ನ್ಯೂಸ್

Invest Karnataka 2025; ಜಾಗತಿಕ ಹೂಡಿಕೆದಾರರ ಸಮಾವೇಶ; ₹ 10 ಲಕ್ಷ ಕೋಟಿಗೂ ಹೆಚ್ಚು ಬಂಡವಾಳ ನಿರೀಕ್ಷೆ: DK ಶಿವಕುಮಾರ್

ಬೆಂಗಳೂರು: Invest Karnataka 2025 ಜಾಗತಿಕ ಹೂಡಿಕೆದಾರರ ಸಮಾವೇಶದ ಮೂಲಕ ರಾಜ್ಯದಲ್ಲಿ ಸುಮಾರು 10 ಲಕ್ಷ ಕೋಟಿ ರೂ.ಗೂ ಹೆಚ್ಚು ಬಂಡವಾಳ ಹೂಡಿಕೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಇಲ್ಲಿಯವರೆಗೂ ಸುಮಾರು 7 ಲಕ್ಷ ಕೋಟಿ ರೂ. ಬಂಡವಾಳದ ಹರಿವನ್ನು ದೃಢೀಕರಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

"ಇನ್ವೆಸ್ಟ್ ಕರ್ನಾಟಕ 2025"ರ ಕುರಿತು ವಿಧಾನಸೌಧದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಿದ್ಧತಾ ಪರಿಶೀಲನೆ ಮಾತನಾಡಿದರು.

“60 ಕ್ಕೂ ಹೆಚ್ಚು ಗಣ್ಯ ಪ್ರತಿನಿಧಿಗಳು ಇದೇ ಫೆ. 11 ರಿಂದ 14 ನೇ ತಾರೀಕಿನ ತನಕ ನಡೆಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇವರು ನಾನಾ ವಿಚಾರಗಳನ್ನು ಹಂಚಿಕೊಳ್ಳಲಿದ್ದು, 2 ಸಾವಿರದಷ್ಟು ಹೂಡಿಕೆದಾರರು ಸಮಾವೇಶದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದಾರೆ. 18 ರಾಷ್ಟ್ರಗಳು ಸಮಾವೇಶದಲ್ಲಿ ಭಾಗವಹಿಸಲಿದ್ದು, 9 ದೇಶಗಳು ತಮ್ಮ ಪೆವಿಲಿಯನ್ ಗಳನ್ನು ತೆರಯಲು ಮುಂದೆ ಬಂದಿದ್ದಾರೆ. 10 ದೇಶಗಳ ಉನ್ನತ ಮಟ್ಟದ ಕೈಗಾರಿಕಾ ವಲಯದ ನಾಯಕರು ತಾಂತ್ರಿಕ ವಲಯದ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ” ಎಂದು ಹೇಳಿದರು.

“ಕರ್ನಾಟಕ ರಾಜ್ಯ ನೂತನ ಕೈಗಾರಿಕಾ ನೀತಿ 2025-30 ಅನ್ನು ಈ ಸಮಾವೇಶದಲ್ಲಿ ಘೋಷಣೆ ಮಾಡಲಾಗುವುದು. ದೇಶದ ಅನೇಕ ರಾಜ್ಯಗಳ ನೀತಿಗಳನ್ನು ಅಧ್ಯಯನ ಮಾಡಲಾಗಿದ್ದು ಎಲ್ಲದಕ್ಕಿಂತ ಉತ್ತಮವಾದ, ಆಕರ್ಷಣೀಯವಾದ ನೀತಿಯನ್ನು ಪರಿಚಯಿಸಲಾಗುವುದು. ಜೊತೆಗೆ ಕ್ಲೀನ್ ಮೊಬಿಲಿಟಿ ನೀತಿ 2025-30 ಅನ್ನು ಅನಾವರಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಏಕಗವಾಕ್ಷಿ ಅನುಕೂಲತೆಯನ್ನು ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೂಡಿಕೆದಾರರು ಮತ್ತು ಖರೀದಿದಾರರ ನಡುವೆ ಹೊಂದಾಣಿಕೆ ಏರ್ಪಡಿಸುವ ಕೆಲಸ ಮಾಡಲಾಗುವುದು. 4 ಸಾವಿರ ಎಸ್ ಎಂಇಗಳಿಗೆ ಇಲಾಖೆ ವತಿಯಿಂದ ತರಬೇತಿ ನೀಡಿ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ” ಎಂದರು.

ಮೂರು ಲಕ್ಷ ಡಾಲರ್ ಮೊತ್ತದ ಬಹುಮಾನ ವಿತರಣೆ

“ಅನೇಕ ಹೂಡಿಕೆದಾರರು ಬೆಂಗಳೂರು ಸೇರಿದಂತೆ ಹೊರಗಿನ ಜಿಲ್ಲೆಗಳಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಗೆ ಒತ್ತನ್ನು ನೀಡಿದ್ದಾರೆ. ಇವರಿಗೆ ಮೂರು ಲಕ್ಷ ಡಾಲರ್ ಮೊತ್ತದ ಬಹುಮಾನ ನೀಡಲಾಗುವುದು. ನವೋದ್ಯಮಗಳ ಪ್ರತಿ ವಿಭಾಗಕ್ಕೆ ಒಟ್ಟು 1 ಲಕ್ಷ ಡಾಲರ್ ಬಹುಮಾನ ಮೊತ್ತ ನಿಗದಿ ಮಾಡಲಾಗಿದೆ” ಎಂದು ಹೇಳಿದರು.

“ಸುಮಾರು 30 ಕ್ಕೂ ಹೆಚ್ಚು ನವ ನವೀನ ರೀತಿಯ ಆಲೋಚನೆ ಹೊಂದಿರುವ ನವೋದ್ಯಮಗಳು ಕರ್ನಾಟಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಭಾಗವಹಿಸುತ್ತಿವೆ. ಸುಮಾರು 1 ಸಾವಿರಕ್ಕೂ ಹೆಚ್ಚು ನವೋದ್ಯಮಗಳಿಂದ ಪ್ರದರ್ಶನಕ್ಕೆ ಅರ್ಜಿಗಳು ಬಂದಿದ್ದವು. ಇವರಲ್ಲಿ ವಿನೂತನ ಚಿಂತನೆಗಳನ್ನು ಹೊಂದಿರುವ 45 ನವೋದ್ಯಮಗಳಿಗೆ ಅವಕಾಶ ಕಲ್ಪಿಸಲಾಗಿದೆ” ಎಂದರು.