ಬೆಂಗಳೂರು: ಮೂರು ದಿನ ನಡೆದ ಜಾಗತಿಕ ಬಂಡವಾಳ ಹೂಡಿಕೆ ದಾರರ ಸಮಾವೇಶವು ನಿರೀಕ್ಷೆಯಂತೆ ಕರ್ನಾಟಕದ ಉದ್ಯಮ, ವ್ಯವಹಾರ ಕ್ಷೇತ್ರಕ್ಕೆ ಹೊಸ ಹೊಳಪು ನೀಡಿದ್ದು ಬರೋಬ್ಬರಿ 9.80 ಲಕ್ಷ ಕೋಟಿ ರೂ.ಗಳ ಹೂಡಿಕೆ ವಾಗ್ದಾನ ದೊರೆತಿದೆ.
ಹೂಡಿಕೆ ಒಡಂಬಡಿಕೆಗಳ ಪೈಕಿ 2.83 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳ ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವ ಮೂಲಕ ಆರ್ಥಿಕ ಪ್ರಗತಿಗೆ ಮುನ್ನುಡಿ ಬರೆಯಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಉಳಿದೆಲ್ಲ ಒಡಂಬಡಿಕೆಗಳು ಅನುಷ್ಠಾನದ ರೂಪ ಪಡೆಯುವ ವಿಶ್ವಾಸ ಸರ್ಕಾರದ್ದಾಗಿದೆ. ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ ಇನ್ವೆಸ್ಟ್ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವು ಯಶೋಗಾಥೆಯೊಂದಿಗೆ ಶುಕ್ರವಾರ ತೆರೆಕಂಡಿತು. ವಿಶ್ವದ ಆರ್ಥಿಕ ಕಳವಳಕ್ಕೆ ಚೇತೋಹಾರಿಯಾಗಿ, ಅದರಲ್ಲೂ ಭಾರತವೇ ಆರ್ಥಿಕ ಸದೃಢತೆಗೆ ಬುನಾದಿ ಎಂಬ ಆಶಾವಾದ ಕರ್ನಾಟಕದ ಈ ಸಮಾವೇಶದ ಮೂಲಕ ಮೂಡಿದಂತಾಗಿದೆ. ಈ ಸಮಾವೇಶ ಹಿಂದಿನ ಜಿಮ್ಳಂತಲ್ಲ ಎಂದು ಸರ್ಕಾರ ಪದೇಪದೆ ಹೇಳಿಕೊಂಡು ಬಂದಿತ್ತು. ಅದಕ್ಕೆ ಪೂರಕವಾಗಿ, ಗಂಭೀರವಾಗಿ ಹೂಡಿಕೆ ಮಾಡಿ ಉದ್ಯಮ ಸ್ಥಾಪಿಸಲು ಮುಂದೆ ಬಂದವರಿಗೆ ಕೆಂಪುಹಾಸಿನ ಸ್ವಾಗತ ನೀಡಿದೆ. ಜತೆಗೆ, ಅರ್ಜಿ ಗುಜರಾಯಿಸಿ ಸ್ವಂತಕ್ಕೆ ಲಾಭ ಮಾಡಿಕೊಳ್ಳುವವರನ್ನು ದೂರವಿಡುವ ನಿಷ್ಠುರ ನಿಲುವು ಪ್ರದರ್ಶಿಸಿದ್ದು ಈ ಸಮಾವೇಶದ ಮುಖ್ಯಾಂಶವಾಗಿತ್ತು. ಒಡಂಬಡಿಕೆಗಳನ್ನು ಅನುಷ್ಠಾನ ಮಾಡುವುದಕ್ಕೆ ಸರ್ಕಾರ ಮೂರು ಹಂತದ ಸಮಿತಿ ರಚಿಸಿದೆ. ಐದು ನೂರು ಕೋಟಿ ರೂ. ಒಳಗಿನ ಯೋಜನೆ ಪ್ರಸ್ತಾವನೆಗೆ ಇಲಾಖೆ ಜಂಟಿ ನಿರ್ದೇಶಕರ ಹಂತದ ಸಮಿತಿ ಅನುಮೋದನೆ ನೀಡಲಿದೆ.
