ಇರಾನ್- ಇಸ್ರೇಲ್ ಯುದ್ಧಕ್ಕೆ ಯೆಮನ್ ಎಂಟ್ರಿ: ಅಣುಶಕ್ತಿ ಕೇಂದ್ರದ ಮೇಲೆಯೇ ಹೌತಿಗಳ ಕಣ್ಣು?
ಟೆಲ್ ಅವಿವ್: ಮಧ್ಯಪ್ರಾಚ್ಯದ ಸಂಘರ್ಷ ಈಗ ಹೊಸ ಮತ್ತು ಅತ್ಯಂತ ಅಪಾಯಕಾರಿ ಹಂತಕ್ಕೆ ತಲುಪಿದೆ. ಇಷ್ಟು ದಿನ ಇರಾನ್ ಮತ್ತು ಹಿಜ್ಬುಲ್ಲಾ ಜೊತೆ ಕಾದಾಡುತ್ತಿದ್ದ ಇಸ್ರೇಲ್(Israel-Yemen War) ಮೇಲೆ ಈಗ ಯೆಮನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ನೇರ ದಾಳಿ ಆರಂಭಿಸಿದ್ದಾರೆ. ಶನಿವಾರ ಮುಂಜಾನೆ ಯೆಮನ್‌ನಿಂದ ಇಸ್ರೇಲ್ ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆದಿದ್ದು, ಇಡೀ ಪ್ರದೇಶದಲ್ಲಿ ಯುದ್ಧದ ಕಾರ್ಮೋಡ ಕವಿಯುವಂತೆ ಮಾಡಿದೆ.
ಪರಮಾಣು ಕೇಂದ್ರದ ಬಳಿ ಮೊಳಗಿದ ಸೈರನ್!
ಇಸ್ರೇಲ್‌ನ ಪ್ರಮುಖ ಪರಮಾಣು ಸಂಶೋಧನಾ ಕೇಂದ್ರವಿರುವ ಪ್ರದೇಶ ಹಾಗೂ ಬೀರ್‌ಶೆಬಾ ನಗರಗಳಲ್ಲಿ ಶನಿವಾರ ಮುಂಜಾನೆ ಸತತ ಮೂರನೇ ಬಾರಿಗೆ ಯುದ್ಧದ ಸೈರನ್‌ಗಳು ಮೊಳಗಿವೆ. ಇರಾನ್ ಮತ್ತು ಹಿಜ್ಬುಲ್ಲಾ ಶುಕ್ರವಾರ ರಾತ್ರಿಯಿಂದಲೇ ದಾಳಿ ನಡೆಸುತ್ತಿದ್ದು, ಈಗ ಯೆಮನ್ ಕೂಡ ಈ ಸಂಘರ್ಷಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಂತಾಗಿದೆ. ಇದು ಇಸ್ರೇಲ್‌ನ ರಕ್ಷಣಾ ವ್ಯವಸ್ಥೆಗೆ ಅತಿದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹೌತಿಗಳ ಪ್ರವೇಶ: ಜಾಗತಿಕ ಆತಂಕವೇಕೆ?
2014 ರಿಂದ ಯೆಮನ್ ರಾಜಧಾನಿ ಸನಾವನ್ನು ನಿಯಂತ್ರಿಸುತ್ತಿರುವ ಹೌತಿಗಳು, ಸೌದಿ ಅರೇಬಿಯಾದೊಂದಿಗಿನ ಕದನ ವಿರಾಮದ ಕಾರಣದಿಂದ ಇದುವರೆಗೆ ಈ ಯುದ್ಧದಿಂದ ದೂರ ಉಳಿದಿದ್ದರು. ಆದರೆ ಈಗ ಅವರ ಪ್ರವೇಶವು ಕೇವಲ ಇಸ್ರೇಲ್‌ಗೆ ಮಾತ್ರವಲ್ಲ, ಇಡೀ ವಿಶ್ವದ ಆರ್ಥಿಕತೆಗೆ ಹೊಡೆತ ನೀಡುವ ಮುನ್ಸೂಚನೆ ನೀಡಿದೆ.
ಕೆಂಪು ಸಮುದ್ರದ ಸಂಕಟ: ಈ ಹಿಂದೆ ನವೆಂಬರ್ 2023 ರಿಂದ ಜನವರಿ 2025 ರವರೆಗೆ ಹೌತಿಗಳು 100ಕ್ಕೂ ಹೆಚ್ಚು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿದ್ದರು. ಈಗ ಮತ್ತೆ ಕೆಂಪು ಸಮುದ್ರದ ಮಾರ್ಗದಲ್ಲಿ ಹಡಗುಗಳ ಮೇಲೆ ದಾಳಿ ಆರಂಭವಾದರೆ ಜಾಗತಿಕ ಸಾರಿಗೆ ವ್ಯವಸ್ಥೆ ಕುಸಿಯಬಹುದು.
ತೈಲ ಬೆಲೆ ಏರಿಕೆ ಭೀತಿ: ವಿಶ್ವದ ಐದನೇ ಒಂದು ಭಾಗದಷ್ಟು ತೈಲ ರಫ್ತು ಆಗುವ ಹಾರ್ಮುಜ್ ಜಲಸಂಧಿ ಮೇಲೆ ಇರಾನ್ ಹಿಡಿತ ಸಾಧಿಸುತ್ತಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಸ್ಫೋಟಕ್ಕೆ ಕಾರಣವಾಗಬಹುದು.
ಸೌದಿ ಅರೇಬಿಯಾದ ನೆಲೆಯಲ್ಲಿ ಅಮೆರಿಕ ಪಡೆಗಳ ಮೇಲೆ ದಾಳಿ!
ಇತ್ತೀಚೆಗಷ್ಟೇ ಇಸ್ರೇಲ್ ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ, ಇರಾನ್ ಪ್ರತೀಕಾರ ತೀರಿಸಿಕೊಂಡಿದೆ. ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಪ್ರಿನ್ಸ್ ಸುಲ್ತಾನ್ ವಾಯುನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಅಮೆರಿಕದ ಕನಿಷ್ಠ 10 ಸೈನಿಕರು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಅಲ್ಲದೆ, ನೆಲೆಯಲ್ಲಿದ್ದ ಹಲವು ಇಂಧನ ಮರುಪೂರಣ ವಿಮಾನಗಳು ಜಖಂಗೊಂಡಿವೆ.
ಸಂದಿಗ್ಧ ಸ್ಥಿತಿಯಲ್ಲಿ ಜಾಗತಿಕ ಸಮುದಾಯ
ಒಂದೆಡೆ ಮಾನವೀಯ ನೆರವು ನೀಡಲು ಇರಾನ್ ಒಪ್ಪಿಕೊಂಡಿದ್ದರೂ, ಮತ್ತೊಂದೆಡೆ ನಡೆಯುತ್ತಿರುವ ಈ ಸರಣಿ ದಾಳಿಗಳು ವಿಶ್ವಸಂಸ್ಥೆಯನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸುವುದಾಗಿ ಎಚ್ಚರಿಸಿದ್ದು, ಇರಾನ್ ಕೂಡ ಹಿಂದೆ ಸರಿಯುವ ಲಕ್ಷಣ ತೋರುತ್ತಿಲ್ಲ,(ಏಜೆನ್ಸೀಸ್).