1,700 ವರ್ಷಗಳಷ್ಟು ಹಳೆಯದಾದ ಶವಪೆಟ್ಟಿಗೆ ತೆರೆದ ಪುರಾತತ್ತ್ವಜ್ಞರು
- 1,700 ವರ್ಷಗಳಷ್ಟು ಹಳೆಯದಾದ ಶವಪೆಟ್ಟಿಗೆ ಓಪನ್ ಮಾಡಿದ ಪುರಾತತ್ತ್ವಜ್ಞರು
- ಯಾರೂ ಮುಟ್ಟದ ಪ್ರಾಚೀನ ರೋಮನ್ ಶವಪೆಟ್ಟಿಗೆಯನ್ನು ತೆರೆದ ಸಂಶೋಧಕರು
- ಹಂಗೇರಿಯಾದ ಬುಡಾಪೆಸ್ಟ್ ಇತಿಹಾಸ ವಸ್ತುಸಂಗ್ರಹಾಲಯದ ಸಂಶೋಧಕರಿಂದ ಪತ್ತೆ
- ರೋಮನ್ ಯುಗದ ಜೀವನಶೈಲಿಯ ಮೇಲೆ ಬೆಳಕು ಚೆಲ್ಲುವ ಅಮೂಲ್ಯವಾದ ನಿಧಿಯೂ ಪತ್ತೆ
ಬುಡಾಪೆಸ್ಟ್: ಪುರಾತನ ವಸ್ತುಗಳನ್ನು ಉತ್ಖನನ ಮಾಡುವ ಪುರಾತತ್ತ್ವಜ್ಞರು ಬರೋಬ್ಬರಿ 1,700 ವರ್ಷಗಳಷ್ಟು ಹಳೆಯದಾದ ಶವಪೆಟ್ಟಿಗೆಯನ್ನು ( Woman Coffin ) ಇದೀಗ ಓಪನ್ ಮಾಡಿದ್ದು, ಅದರೊಳಗೆ ಇದ್ದ ವಸ್ತುಗಳನ್ನು ನೋಡಿ ಹುಬ್ಬೇರಿಸಿದ್ದಾರೆ.
ಶತಮಾನಗಳಿಂದ ಯಾರೂ ಮುಟ್ಟದ ಪ್ರಾಚೀನ ರೋಮನ್ ಶವಪೆಟ್ಟಿಗೆಯನ್ನು ಸಂಶೋಧಕರು ತೆರೆದಿದ್ದಾರೆ. ಹಂಗೇರಿಯ ಒಬುಡಾದಲ್ಲಿ ಉತ್ಖನನದ ಸಮಯದಲ್ಲಿ ಬುಡಾಪೆಸ್ಟ್ ಇತಿಹಾಸ ವಸ್ತುಸಂಗ್ರಹಾಲಯದ ಸಂಶೋಧಕರು ಈ ಶವಪೆಟ್ಟಿಗೆಯನ್ನು ಪತ್ತೆಹಚ್ಚಿದರು. ಸಂಪೂರ್ಣ ಕಲ್ಲಿನಿಂದ ಮಾಡಲ್ಪಟ್ಟ ಶವಪೆಟ್ಟಿಗೆಯು ರೋಮನ್ ಯುಗದ ಜೀವನಶೈಲಿಯ ಮೇಲೆ ಬೆಳಕು ಚೆಲ್ಲುವ ಅಮೂಲ್ಯವಾದ ನಿಧಿಯನ್ನು ಸಹ ಒಳಗೊಂಡಿದೆ.
ಶವಪೆಟ್ಟಿಗೆಯ ಮುಚ್ಚಳವನ್ನು ತೆರೆದಾಗ, ಒಳಗೆ ಸಂಪೂರ್ಣ ಅಸ್ಥಿಪಂಜರ ಕಂಡುಬಂದಿದೆ. ಅದರ ಸುತ್ತಲೂ ಅನೇಕ ಕಲಾಕೃತಿಗಳು ಕೂಡ ಇದ್ದವು. ಅಸ್ಥಿಪಂಜರದ ಗಾತ್ರವನ್ನು ಪರೀಕ್ಷಿಸಿದಾಗ ಅದು ಚಿಕ್ಕ ಹುಡುಗಿಯದ್ದಾಗಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಶವಪೆಟ್ಟಿಗೆಯಿಂದ ವಶಪಡಿಸಿಕೊಂಡ ಸಂಪತ್ತಿನಲ್ಲಿ ಎರಡು ಅಖಂಡ ಗಾಜಿನ ಜಾಡಿಗಳು, ಕಂಚಿನ ಪ್ರತಿಮೆಗಳು, ಸುಮಾರು 140 ರೋಮನ್ ನಾಣ್ಯಗಳು, ಹೇರ್‌ಪಿನ್‌ಗಳು, ಆಭರಣಗಳು ಮತ್ತು ಚಿನ್ನದ ದಾರದಿಂದ ಮಾಡಿದ ಬಟ್ಟೆಯ ಅವಶೇಷಗಳು ಸೇರಿವೆ.
ಶವಪೆಟ್ಟಿಗೆಯ ಶ್ರೀಮಂತಿಕೆ ಮತ್ತು ಅದರಲ್ಲಿರುವ ಅಮೂಲ್ಯ ಸಂಪತ್ತು ಮೃತರು ಶ್ರೀಮಂತರು ಅಥವಾ ಉನ್ನತ ಸಾಮಾಜಿಕ ಸ್ಥಾನಮಾನ ಹೊಂದಿದ್ದರು ಎಂಬುದನ್ನು ಸೂಚಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. 4ನೇ ಶತಮಾನದಲ್ಲಿ ಹಳೆಯ ಶವಪೆಟ್ಟಿಗೆಯನ್ನು ಮರುಬಳಕೆ ಮಾಡುವುದು ಸಾಮಾನ್ಯವಾಗಿತ್ತು. ಆದರೆ, ವಿಶೇಷವಾಗಿ ತಯಾರಿಸಿದ ಇಂತಹ ಶವಪೆಟ್ಟಿಗೆಗಳನ್ನು ಕಂಡುಹಿಡಿಯುವುದು ಅತ್ಯಂತ ಅಪರೂಪ ಎಂದು ಸಂಶೋಧಕರು ಹೇಳುತ್ತಾರೆ.
ಜನನ, ವಯಸ್ಸು ಇತ್ಯಾದಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಂಡುಹಿಡಿಯಲು ಪತ್ತೆಯಾಗಿರುವ ಅಸ್ಥಿಪಂಜರವನ್ನು ಪರಿಶೀಲಿಸುವುದು ಮಾನವಶಾಸ್ತ್ರಜ್ಞರ ಮುಂದಿನ ನಡೆಯಾಗಿದೆ, (ಏಜೆನ್ಸೀಸ್).