ದಾವೋಸ್: ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ ಕರ್ನಾಟಕದ ಮಟ್ಟಿಗೆ ಫಲಪ್ರದವಾಗಿದ್ದು, ಕರ್ನಾಟಕ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪ್ರಥಮ ಬಾರಿಗೆ 2 ಮಹತ್ವದ ಕಂಪನಿಗಳ ಜತೆ ಒಟ್ಟು 52 ಸಾವಿರ ಕೋಟಿ ರೂ. ಮೊತ್ತದ ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ಇದು ರಾಜ್ಯದ ಮೇಲೆ ದೊಡ್ಡ ದೊಡ್ಡ ಕಂಪನಿಗಳು ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಸಾಕ್ಷಿ. ಇನ್ನೂ ಹಲವಾರು ಕಂಪನಿಗಳು ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿವೆ.
ರೆನ್ಯೂ ಪವರ್ ಕಂಪನಿ 50 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಲು ಕರ್ನಾಟಕ ಸರ್ಕಾರದದ ಜತೆ ಒಪ್ಪಂದ ಮಾಡಿಕೊಂಡಿದೆ. ಮೆ. ಲುಲು ಗ್ರೂಪ್ ಇಂಟರ್ ನ್ಯಾಷನಲ್ ಸಂಸ್ಥೆ ರಾಜ್ಯದಲ್ಲಿ ಸುಮಾರು 2000 ಕೋಟಿ ರೂ. ಹೂಡಿಕೆ ಮಾಡುವ ಕುರಿತು ಒಪ್ಪಂದ ಮಾಡಿಕೊಳ್ಳಲಾಯಿತು. ಇವೆರಡೂ ಒಪ್ಪಂದಗಳಿಂದ 40 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ. ನವೆಂಬರ್ನಲ್ಲಿ ಬೆಂಗಳೂರಿನಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಾಗೂ ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಪಾಲ್ಗೊಳ್ಳುವಂತೆ ಹೂಡಿಕೆದಾರರಿಗೆ ಆಹ್ವಾನ ನೀಡಲೂ ಶೃಂಗಸಭೆ ಯಶಸ್ವಿಯಾಗಿದೆ.
ಆರೋಗ್ಯ ಸಚಿವರ ಭೇಟಿ: ಕೇಂದ್ರದ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಬುಧವಾರ ಕರ್ನಾಟಕ ಪೆವಿಲಿಯನ್ಗೆ ಭೇಟಿ ನೀಡಿ ಬೊಮ್ಮಾಯಿ ಜತೆ ಮಾತುಕತೆ ನಡೆಸಿದರು. ಶೃಂಗ ಸಭೆ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಆಯೋಜಿಸಿದ್ದ ಬೆಳಗಿನ ಉಪಾಹಾರದ ಸಭೆಯಲ್ಲಿ ವಿವಿಧ ಕಂಪನಿಗಳ ಮುಖ್ಯಸ್ಥರು ಹಾಗೂ ಅನಿವಾಸಿ ಭಾರಾತೀಯ ಉದ್ಯಮಿಗಳು ಭಾಗವಹಿಸಿದ್ದರು.
ಸಿಎಂ ನಾಳೆ ವಾಪಸ್: ನಿಗದಿತ ವೇಳಾಪಟ್ಟಿ ಪ್ರಕಾರ ಸಿಎಂ ಬೊಮ್ಮಾಯಿ ಗುರುವಾರ ಬೆಂಗಳೂರಿಗೆ ಮರಳಬೇಕಿತ್ತು. ಆದರೆ, ಒಂದು ದಿನ ತಡವಾಗಿ ಶುಕ್ರವಾರ ಹಿಂದಿರುಗಲಿದ್ದಾರೆ.
