ಬೆಂಗಳೂರು: ಇಬ್ಬರು ಸರ್ಕಾರಿ ಅಧಿಕಾರಿಗಳಾದ ಡಿ. ರೂಪಾ ಹಾಗೂ ರೋಹಿಣಿ ಸಿಂಧೂರಿ ಜಟಾಪಟಿಯ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿದ್ದು ಅವರ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮ ಕೈಗೊಳ್ಳುವವರೆಗೆ ಪರಿಸ್ಥಿತಿ ತಲುಪಿದೆ. ಈ ಬಗ್ಗೆ ಇಂದು ಅಥವಾ ನಾಳೆ ಆದೇಶ ಹೊರಡುವ ಸಾಧ್ಯತೆ ಇದೆ.
ಪ್ರಕರಣದ ಬಗ್ಗೆ ಸಂಪುಟ ಸಭೆಯಲ್ಲೂ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಡಿ. ರೂಪಾ ಹಾಗೂ ರೋಹಿಣಿ ಸಿಂಧೂರಿಗೆ ಅಧೀನ ಕಾರ್ಯದರ್ಶಿ ನೋಟೀಸ್ ಕಳಿಸಿದ್ದು ಮಾಧ್ಯಮಗಳಲ್ಲಿ ಮಾತನಾಡಬಾರದು ಎಂದು ಸೂಚಿಸಲಾಗಿದೆ.
'ನಿವು ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದರಿಂದ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಅದಲ್ಲದೇ ನೀವು ಇನ್ನೊಬ್ಬ ಸರ್ಕಾರಿ ಅಧಿಕಾರಿಯ ವಿರುದ್ಧ ಆರೋಪ ಮಾಡಿದ್ದೀರಿ. ಹೀಗಾಗಿ ನೀವು ಮಾಧ್ಯಮಗಳಿಗೆ ಸರ್ಕಾರಿ ಕೆಲಸದ ಹೊರತಾಗಿ ಬೇರೆ ಯಾವುದೇ ವಿಚಾರವಾಗಿ ಹೇಳಿಕೆ ನೀಡಬಾರದು' ಎಂದು ಅಧೀನ ಕಾರ್ಯದರ್ಶಿಯಾದ ಜೇಮ್ಸ್ ತಾರಕನ್ ನೋಟೀಸ್ ನೀಡಿದ್ದಾರೆ.