ನವದೆಹಲಿ: ಹಿಂದು ನಾಯಕರ ಹತ್ಯೆಗೆ ಬಂಧಿತ ಮೂವರು ಐಸಿಸ್ ಶಂಕಿತ ಉಗ್ರರು ಸಂಚು ರೂಪಿಸಿದ್ದರು ಎಂದು ಡಿಸಿಪಿ (ವಿಶೇಷ ದಳ) ಪಿ.ಸಿ. ಖುಸ್ವಾಹ ತಿಳಿಸಿದರು.
ದೆಹಲಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಜೀರಾಬಾದ್ನಲ್ಲಿ ಗುರುವಾರ ಮೂವರು ಶಂಕಿತ ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಖ್ವಾಜಾ ಮೊಯಿನುದ್ದೀನ್, ಅಬ್ದುಲ್ ಸಮದ್, ಸೈಯದ್ ನವಾಜ್ ಎಂದು ಗುರುತಿಸಲಾಗಿದೆ.
ಇವರ ಜತೆ ಹಿಂದೂ ಮುನಾನೀ ನಾಯಕ ಸುರೇಶ್ ಕುಮಾರ್ ಹತ್ಯೆ ಪ್ರಕರಣದ ಆರು ಆರೋಪಿಗಳಿದ್ದಾರೆ ಎಂದು ಶಂಕಿಸಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಹಾಗೂ ಹಿಂದು ರಾಜಕೀಯ ನಾಯಕರ ಹತ್ಯೆಗೆ ಈ ತಂಡ ಸಂಚು ರೂಪಿಸಿತ್ತು. ಚುನಾವಣಾ ಬಿತ್ತಿಪತ್ರ, ಸಾಮಾಜಿಕ ಜಾಲತಾಣಗಳ ಮೂಲಕ ನಾಯಕರನ್ನು ಗುರುತಿಸುತ್ತಿದ್ದರೆಂದು ವಿಚಾರಣೆ ವೇಳೆ ಬಹಿರಂಗವಾಗಿದೆ ಎಂದರು.
ಬಂಧಿತರಿಂದ 9 ಎಂಎಂನ ಮೂರು ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ. ಯುಪಿ / ಎನ್‌ಸಿಆರ್‌ನಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಸಿದ್ಧತೆ ನಡೆಸಿದ್ದರು. ಸಾಮಾಜಿಕ ಜಾಲತಾಣದ ಮೂಲಕ ವಿದೇಶದ ಸಂಪರ್ಕ ಸಾಧಿಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ವಿವರಿಸಿದರು. (ಏಜೆನ್ಸೀಸ್)