ಅಮೆರಿಕದ ದಬ್ಬಾಳಿಕೆಗೆ ನೀವೇ ಕಾರಣ: ಯುದ್ಧದ ಹಿಂದೆ ಯುರೋಪ್ ಕೈವಾಡ..? ಇರಾನ್ ಕೆಂಡಾಮಂಡಲವಾಗಿದ್ದೇಕೆ! 
ವಿದೇಶ

ಅಮೆರಿಕದ ದಬ್ಬಾಳಿಕೆಗೆ ನೀವೇ ಕಾರಣ: ಯುದ್ಧದ ಹಿಂದೆ ಯುರೋಪ್ ಕೈವಾಡ..? ಇರಾನ್ ಕೆಂಡಾಮಂಡಲವಾಗಿದ್ದೇಕೆ! Iran

ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಯುದ್ಧದ ಜ್ವಾಲೆಗೆ ಈಗ ರಾಜತಾಂತ್ರಿಕ ಸಂಘರ್ಷದ ಆಯಾಮ ದೊರೆತಿದೆ. ಇರಾನ್(Iran) ಮೇಲಿನ ಅಮೆರಿಕ ಮತ್ತು ಇಸ್ರೇಲ್‌ನ ಭೀಕರ ದಾಳಿಗಳಿಗೆ ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳೇ ನೇರ ಹೊಣೆ ಎಂದು ಇರಾನ್ ಗಂಭೀರ ಆರೋಪ ಮಾಡಿದೆ. ಅಂತಾರಾಷ್ಟ್ರೀಯ ಕಾನೂನುಗಳನ್ನು ಗಾಳಿಗೆ ತೂರಿ ಅಮೆರಿಕದ ದಬ್ಬಾಳಿಕೆಗೆ ಯುರೋಪ್ ಸಾಥ್ ನೀಡುತ್ತಿದೆ ಎಂದು ಇರಾನ್ ವಿದೇಶಾಂಗ ಇಲಾಖೆ ಕಿಡಿಕಾರಿದೆ.

ಯುರೋಪ್ ವಿರುದ್ಧ ಇರಾನ್ ಗಂಭೀರ ಆರೋಪ

ಈ ಬಗ್ಗೆ ಮಾತನಾಡಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಾಕೈ, ಯುರೋಪ್ ರಾಷ್ಟ್ರಗಳ ಮೇಲೆ ಹರಿಹಾಯ್ದಿದ್ದಾರೆ. ಅಂತಾರಾಷ್ಟ್ರೀಯ ಕಾನೂನನ್ನು ಎತ್ತಿ ಹಿಡಿಯುವ ಬದಲು, ಯುರೋಪ್ ರಾಷ್ಟ್ರಗಳು ಅಮೆರಿಕದ ದಬ್ಬಾಳಿಕೆಗೆ ಮಣಿದಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇರಾನ್ ಮೇಲೆ ನಿರ್ಬಂಧ ಹೇರಲು ಅಮೆರಿಕದ ಜೊತೆ ಕೈಜೋಡಿಸುವ ಮೂಲಕ ಇಸ್ರೇಲ್ ಮತ್ತು ಅಮೆರಿಕದ ಅಪರಾಧ ಕೃತ್ಯಗಳಿಗೆ ಯುರೋಪ್ ಪ್ರಚೋದನೆ ನೀಡಿದೆ ಎಂದು ನೇರವಾಗಿ ದೂರಿದ್ದಾರೆ. ವಿಶೇಷವಾಗಿ ಫ್ರಾನ್ಸ್ ಸೇರಿದಂತೆ ಪ್ರಮುಖ ಯುರೋಪಿಯನ್ ದೇಶಗಳು ಇಂದಿನ ಯುದ್ಧದ ಪರಿಸ್ಥಿತಿಯನ್ನು ಸೃಷ್ಟಿಸಿವೆ ಎಂಬುದು ಇರಾನ್‌ನ ವಾದವಾಗಿದೆ.

