ಕಾಬೂಲ್: 2021 ರಲ್ಲಿ ಅಮೆರಿಕದ ಮಿಲಿಟರಿ ಪಡೆಗಳ ನಿರ್ಗಮನದ ನಂತರ ದೇಶದ ಮೇಲೆ ಹಿಡಿತ ಸಾಧಿಸಿದ ತಾಲಿಬಾಲ್ ಪಡೆಗಳು, ಅಫ್ಘಾನಿಸ್ತಾನದಲ್ಲಿ ಮತ್ತೊಮ್ಮೆ ಸಂಪ್ರದಾಯವಾದಿ, ಕಠಿಣ ಧಾರ್ಮಿಕ ಕಟ್ಟುಪಾಡನ್ನು ಆಚರಿಸುವ ತಾಲಿಬಾನ್ ಆಡಳಿತವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು.
ದೇಶದ ಪ್ರಭುತ್ವದ ಮೇಲೆ ಹಿಡಿತ ಸಾಧಿಸಿದ ಬೆನ್ನಲ್ಲೇ, ಸ್ತ್ರೀ ಸ್ವಾತಂತ್ರ್ಯಕ್ಕೆ ಸಂಚಕಾರ ತಂದ ಇವರು, ಪ್ರಾಥಮಿಕ ಶಾಲೆಯ ನಂತರ ಹೆಣ್ಣು ಮಕ್ಕಳು ಶಿಕ್ಷಣವನ್ನು ಕಳಿಯುವಂತಿಲ್ಲ ಎಂಬ ಕಾನೂನನ್ನು ಜಾರಿಗೆ ತಂದರು. ನಂತರದ ದಿನಗಳಲ್ಲಿ, ಗಂಡಸಾದವನು ಮನೆಯಲ್ಲಿರುವ ಹೆಂಗಸರ ಮೇಲೆ ದೈಹಿಕ ಹಲ್ಲೆ ನಡೆಸಬಹುದು ಎಂದು ಕಾನೂನಿನ ರಕ್ಷಣೆಯನ್ನು ನೀಡಿದರು.
ಈ ಹಿಂಸಾತ್ಮಕ, ನೀಚ ನಿಯಮಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ, ಈಗ ಇನ್ನೊಂದು ಬಾಂಬ್ಅನ್ನು ಎಸೆದಿರುವ ತಾಲಿಬಾನ್ ಆಡಳಿತ, ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ನಾಮಕರಣ ಮಾಡುವ ಅಥವಾ ಮಹಿಳೆಯರಿಗೆ ಯಾವುದೇ ಪ್ರತ್ಯೇಕ ಹೆಸರನ್ನಿಡುವ ಬದಲು ಎಲ್ಲಾ ಮಹಿಳೆಯರಿಗೆ ಒಂದೇ ಬಗೆಯ ಅಥವಾ ಬೆರಳಣಿಕೆಯಷ್ಟೇ ಹೆಸರಿಗೆ ಸೀಮಿತ ಗೊಳಿಸುವ ವಿಚಿತ್ರ ಕಾನೂನನ್ನು ಜಾರಿಗೆ ತರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಇನ್ನು ಕೆಲ ಜಾಗತಿಕ ಮಾಧ್ಯಮಗಳು ವರದಿ ಮಾಡಿರುವಂತೆ, ಅಫ್ಘಾನಿಸ್ತಾನದಲ್ಲಿರುವ ಆಸ್ಪತ್ರೆ ಸಿಬ್ಬಂದಿಗಳು, ತಮ್ಮ ಕ್ಲಿನಿಕ್ಗಳಿಗೆ ಬರುವ ಮಹಿಳಾ ರೋಗಿಗಳನ್ನು ಅವರ ಹೆಸರಿನ ಬದಲು 'ಬಿಬಿ' ಎಂದು ಕರೆಯಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆಂದು ವರದಿ ಮಾಡಿವೆ.
ಈ 'ಬಿಬಿ' ಎಂದರೆ, ಮುದುಕಿ ಅಥವಾ ಹಿರಿಯ ವಯಸ್ಸಿನ ಹೆಣ್ಣೆಂದು ಹೇಳಲಾಗುತ್ತದೆ. ಕಾಬೂಲ್ನ ಕೆಲ ಪ್ರದೇಶದಲ್ಲಿ ಮಹಿಳೆಯರಿಗೆ ಕುರಿ, ಒಂಟೆ, ಹಸು ಎಂದೂ ಕರೆಯಲಾಗುತ್ತಿದೆ ಎಂದು ತಿಳಿದುಬಂದಿದೆ. ಭೂಮಿ ಮೇಲೆ ಜನ್ಮವಿತ್ತ ಪ್ರತಿಯೊಂದು ಜೀವಿಗೂ ತನ್ನದೇ ಹೆಸರುಗಳಿಗೆ. ಅದರಲ್ಲೂ ಮನುಷ್ಯ ತನ್ನ ಹೆಸರು ವಿಶಿಷ್ಟವಾಗಿರಲೆಂದೇ ಎಷ್ಟೋ ಶ್ರಮ ಪಡುತ್ತಾನೆ. ಅಂತಹದರಲ್ಲಿ, ಈ ರೀತಿ ಮಹಿಳೆಯರಿಗೆ ಕೇವಲ ಒಂದೇ ಹೆಸರಿನಿಂದ ಸಂಬೋಧಿಸುವಂತೆ ಹೊರಡಿಸಲಾದ ಆದೇಶ ಈಗ ಪ್ರಪಂಚದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇನ್ನೂ ಈ ವಿಚಿತ್ರ ಕಾನೂನನ್ನು ಸಮರ್ಥಿಸಿಕೊಳ್ಳುತ್ತಿರುವ ತಾಲಿಬಾನ್ ಆಡಳಿತ. 2000 ನೇ ಇಸವಿ ಸಮಯದಲ್ಲಿ ಅಮೆರಿಕನ್ನರು ನಮ್ಮ ಪ್ರದೇಶದಲ್ಲಿ ಹಿಡಿತ ಹೊಂದಿದ್ದರು. ಸುಮಾರು 20 ವರ್ಷ ಅವರ ನಮ್ಮ ಮೇಲೆ ಆಡಳಿತ ನಡೆಸಿದರು. ಈ ಸಮಯದಲ್ಲಿ ನಮ್ಮ ದೇಶದ ಸ್ತ್ರೀಯರು ಅಮೆರಿಕದವರ ವೇಷ-ಭೂಷಣ, ಹಾವ-ಭಾವ, ಹವ್ಯಾಸಗಳನ್ನು ಅನುಕರಣೆ ಮಾಡಲು ಹೋಗಿ, ಬದುಕಿನ ದಾರಿ ತಪ್ಪಿದ್ದಾರೆ. ಅವರನ್ನು ಸರಿಯಾದ ಹಾದಿಗೆ ತರಲು ನಮ್ಮ ಸರ್ಕಾರ ಈ ಮಾದರಿಯ ಕಾನೂನನ್ನು ಜಾರಿಗೆ ತರುತ್ತಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ, (ಏಜೆನ್ಸೀಸ್).