ಉಡುಪಿ: ಎಲ್‌ಐಸಿ ಶೇರು ವಿಕ್ರಯ ದೇಶದ ಆರ್ಥಿಕತೆಯ ಮೇಲೆ ಮತ್ತು ದೇಶದ ಜನ ಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ರಾಷ್ಟ್ರೀಕರಣದ ಮೂಲ ಉದ್ದೇಶಗಳಿಗೆ ಹಿನ್ನೆಡೆಯಾಗಲಿದೆ. ಖಾಸಗೀ ಸಂಸ್ಥೆಗಳಂತೆ ಎಲ್‌ಐಸಿ ಕೂಡ ದೊಡ್ಡ ಮೊತ್ತದ ಪಾಲಿಸಿಗಳಂತಹ ಹೆಚ್ಚು ಲಾಭದ ಗುರಿಯತ್ತ ಕೇಂದ್ರೀಕೃತವಾಗಬೇಕಾಗುತ್ತದೆ. ಈ ಪ್ರಕ್ರಿಯೆಯಿಂದ ಬಡವರ ಮತ್ತು ಕೆಳ ಮಧ್ಯಮ ವರ್ಗದ ಸಣ್ಣ ಮೊತ್ತದ ಪಾಲಿಸಿಗಳು ಸ್ಥಗಿತವಾಗಲಿವೆ. ಹೂಡಿಕೆ ಹಿಂಪಡೆತ ಖಾಸಗೀಕರಣದ ಮೊದಲ ಹೆಜ್ಜೆಯಾಗಿದೆ ಎಂದು ಉಡುಪಿ ವಿಭಾಗ ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ. ಕುಂದರ್ ಹೇಳಿದರು.
ಗುರುವಾರ ಅಜ್ಜರಕಾಡಿನಲ್ಲಿರುವ ಎಲ್.ಐ.ಸಿ ಯ ವಿಭಾಗೀಯ ಕಚೇರಿ ಆವರಣದಲ್ಲಿ ಎಲ್‌ಐಸಿಯ ಶೇರು ವಿಕ್ರಯ ಮತ್ತು ವಿಮೆಯಲ್ಲಿ ವಿದೇಶಿ ನೇರ ಬಂಡವಾಳದ ಮಿತಿ ಹೆಚ್ಚಳ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಆರ್ಥಿಕ ದುರ್ಬಲ ವರ್ಗದವರಿಗೆ ವಿಮಾ ಸೌಲಭ್ಯವನ್ನು ವಿಸ್ತರಿಸುವ ಸಾಮಾಜಿಕ ಬದ್ಧತೆಗೆ ಹಿನ್ನೆಡೆಯಾಗಲಿದೆ. ಅದೇ ರೀತಿಯಲ್ಲಿ ಗ್ರಾಮೀಣ ವಲಯಗಳಿಗೆ ವಿಮೆಯನ್ನು ವಿಸ್ತರಿಸುವ ಉದ್ದೇಶಕ್ಕೆ ಕೂಡ ಹಿನ್ನಡೆಯಾಗಲಿದೆ. ಎಲ್‌ಐಸಿಯನ್ನು ಸಂಸತ್ತಿನ ಕಾಯಿದೆ ಮೂಲಕ ರಾಷ್ಟ್ರೀಕರಣ ಮಾಡಲಾಗಿದೆ. ಪ್ರೀಮಿಯಂ ಮೂಲಕ ಸಣ್ಣ ಮೊತ್ತದ ಉಳಿತಾಯವನ್ನು ಒಟ್ಟುಗೂಡಿಸಿ ಕೈಗಾರಿಕೀಕರಣಕ್ಕೆ ಬೇಕಾದ ದೊಡ್ಡ ಬಂಡವಾಳ ಕ್ರೋಡೀಕರಿಸುವ ಜೊತೆಗೆ ಪಾಲಿಸಿದಾರರಿಗೆ ಉತ್ತಮ ಭದ್ರತೆ ಒದಗಿಸುವ ಮೂಲ ಗುರಿ ಹೊಂದಿದೆ. ಇದರಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
1956ರಲ್ಲಿ ಸರ್ಕಾರ 5 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದೆ. 2011ರಲ್ಲಿ ಐಅರ್‌ಡಿಎ ಕಾಯಿದೆ ನಿಯಮಕ್ಕನುಗುಣವಾಗಿ ಅದನ್ನು 100 ಕೋಟಿಗೆ ಏರಿಸಲಾಯಿತು. 2020ಕ್ಕೆ ಎಲ್‌ಐಸಿ ಆಸ್ತಿ ಮೌಲ್ಯ 32 ಲಕ್ಷ ಕೋಟಿಗಳಾಗಿದೆ. 30 ಕೋಟಿ ವೈಯಕ್ತಿಕ ಪಾಲಿಸಿದಾರರು ಮತ್ತು 12 ಕೋಟಿ ಗುಂಪು ವಿಮಾ ಪಾಲಿಸಿದಾರರಿದ್ದಾರೆ. ದೇಶದ ಆರ್ಥಿಕತೆಯಲ್ಲಿ 30.70 ಲಕ್ಷ ಕೋಟಿ ರೂ. ಹೂಡಿಕೆ ಮಾಡಿದೆ. 2019-20 ರ ಒಂದು ವರ್ಷದಲ್ಲಿ ರೂ. 2698 ಕೋಟಿ ಲಾಭಾಂಶ ಮೊತ್ತವನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದರು.
ವಿಮಾ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಕೆ., ಉಪಾಧ್ಯಕ್ಷ ಡೆರಿಕ್ ರೆಬೆಲ್ಲೋ, ಮಹಿಳಾ ಸಮಿತಿ ಸಂಚಾಲಕಿ ನಿರ್ಮಲಾ, ಎಲ್‌ಐಸಿ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಕುಶಾಲ್ ಕುಮಾರ್, ಬಾಬು ನಾಯ್ಕ, ದೇವಪ್ಪ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.