ಟ್ರಂಪ್ ಎದುರು ಮೌನಕ್ಕೆ ಶರಣಾದ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್

ಈ ಬಿಕ್ಕಟ್ಟಿನ ನಡುವೆ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರ ವಾಷಿಂಗ್ಟನ್ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ಇರಾನ್ ಮೇಲಿನ ದಾಳಿಯು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ತಜ್ಞರು ಹೇಳುತ್ತಿದ್ದರೂ, ಮೆರ್ಜ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂದೆ ಈ ಬಗ್ಗೆ ತುಟಿಬಿಚ್ಚಿಲ್ಲ. ಟ್ರಂಪ್ ಅವರ ಕೆಂಗಣ್ಣಿಗೆ ಗುರಿಯಾಗಲು ಇಷ್ಟಪಡದ ಮೆರ್ಜ್, ಈ ಇಡೀ ಪರಿಸ್ಥಿತಿಯನ್ನು ಒಂದು ಧರ್ಮಸಂಕಟ ಎಂದು ಕರೆದಿದ್ದಾರೆ.
ಜರ್ಮನ್ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್‌ನ ಹೆನ್ನಿಂಗ್ ಹಾಫ್ ಅವರ ಪ್ರಕಾರ, ಮೆರ್ಜ್ ಅವರು ಟ್ರಂಪ್ ಅವರೊಂದಿಗೆ ಸಂಬಂಧವನ್ನು ಹಳಸಿಕೊಳ್ಳಲು ಇಷ್ಟಪಡುತ್ತಿಲ್ಲ. ಈ ಹಿಂದೆ ಇಸ್ರೇಲ್‌ನ ಕ್ರಮಗಳನ್ನು ಬೆಂಬಲಿಸಿದ್ದ ಮೆರ್ಜ್, ಇಸ್ರೇಲ್ ನಮ್ಮೆಲ್ಲರ ಪರವಾಗಿ ಕೊಳಕು ಕೆಲಸವನ್ನು ಮಾಡುತ್ತಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಯುದ್ಧವನ್ನು ಸಮರ್ಥಿಸಿಕೊಂಡಿದ್ದರು. ಇದು ಅಂತಾರಾಷ್ಟ್ರೀಯ ಕಾನೂನುಗಳ ವಿಷಯದಲ್ಲಿ ಜರ್ಮನಿಯ ಅನುಕೂಲಕರ ನಿಲುವು ಎಂದು ವಿಮರ್ಶಕರು ಟೀಕಿಸುತ್ತಿದ್ದಾರೆ.

ಬ್ರಿಟನ್‌ನ ಜಾಗರೂಕ ನಡೆ: ಯುದ್ಧ ವಿರಾಮಕ್ಕೆ ಒತ್ತಾಯ

ಅಮೆರಿಕ ಮತ್ತು ಜರ್ಮನಿಯ ಆಕ್ರಮಣಕಾರಿ ನಿಲುವಿಗೆ ವ್ಯತಿರಿಕ್ತವಾಗಿ, ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಜಾಗರೂಕ ನಿಲುವನ್ನು ತಳೆದಿದ್ದಾರೆ. ಇರಾನ್ ಮೇಲಿನ ದಾಳಿಯಿಂದ ಬ್ರಿಟನ್ ದೂರ ಉಳಿದಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಲು ಒತ್ತು ನೀಡುತ್ತಿದೆ. ಯುದ್ಧವು ಮತ್ತಷ್ಟು ಹಬ್ಬದಂತೆ ತಡೆಯುವುದು ಬ್ರಿಟನ್‌ನ ಇಂದಿನ ಆದ್ಯತೆಯಾಗಿದೆ.
ಪಶ್ಚಿಮ ಏಷ್ಯಾದ ಈ ಮಹಾ ಸಮರವು ಕೇವಲ ಎರಡು ದೇಶಗಳ ನಡುವಿನ ಸಂಘರ್ಷವಾಗಿ ಉಳಿಯದೆ, ಪಾಶ್ಚಿಮಾತ್ಯ ರಾಷ್ಟ್ರಗಳ ಒಳಜಗಳ ಮತ್ತು ಇರಾನ್‌ನ ಹಠಮಾರಿ ಧೋರಣೆಯ ನಡುವಿನ ಸಂಕೀರ್ಣ ಜಟಾಪಟಿಯಾಗಿ ಮಾರ್ಪಟ್ಟಿದೆ. ಅಮೆರಿಕದ ರಣತಂತ್ರಕ್ಕೆ ಯುರೋಪ್ ಸಾಥ್ ನೀಡುತ್ತಿರುವುದು ಇಡೀ ವಿಶ್ವವನ್ನೇ ಅನಿಶ್ಚಿತತೆಯತ್ತ ತಳ್ಳುತ್ತಿದೆ,(ಏಜೆನ್ಸೀಸ್).