ಶಿಕಾರಿಪುರ: ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿ ಹಿಂದು ರಾಷ್ಟ್ರ ಸಮನ್ವಯ ಸಮಿತಿ ಪದಾಧಿಕಾರಿಗಳು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ಮೈಸೂರು ದಸರಾ ಕೇವಲ ಸಾಂಸ್ಕೃತಿಕ ಹಬ್ಬವಲ್ಲ. ಅದು ಕರ್ನಾಟಕದ ಅತಿ ದೊಡ್ಡ ಧಾರ್ಮಿಕ ಹಾಗೂ ಪಾರಂಪರಿಕ ಹಬ್ಬ. ಚಾಮುಂಡೇಶ್ವರಿ ಮಹಿಷಾಸುರನ ಸಂಹಾರ ಮಾಡಿದ ಅಂಗವಾಗಿ ವಿಜಯೋತ್ಸವ ಆಚರಿಸಲಾಗುತ್ತದೆ. ಇಂತಹ ಪವಿತ್ರ ಹಬ್ಬದ ಉದ್ಘಾಟನೆಗೆ ಆಗಮಿಸುವವರು ದೇವಿಯ ಮೇಲೆ ಶ್ರದ್ಧೆ, ಮೂರ್ತಿ ಪೂಜೆ ಮೇಲೆ ನಂಬಿಕೆ ಹಾಗೂ ನಾಡದೇವಿ ಮೇಲೆ ಗೌರವ ಹೊಂದಿರಬೇಕು. ಹಾಗಾಗಿ ಬಾನು ಮುಷ್ತಾಕ್ ಅವರ ಆಯ್ಕೆ ಪರಾಮರ್ಶಿಸಿ ಎಂದು ಆಗ್ರಹಿಸಿದರು.
ಬಾನು ಮುಷ್ತಾಕ್ ಅವರ ಹಿಂದಿನ ಭಾಷಣಗಳಲ್ಲಿ ನಾಡದೇವಿ ಭುವನೇಶ್ವರಿ ದೇವಿಯನ್ನು ನಂಬುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ದತ್ತಪೀಠ ಹೋರಾಟದ ಸಂದರ್ಭದಲ್ಲೂ ಮುಸ್ಲಿಂ ಸಮುದಾಯದ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂತಹ ವ್ಯಕ್ತಿಯನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವುದು ಅನುಚಿತ. ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕವು ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವ ಅಸಂಖ್ಯಾತ ಗಣ್ಯರನ್ನು ಹೊಂದಿದೆ. ಪ್ರಸಿದ್ಧ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅವರು ಭಾರತದ ಅತ್ಯುನ್ನತ ಸಾಹಿತ್ಯ ಸಮ್ಮಾನಗಳ ಜತೆಗೆ ಪದ್ಮಭೂಷಣ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇಂಥವರನ್ನು ಕಡೆಗಣಿಸಿದ್ದು ಸರಿಯಲ್ಲ. ಹಾಗಾಗಿ ಸರ್ಕಾರ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸುವ ನಿರ್ಧಾರವನ್ನು ತಕ್ಷಣ ಹಿಂಪಡೆಯುವ ಮೂಲಕ ಮೈಸೂರು ದಸರಾ ಹಬ್ಬದ ಪಾವಿತ್ರ್ಯ ಕಾಪಾಡಬೇಕು. ಉದ್ಘಾಟನೆಗೆ ಸೂಕ್ತವಾದ ಗಣ್ಯರನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು.
ಹಿಂದು ಜನಜಾಗೃತಿ ಸಮಿತಿಯ ಕಾವೇರಿ ರಾಯ್ಕರ್, ಆರ್‌ಎಸ್‌ಎಸ್‌ನ ಬಿ.ವಿ.ಮಂಜುನಾಥ್, ಪ್ರಮುಖರಾದ ಈರೇಶ್, ಪ್ರಕಾಶ್, ವಿ.ರಘು, ವೆಂಕಟೇಶ್, ಎಸ್.ವಿ.ಕೆ.ಮೂರ್ತಿ, ಮಧುಕುಮಾರ್, ಶಿವಯ್ಯ ಶಾಸ್ತ್ರಿ, ಶರತ್, ಪ್ರದೀಪ್, ಮಾಲತೇಶ್, ಪ್ರಕಾಶ್ ಇತರರಿದ್ದರು.