500 ಕೋಟಿ ರೂ. ಮೇಲ್ಪಟ್ಟು ಸಾವಿರ ಕೋಟಿ ವರೆಗಿನ ಯೋಜನೆಗಳಿಗೆ ಇಲಾಖೆ ಆಯುಕ್ತರು, ಸಾವಿರ ಕೋಟಿ ರೂ. ಮೇಲ್ಪಟ್ಟ ಪ್ರಸ್ತಾವನೆಗಳ ಅನುಷ್ಠಾನಕ್ಕೆ ಮುಖ್ಯಕಾರ್ಯದರ್ಶಿ ನೇತೃತ್ವದ ಸಮಿತಿಗೆ ಅನುಷ್ಠಾನದ ಆಗುಹೋಗುಗಳ ಜವಾಬ್ದಾರಿ ವಹಿಸಲಾಗಿದೆ. ಈಗ ಆಗಿರುವ ಎಲ್ಲ ಒಡಂಬಡಿಕೆಗಳು ಮುಂದಿನ ಮೂರು ತಿಂಗಳಲ್ಲಿ ಅಧಿಕೃತ ಅನುಮೋದನೆ ಪಡೆದು ಕಾರ್ಯಾರಂಭಿಸಬೇಕೆಂದು ಸರ್ಕಾರದ ಮಹದಿಚ್ಛೆಯಾಗಿದೆ. ವಿವಿಧ ತೀರುವಳಿ ಪಡೆಯುವುದಕ್ಕಾಗಿ ಕಾಲಯಾಪನೆ ಆಗುವುದನ್ನು ತಡೆಯಲು ಆಸಕ್ತ ಉದ್ಯಮಿ ಪ್ರಮಾಣಪತ್ರ ಆಧರಿಸಿ ಅನುಮೋದಿತ ಉದ್ಯಮ ಕಾರ್ಯಾಚರಣೆಗೂ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಸಮಾವೇಶದ ಸಾರ್ಥಕತೆಯ ವರದಿಯನ್ನು ಶನಿವಾರ ಬಿಡುಗಡೆ ಮಾಡಿ, ಸಾಧನೆಯ ಅಂಕಿ-ಅಂಶಗಳನ್ನು ಪ್ರಕಟಿಸಲಿದ್ದಾರೆ.
140 ಕಿಮೀ ವೇಗದಲ್ಲಿ ಓಟ: ಹರಿದು ಬಂದ ಬಂಡವಾಳದಿಂದ ಉತ್ತೇಜಿತರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೂಡಿಕೆದಾರರಿಗೆ ಮಹತ್ವದ ವಾಗ್ದಾನ ನೀಡಿದ್ದಾರೆ. ಸಮಾವೇಶದ ಸಮಾರೋಪದಲ್ಲಿ ಮಾತನಾಡಿದ ಅವರು, ಉದ್ಯಮ ಮತ್ತು ಆರ್ಥಿಕತೆ ಪ್ರಗತಿ ವಿಚಾರದಲ್ಲಿ ನಮ್ಮ ಸರ್ಕಾರ 140 ಕಿಮೀ ವೇಗದಲ್ಲಿ ಕೆಲಸ ಮಾಡಲಿದ್ದು ಉದ್ಯಮಿಗಳಿಗೆ ಹೆಗಲುಕೊಟ್ಟು ಅವರ ಅಗತ್ಯಗಳನ್ನು ಪೂರೈಸಲು ಬೇಕಾದ ಕ್ರಮವಹಿಸಲಿದೆ. ಈ ಹೂಡಿಕೆ ಸಮಾವೇಶದ ಸಮಾರೋಪ ಕೊನೆಯಲ್ಲ ಆರಂಭ. ಅನುಮೋದನೆಗೆ ಮೂರು ತಿಂಗಳ ಕಾಲಾವಕಾಶ ಪಡೆದಿರುವುದು ಮಧ್ಯಂತರ ವಿರಾಮ, ನಂತರ ನಾಗಾಲೋಟ ಪಡೆಯಲಿದೆ ಎಂದು ಹೇಳಿದರು.
