ಶಿವಮೊಗ್ಗದಲ್ಲಿ ಚುಂಚಾದ್ರಿ ಕಪ್ ವಾಲಿಬಾಲ್ ಪಂದ್ಯಾವಳಿಗೆ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು. ಶ್ರೀ ನಾದಮಯಾನಂದನಾಥ ಸ್ವಾಮೀಜಿ, ಸುಂದರೇಶ್ ಇತರರಿದ್ದರು. 
ನ್ಯೂಸ್

ಕ್ರೀಡಾಕೂಟಗಳಿಂದ ಸಮಾಜಕ್ಕೆ ಪ್ರತಿಭಾವಂತರ ಪರಿಚಯ

ಶಿವಮೊಗ್ಗ: ಚುಂಚಾದ್ರಿ ಕಪ್ ಜಿಲ್ಲೆಯಲ್ಲಿಯೇ ಒಂದು ವಿಶೇಷವಾದ ಕ್ರೀಡಾಕೂಟ. ಕ್ರೀಡೆಯ ಜತೆಗೆ ವಿದ್ಯಾರ್ಥಿಗಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವ ಕೆಲಸವನ್ನು ಆದಿಚುಂಚನಗಿರಿ ಮಠ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ನೆಹರು ಕ್ರೀಡಾಂಗಣದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆ ಹಾಗೂ ಜಿಲ್ಲಾ ವಾಲಿಬಾಲ್ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿರುವ 23ನೇ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಚುಂಚಾದ್ರಿ ಕಪ್‌ಗೆ ಚಾಲನೆ ನೀಡಿ ಮಾತನಾಡಿದರು.

ಸದೃಢ ದೇಹದಲ್ಲಿ ಸ್ವಸ್ಥ ಮನಸ್ಸು ರೂಪಿಸಲು ಕ್ರೀಡೆ ಸಹಕಾರಿ. ಇಂತಹ ಕ್ರೀಡಾಸ್ಫೂರ್ತಿ ಚುಂಚಾದ್ರಿ ಕಪ್‌ನಂತಹ ಕ್ರೀಡಾಕೂಟಗಳಲ್ಲಿದೆ. ಈ ಪಂದ್ಯಾವಳಿಗಳಿಂದ ಪ್ರತಿಭಾನ್ವಿತರನ್ನು ಸಮಾಜಕ್ಕೆ ಪರಿಚಯಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಮಾತನಾಡಿ, ಕ್ರೀಡೆಯ ಮಹತ್ವ ನಾವು ತಿಳಿದುಕೊಳ್ಳದಿದ್ದರೆ ಜೀವನದಲ್ಲಿ ಯಾವುದೋ ಒಂದು ಅಂಶವನ್ನು ಕಳೆದುಕೊಂಡಿದ್ದೇವೆ ಎಂದರ್ಥ. ದೇಹದ ಅಂಗಾಂಗಗಳಿಗೆ, ಸ್ನಾಯುಗಳಿಗೆ ಬೇಕಾಗಿರುವ ದೈಹಿಕ ಚಟುವಟಿಕೆಗಳನ್ನು ಕ್ರೀಡೆ ಮೂಲಕ ಪಡೆಯಬಹುದು. ಕ್ರೀಡೆಯಿಂದ ನೈತಿಕತೆ, ನಾಯಕತ್ವದ ಗುಣ ಬೆಳೆಯುತ್ತದೆ ಎಂದು ತಿಳಿಸಿದರು.

ಜಿಲ್ಲಾ ವಾಲಿಬಾಲ್ ಸಂಸ್ಥೆ ಅಧ್ಯಕ್ಷ ಭಾಸ್ಕರ್ ಜಿ. ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ, ಜಿಲ್ಲಾ ವಾಲಿಬಾಲ್ ಸಂಸ್ಥೆ ಕಾರ್ಯದರ್ಶಿ ಕೆ.ಎಸ್.ಶಶಿ, ವೈ.ಎಚ್.ನಾಗರಾಜ್ ಇತರರಿದ್ದರು.