ಕಂಪನಿಗಳ ಜತೆ ಚರ್ಚೆ: ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಕರ್ನಾಟಕ ಪೆವಿಲಿಯನ್ನಲ್ಲಿ ಹೀರೋ ಮೋಟೋಕಾರ್ಪ್, ಎ ಬಿ ಇನ್ ಬೇವ್ ಸಂಸ್ಥೆ, ಅರ್ಸೆಲರ್ ಮಿತ್ತಲ್, ಅದಾನಿ ಗ್ರೂಪ್, ಜಾನ್ಸನ್ ಕಂಟ್ರೋಲ್ಸ್ ಸಿಇಒ ಜಾರ್ಜ್ ಒಲಿವರ್, ಹನಿವೆಲ್ ಕಂಪನಿ, ಐಬಿಎಂ, ಬೈಜೂಸ್, ಮೀಶೋ ಸಂಸ್ಥೆ, ಆಕ್ಸಿಸ್ ಬ್ಯಾಂಕ್ ಮುಖ್ಯಸ್ಥರ ಜತೆ ಮಾತು ಕತೆ ನಡೆಸಿದ ಸಿಎಂ, ಕರ್ನಾಟಕದಲ್ಲಿ ಹೂಡಿಕೆ ಅವಕಾಶಗಳ ಬಗ್ಗೆ ರ್ಚಚಿಸಿದರು.
ದಾವೋಸ್ನ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ವಿವಿಧ ಕಂಪನಿಗಳ ಮುಖ್ಯಸ್ಥರ ಜತೆ ಸಿಎಂ ಬಸವರಾಜ ಬೊಮ್ಮಾಯಿ ರ್ಚಚಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಮುರುಗೇಶ್ ನಿರಾಣಿ, | ಡಾ.ಸಿ.ಎನ್.ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.
ಬಂಡವಾಳ ಹೂಡಿಕೆ ಸಂಸ್ಥೆಗಳನ್ನು ಕರ್ನಾಟಕ ತೆರೆದ ಮನಸ್ಸಿನಿಂದ ಸ್ವಾಗತಿಸುತ್ತದೆ. ರಾಜ್ಯವನ್ನು ಸಮೃದ್ಧಿಗೊಳಿಸುವ ಜತೆಗೆ ಸಂಸ್ಥೆಗಳ ಪರಿಶ್ರಮಕ್ಕೆ ಸಾರ್ಥಕತೆ ಪಡೆದು, ರಾಜ್ಯದ ಯಶೋಗಾಥೆಯಲ್ಲಿ ಭಾಗಿಗಳಾಗಿರಿ ಎಂದು ವಿಶ್ವದ ಪ್ರಮುಖ ಸಂಸ್ಥೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು. ಕರ್ನಾಟಕದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಲಾಂಚ್ ಇವೆಂಟ್ನಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೈಗಾರಿಕೆ ಹಾಗೂ ಉದ್ಯಮಗಳ ಸ್ಥಾಪನೆಗೆ ಪೂರಕವಾಗಿ ಎರಡು ನೀತಿಗಳನ್ನು ಜಾರಿಗೆ ತರಲಾಗುತ್ತಿದೆ. ಸಂಶೋಧನೆಗೆ ಹೆಚ್ಚು ಪೋ›ತ್ಸಾಹ ನೀಡುವ ಆರ್ ಆಂಡ್ ಡಿ ಪಾಲಿಸಿ, ಹೆಚ್ಚು ಉದ್ಯೋಗವನ್ನು ಒದಗಿಸುವ ಉದ್ಯಮಗಳಿಗೆ ಹೆಚ್ಚು ಪೋ›ತ್ಸಾಹಕಗಳನ್ನು ಈ ಎರಡೂ ನೀತಿಗಳ ಲಾಭಗಳನ್ನು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವ ಸಂಸ್ಥೆಗಳು ಪಡೆದುಕೊಳ್ಳಬಹುದಾಗಿದೆ ಎಂದರು.