ಕನ್ನಡಿಗ ಉದ್ಯಮಿಗಳು ಅಗರವಾಲ್, ಓಸ್ವಾಲ್ ಜತೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆಯಬೇಕು. ಪಾಟೀಲರು, ಕುಲಕರ್ಣಿ, ಗೌಡರು ಸೇರಿದಂತೆ ಎಲ್ಲ ವರ್ಗದ ಕನ್ನಡಿಗರು ಉದ್ಯಮಿಗಳಾಗಿ ಉದ್ಯೋಗದಾತರಾಗಬೇಕು. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ರಾಜ್ಯವ್ಯಾಪಿ ವಿಸ್ತಾರ: ಈ ಬಾರಿಯ ಸಮಾವೇಶವು ಬ್ರಾ್ಯಂಡ್ ಬೆಂಗಳೂರು ಆಗಿ ಉಳಿಯದೇ, ಸಮಗ್ರ ಕರ್ನಾಟಕವನ್ನು ಒಳಗೊಂಡಿದೆ. ಅಲ್ಲದೇ, ಎಲ್ಲ ವಲಯದ ಉದ್ಯಮಗಳು ಕೂಡ ತಲೆ ಎತ್ತಲಿವೆ ಎಂಬುದನ್ನು ಖಚಿತಪಡಿಸಿದೆ. ಇಂಧನ ವಲಯ, ಅದರಲ್ಲೂ ಹಸಿರು ಇಂಧನಕ್ಕೆ ಅಗ್ರ ತಾಂಬೂಲ ದೊರೆತಿದ್ದು, ಅಂದಾಜು 2 ಲಕ್ಷ ಕೋಟಿ ರೂ. ಹೂಡಿಕೆಯಾಗಲಿದೆ. ಸೌರ, ಪವನದ ಜತೆಗೆ ಹೊಸ ತಂತ್ರಜ್ಞಾನದ ಮೂಲಕ ಉದಯಿಸಿರುವ ಹೈಡ್ರೋಜನ್, ಅಮೋನಿಯಾ ಆಧಾರಿತ ಇಂಧನ ಉತ್ಪಾದನೆ ಘಟಕಗಳು ಸ್ಥಾಪನೆಯಾಗಲಿವೆ. ಈವರೆಗೆ ಕರ್ನಾಟಕದಲ್ಲಿ ಅಷ್ಟಾಗಿ ನೆಲೆ ಕಾಣದ ಎಫ್ಎಂಸಿಜಿ (ತ್ವರಿತ ಮಾರಾಟದ ಗ್ರಾಹಕ ವಸ್ತುಗಳ ಉತ್ಪಾದನೆ), ಎಲೆಕ್ಟ್ರಿಕಲ್ ಕ್ಷೇತ್ರಕ್ಕೆ ಹೆಚ್ಚಿನ ಒಲವು ವ್ಯಕ್ತವಾಗಿದೆ.
ಗಲ್ಪ್ ರಾಷ್ಟ್ರಗಳ ಜತೆ ಸ್ಪರ್ಧೆ: ಹೈಡ್ರೋಜನ್ ಹಾಗೂ ಅಮೋನಿಯಾ ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ವಿಚಾರದಲ್ಲಿ ತಾಂತ್ರಿಕವಾಗಿ ಗಲ್ಪ್ ಮುಂದಿದೆ. ಆದರೂ, ಈ ಸಮಾವೇಶದಲ್ಲಿ ಅಧಿಕ ಪ್ರಮಾಣದ ಹೈಡ್ರೋಜನ್ ಮತ್ತು ಅಮೋನಿಯಾ ಆಧಾರಿತ ವಿದ್ಯುತ್ ಉತ್ಪಾದನೆ ಹೂಡಿಕೆಗೆ ಒಡಂಬಡಿಕೆ ಯಾಗಿರುವುದು ಸ್ಪೂರ್ತಿ ತುಂಬಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಉದ್ಯಮಿಗಳ ಈ ಒತ್ತಾಸೆಗೆ ಪೂರಕವಾಗಿ ಕೆಲಸ ಮಾಡಲಿದ್ದು, ಹಸಿರು ಇಂಧನ ಉತ್ಪಾದನೆಯಲ್ಲಿ ಗಲ್ಪ್ ಜತೆಗೆ ಸ್ಪರ್ಧೆ ನಡೆಸಿ ತಂತ್ರಜ್ಞಾನವನ್ನು ತ್ವರಿತವಾಗಿ ಬಳಸಿಕೊಳ್ಳುವ ಭರವಸೆಯನ್ನು ಸಿಎಂ ನೀಡಿದರು. ಅನುಮೋದಿತ ಹೈಡ್ರೋಜನ್ ಮತ್ತು ಅಮೋನಿಯಾ ಆಧಾರಿತ ವಿದ್ಯುತ್ ಯೋಜನೆಗಳ ಪೈಕಿ ಯಾವುದಾದರೂ ಒಂದು ಯೋಜನೆಯನ್ನು ಮುಂದಿನ ಮಾರ್ಚ್ ಒಳಗೆ ಭೂಮಿಪೂಜೆ ನೆರವೇರಿ ಸುವ ಹಂತಕ್ಕೆ ಕೊಂಡೊಯ್ಯುತ್ತೇವೆ ಎಂದರು.