಿಕೆ ನೀಡಿದ್ದಾರೆ.

ಆದರೆ ಏರ್​ಬೇಸ್​ನಲ್ಲಿ ಸಂಭವಿಸಿರುವ ಹಾನಿಯ ಬಗ್ಗೆ ಈವರೆಗೂ ಯಾವುದೇ ವರದಿಯಾಗಿಲ್ಲ. ಕಳೆದವಾರ ಯುಎಸ್​ ಸೇನೆ ನಡೆಸಿದ ವಾಯುದಾಳಿಯಲ್ಲಿ ಇರಾನ್​ ಸೇನಾ ನಾಯಕ ಜನರಲ್​ ಕಾಸಿಂ ಸುಲೆಮಾನಿ ಹತ್ಯೆಯ ಬೆನ್ನಲ್ಲೇ ಇರಾನ್​ ಪ್ರತಿಜ್ಞೆಗೆ ಇರಾಕ್​ನಲ್ಲಿರುವ ತೆಹ್ರಾನ್​ ಪರ ಬಣಗಳು ಸ್ಪಂದನೆ ನೀಡುವುದಾಗಿ ಹೇಳಿದ ಬೆನ್ನಲ್ಲೇ ಇರಾನ್​ ಕ್ಷಿಪಣಿಗಳ ದಾಳಿ ನಡೆಸಿದೆ.

ಇನ್ನು ಇರಾನ್​ ಇಡುವ ಪ್ರತಿ ಹೆಜ್ಜೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್​ ಗಮನಿಸುತ್ತಿದ್ದು, ತಮ್ಮ ರಾಷ್ಟ್ರೀಯ ರಕ್ಷಣಾ ತಂಡದೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಪರಿಸ್ಥಿತಿಯ ಮೌಲ್ಯಮಾಪನ ಮಾಡುತ್ತಿದ್ದಾರೆ ಎಂದು ವೈಟ್​ಹೌಸ್​ ತಿಳಿಸಿದೆ.

ಈ ಕ್ಷಿಪಣಿ ದಾಳಿಗೂ ಮುನ್ನ ಸುಮಾರು 9 ರಾಕೆಟ್​ಗಳು ವಿದೇಶಿ ಪಡೆಗಳು ನೆಲೆಸಿರುವ ಅತಿದೊಡ್ಡ ಇರಾಕ್​ ಮಿಲಿಟರಿ ಕಾಂಪೌಂಡ್​ ಐನ್​ ಅಲ್​ ಅಸಾದ್​ ಏರ್​ಬೇಸ್​ ಅನ್ನು ನುಸುಳಿದ್ದವು. ಇರಾನ್​ ಸಾಲು ಸಾಲು ದಾಳಿ ನಡೆಸುತ್ತಿದ್ದು, ಅಮೆರಿಕ ಮತ್ತು ಇರಾನ್​ ನಡುವಿನ ತಿಕ್ಕಾಟ ಮುಂದುವರಿದಿದೆ. ಅಲ್ಲದೆ ಇರಾನ್​ ಘಂಟಾಘೋಷವಾಗಿ ದಾಳಿಯ ಹೊಣೆ ಹೊತ್ತುಕೊಂಡಿದೆ. (ಏಜೆನ್ಸೀಸ್​)