ಕೋವಿಡ್ ಸಂಕಷ್ಟಕ್ಕೆ ಒಳಗಾಗಿದ್ದ ಜಗತ್ತಿನಲ್ಲಿ ಸುಧಾರಿತ ಆರ್ಥಿಕತೆಗಳು 2024ರ ಒಳಗೆ ಚೇತರಿಕೆ ದಾಖಲಿಸಲಿವೆ. ಆದರೆ, ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಚೇತರಿಕೆ ಪ್ರಮಾಣ ಶೇಕಡ 5ರ ಪ್ರಮಾಣದಲ್ಲಿ ಇರಲಿದೆ ಎಂದು ಐಎಂಎಫ್ನ ಫಸ್ಟ್ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್, ಭಾರತ ಮೂಲದ ಗೀತಾ ಗೋಪಿನಾಥ್ ಬುಧವಾರ ಹೇಳಿದರು. ಅವರು ವಿಶ್ವ ಆರ್ಥಿಕ ವೇದಿಕೆಯ 2022ರ ವಾರ್ಷಿಕ ಸಭೆಯಲ್ಲಿ ‘ಜಾಗತಿಕ ಬೆಳವಣಿಗೆಯಲ್ಲಿ ಮುಂದೇನು?’ ಎಂಬ ವಿಷಯದ ಕುರಿತು ಭಾಷಣ ಮಾಡಿದರು. ಜಾಗತಿಕ ಬೆಳವಣಿಗೆ ದರದಲ್ಲಿ ಭಾರಿ ಕುಸಿತ ಉಂಟಾಗಿದೆ. ಜೀವನ ನಿರ್ವಹಣಾ ವೆಚ್ಚ ಏರಿಕೆಯ ಬಿಕ್ಕಟ್ಟಿನ ಜಗತ್ತು ಇನ್ನು ಕೂಡ ಆರ್ಥಿಕ ಸಂಕಷ್ಟವನ್ನು ಎದುರಿಸ ಬೇಕಾಗಿದೆ. ಇಂಧನ, ಅಹಾರ ಸೇರಿ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ಏರುತ್ತಿರುವುದು ಕಳವಳ ಉಂಟುಮಾಡುವಂಥದ್ದು ಎಂದು ಅವರು ಹೇಳಿದರು.
ಮಣ್ಣಿನ ಸಾವಯ ಅಂಶಗಳನ್ನು ಹೆಚ್ಚಿಸುವುದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಯಾರೊಬ್ಬರೂ ಈ ಗ್ರಹದಲ್ಲಿ ಉಳಿದುಕೊಳ್ಳಲು ಸಾಧ್ಯವಿಲ್ಲ. ಮಣ್ಣು ಮತ್ತು ಆರೋಗ್ಯ ಸಂರಕ್ಷಣೆಗೆ ಜಾಗತಿಕ ನಾಯಕರು ಗಮನಹರಿಸಬೇಕು ಎಂದು ಈಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ವಾಸುದೇವ ಮನವಿ ಮಾಡಿದರು. ಜಾಗತಿಕ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಚರ್ಚಾಗೋಷ್ಠಿಯಲ್ಲಿ ಮಣ್ಣಿನ ರಕ್ಷಣೆ ವಿಚಾರವನ್ನು ಪ್ರತಿಪಾದಿಸಿದ ಅವರು, ಯಾವುದೇ ಮಾನವ ವಸತಿ ಪ್ರದೇಶ ಅಭಿವೃದ್ಧಿ ಪಡಿಸುವಾಗ 50 ಎಕರೆ ಪ್ರದೇಶದಲ್ಲಿ ಒಂದು ಎಕರೆ ಮಾತ್ರ ವಸತಿ ಮತ್ತು ಇತರೆ ಅಗತ್ಯಗಳಿಗೆ ಬಳಸಬೇಕು. ಉಳಿದ 49 ಎಕರೆ ಪ್ರದೇಶ ಕೃಷಿ ಭೂಮಿ, ಅರಣ್ಯ ಪ್ರದೇಶವಾಗಿರಬೇಕು ಎಂದರು.