ಶಿವಮೊಗ್ಗ ಜೆಎನ್‌ಎನ್‌ಸಿಇ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕೋಲ್ಡ್ ಪಾಟ್ ಹೋಲ್ ಮಿಕ್ಸ್ ಅನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬಿಡುಗಡೆಗೊಳಿಸಿದರು. ಡಿ.ಎಸ್.ಅರುಣ್, ಜಿ.ಎಸ್.ನಾರಾಯಣ ರಾವ್, ಸಿ.ಆರ್.ನಾಗರಾಜ, ಎಸ್.ಎನ್.ನಾಗರಾಜ, ಡಾ. ಪಿ.ನಾರಾಯಣ್, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಡಾ. ವೈ.ವಿಜಯಕುಮಾರ್ ಇದ್ದರು. 
ನ್ಯೂಸ್

ರಸ್ತೆ ಗುಂಡಿಗೆ ಕೋಲ್ಡ್ ಪಾಟ್ ಹೋಲ್ ಮಿಕ್ಸ್ ಆವಿಷ್ಕಾರ

ಶಿವಮೊಗ್ಗ: ರಸ್ತೆ ಗುಂಡಿಗಳಿಂದ ಸಂಭವಿಸುತ್ತಿರುವ ಅಪಘಾತ, ಪ್ರಾಣಹಾನಿಗಳ ಸಮಸ್ಯೆಗಳನ್ನು ಅರಿತ ಜೆಎನ್‌ಎನ್‌ಸಿಇ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡವು ರಸ್ತೆ ಗುಂಡಿಗಳಿಗೆ ಕಾಯಕಲ್ಪ ನೀಡಲು ಸಜ್ಜಾಗಿದೆ. ಇದಕ್ಕಾಗಿ ಕೋಲ್ಡ್ ಪಾಟ್ ಹೋಲ್ ಮಿಕ್ಸ್ ಅನ್ನು ಆವಿಷ್ಕರಿಸಿದೆ.

ಗುಂಡಿಗಳ ದುರಸ್ತಿಗೆ ಅನೇಕ ಬಿಟುಮಿನ್ ಕೋಲ್ಡ್ ಡಾಂಬರ್ ಪ್ಯಾಚಿಂಗ್ ವಸ್ತುಗಳು ಮಾರುಕಟ್ಟೆಯಲ್ಲಿವೆ. ಮಳೆ ಬೀಳುವ ಪ್ರದೇಶಗಳಿಗೆ ಅವು ಹೆಚ್ಚು ಪೂರಕವಾಗಿಲ್ಲ. ಜತೆಗೆ ಕೋಲ್ಡ್ ಡಾಂಬರ್ ಪ್ಯಾಚಿಂಗ್ ಸಾಮಗ್ರಿ ಸಂಗ್ರಹಣೆ, ದಾಸ್ತಾನು, ರಸ್ತೆಯಲ್ಲಿನ ತೇವಾಂಶದ ಸಂಭವ ಮಿಶ್ರಣದ ವೇಳೆ ಅಸಮಂಜಸ ಬೆರಕೆ ಇತ್ಯಾದಿಗಳಿಂದ ಅನೇಕ ಸಮಸ್ಯೆಗಳಿವೆ. ಬೆಲೆಯೂ ದುಬಾರಿ. ರಸ್ತೆಗಳಲ್ಲಿನ ಗುಂಡಿ ಮುಚ್ಚುವುದಕ್ಕೆ ಪ್ರಸ್ತುತ ಹಾಟ್ ಮಿಕ್ಸ್ ಬಳಸಲಾಗುತ್ತದೆ. ಆದರೆ ಮಳೆಗಾಲದಲ್ಲಿ ಈ ಹಾಟ್ ಮಿಕ್ಸ್‌ಗಳನ್ನು ಬಳಸಿ ಗುಂಡಿ ಮುಚ್ಚಲು ಸಾಧ್ಯವಿಲ್ಲ. ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಈ ಎಲ್ಲ ಅಂಶಗಳನ್ನು ಮನಗಂಡು ಡಾಂಬರ್ ಇಲ್ಲದ ಕೋಲ್ಡ್ ಪ್ಯಾಚ್ ಮಿಶ್ರಣವನ್ನು ಆವಿಷ್ಕರಿಸಲಾಗಿದೆ.

ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಕಟ್‌ಬ್ಯಾಗ್ ಎಮಲ್ಷನ್ ಬಳಸಿ ಈ ಉತ್ಪನ್ನ ನಿರ್ಮಾಣ ಮಾಡಿದ್ದು ಬಳಕೆಗೆ ವಿಶೇಷ ಪರಿಣಿತಿ ಬೇಕಿಲ್ಲ. ರೋಡ್ ಕಟ್ಟಿಂಗ್, ರಸ್ತೆ ಗುಂಡಿಗಳಿಗೆ ಉಪಯುಕ್ತವಾಗಿದೆ. ಎರಡರಿಂದ ಐದು ವರ್ಷ ಬಾಳಿಕೆ ಬರಲಿದೆ. ಬೆಂಗಳೂರು ಮತ್ತು ಶಿವಮೊಗ್ಗದ ರಸ್ತೆಗಳಲ್ಲಿ ಪ್ರಾಯೋಗಿಕ ಅನುಷ್ಠಾನ ಮಾಡಿ ಯಶಸ್ಸು ಕಂಡಿದ್ದೇವೆ ಎಂದರು.

ಸವಳಂಗ ಮುಖ್ಯ ರಸ್ತೆಯಲ್ಲಿ ಗುಂಡಿಗಳಿಗೆ ಉತ್ಪನ್ನಗಳನ್ನು ಹಾಕಿ ಪರಿಶೀಲಿಸಲಾಯಿತು. ಎಂಎಲ್‌ಸಿ ಡಿ.ಎಸ್.ಅರುಣ್, ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್, ಉಪಾಧ್ಯಕ್ಷ ಸಿ.ಆರ್.ನಾಗರಾಜ, ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್, ನಿರ್ದೇಶಕರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಪ್ರಾಚಾರ್ಯ ಡಾ. ವೈ.ವಿಜಯಕುಮಾರ್ ಇತರರಿದ್ದರು.

ಕೇಂದ್ರ ಸರ್ಕಾರಕ್ಕೆ ಉತ್ಪನ್ನ ಪರಿಚಯಿಸುವೆ

ಹೆದ್ದಾರಿ ಪ್ರಾಧಿಕಾರ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಉತ್ಪನ್ನದ ಕುರಿತು ಚರ್ಚಿಸಿ ರಾಷ್ಟ್ರಮಟ್ಟದಲ್ಲಿ ಕಾರ್ಯರೂಪಕ್ಕೆ ತರಲು ಶ್ರಮಿಸಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು. ದೇಶದಲ್ಲಿ ಪ್ರತಿ ವರ್ಷ ಮೂರು ಸಾವಿರಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ರಸ್ತೆ ಗುಂಡಿಗಳಿಂದ ಆಗುತ್ತಿದೆ. ಮಳೆಗಾಲದಲ್ಲಾಗುವ ಗುಂಡಿಗಳನ್ನು ತಕ್ಷಣವೇ ಮುಚ್ಚಬಹುದಾದ ಯೋಜನೆ ಅಭಿನಂದನಾರ್ಹ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.