ಶ್ರೀನಗರ: ಸಂಸತ್ ಮೇಲಿನ ದಾಳಿ ಪ್ರಕರಣದ ಅಪರಾಧಿಯಾಗಿ ಗಲ್ಲುಶಿಕ್ಷೆಯಿಂದ ಮೃತಪಟ್ಟಿರುವ ಅಫ್ಜಲ್ ಮರಣ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್(ಜೆಕೆಎಲ್ಎಫ್) ಸಂಘಟನೆ ಭಾನುವಾರ ಬಂದ್ಗೆ ಕರೆ ನೀಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕಣಿವೆ ನಾಡಿನಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
2001ರಲ್ಲಿ ಸಂಸತ್ತಿನ ಮೇಲೆ ನಡೆದ ದಾಳಿಯಲ್ಲಿ ಅಫ್ಜಲ್ ಕೈವಾಡ ಇರುವುದು ಸ್ಪಷ್ಟವಾದ ಬೆನ್ನಲ್ಲೇ ಆತನಿಗೆ ಗಲ್ಲು ಶಿಕ್ಷೆ ವಿಧಿಸಿ, ಫೆಬ್ರವರಿ 9, 2013ರಂದು ನೇಣಿಗೆ ಏರಿಸಲಾಯಿತು.
ಇಂದು ಮರಣ ವಾರ್ಷಿಕೋತ್ಸವ ಇರುವುದರಿಂದ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್(ಜೆಕೆಎಲ್ಎಫ್) ಸಂಘಟನೆ ಬಂದ್ಗೆ ಕರೆ ನೀಡಿದೆ. ಇದಲ್ಲದೆ, ಫೆ.11ರಂದು ನ್ಯಾಶನಲ್ ಲಿಬರೇಶನ್ ಫ್ರಂಟ್(ಎನ್ಎಲ್ಎಫ್) ಸಂಘಟನೆಯ ಸಂಸ್ಥಾಪಕ ಮಖ್ಬೂಲ್ ಭಟ್ ಮರಣ ವಾರ್ಷಿಕೋತ್ಸವ ಇರುವುದರಿಂದ ಆ ದಿನವೂ ಬಂದ್ಗೆ ಕರೆ ನೀಡಲಾಗಿದೆ.
ಬಂದ್ ಆಚರಣೆ ಹಿನ್ನೆಲೆಯಲ್ಲಿ ಕಾಶ್ಮೀರದ ಕೆಲ ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ವಿಶೇಷ ಸ್ಥಾನಮಾನ ರದ್ದಾದ ಬಳಿಕ ಹೇರಲಾಗಿದ್ದ ನಿರ್ಬಂಧಗಳು ಸಡಿಲಗೊಂಡ ನಂತರ ಮತ್ತೆ ಕಾಶ್ಮೀರ ಸಹಜ ಸ್ಥಿತಿಯತ್ತ ಮರಳಿತ್ತು. ಇದೀಗ ಬಂದ್ ಕರೆ ನೀಡಿರುವುದರಿಂದ ಮತ್ತೊಮ್ಮೆ ಅದೇ ಪರಿಸ್ಥಿತಿ ಕಾಶ್ಮೀರದಲ್ಲಿ ನಿರ್ಮಾಣವಾಗಿದೆ.
ಇನ್ನು ಬಂದ್ಗೆ ಕರೆ ನೀಡಿರುವ ಜೆಕೆಎಲ್ಎಫ್ ನಾಯಕರುಗಳ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇನ್ನು ಮಖ್ಬೂಲ್ ಭಟ್ ಓರ್ವ ಕಾಶ್ಮೀರಿ ಪ್ರತ್ಯೇಕತವಾದಿ. ಅಫ್ಜಲ್ ಮತ್ತು ಮಖ್ಬೂಲ್ ಭಟ್ ಇಬ್ಬರನ್ನು 2013ರ ಫೆ. 9 ಮತ್ತು 1984ರ ಫೆ. 11ರಂದು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. (ಏಜೆನ್ಸೀಸ್)