ಇರಾನ್ ಯುದ್ಧಕ್ಕೆ ಅಂತ್ಯ ಹಾಡುತ್ತಾರೆಯೇ ಟ್ರಂಪ್? ಆಪರೇಷನ್ ಎಪಿಕ್ ಫ್ಯೂರಿ ನಿಲ್ಲಿಸಲು ಅಮೆರಿಕ ವಿಧಿಸಿದ ಷರತ್ತುಗಳೇನು..?
ವಾಷಿಂಗ್ಟನ್: ಕಳೆದ ಕೆಲವು ಸಮಯದಿಂದ ಮಧ್ಯಪ್ರಾಚ್ಯದಲ್ಲಿ ಆತಂಕ ಸೃಷ್ಟಿಸಿರುವ ಅಮೆರಿಕ ಮತ್ತು ಇರಾನ್(TrumpVsIran) ನಡುವಿನ ಸಂಘರ್ಷ ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಮಹತ್ವಾಕಾಂಕ್ಷೆಯ ಆಪರೇಷನ್ ಎಪಿಕ್ ಫ್ಯೂರಿ ಕಾರ್ಯಾಚರಣೆಯನ್ನು ಕೊನೆಗೊಳಿಸಲು ಸಿದ್ಧರಿರುವುದಾಗಿ ಘೋಷಿಸಿದ್ದಾರೆ. ಆದರೆ, ಇದಕ್ಕೆ ಇರಾನ್ ಅಮೆರಿಕದ ಕಠಿಣ ಷರತ್ತುಗಳಿಗೆ ಒಪ್ಪಿಗೆ ನೀಡಬೇಕು ಎಂಬ ಷರತ್ತನ್ನು ವಿಧಿಸಿದ್ದಾರೆ.
ಟ್ರಂಪ್ ಟ್ರೂತ್ ಸೋಶಿಯಲ್ ಸಂದೇಶ: ಎಚ್ಚರಿಕೆ ಮತ್ತು ಭರವಸೆ
ಬುಧವಾರ ತಮ್ಮ 'ಟ್ರೂತ್ ಸೋಶಿಯಲ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅಧ್ಯಕ್ಷ ಟ್ರಂಪ್, ಒಂದು ವೇಳೆ ಇರಾನ್ ನಮ್ಮ ಬೇಡಿಕೆಗಳಿಗೆ ಒಪ್ಪಿಗೆ ನೀಡಿದರೆ, ಇದು ಬಹುಶಃ ದೊಡ್ಡ ಊಹೆಯಾಗಬಹುದು. ಈಗಾಗಲೇ ಇತಿಹಾಸ ಸೃಷ್ಟಿಸಿರುವ ಎಪಿಕ್ ಫ್ಯೂರಿ ಕಾರ್ಯಾಚರಣೆ ಅಂತ್ಯಗೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನವನ್ನು ತೆರವುಗೊಳಿಸುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ. ಇದರಿಂದಾಗಿ ಜಗತ್ತಿನ ಪ್ರಮುಖ ತೈಲ ಸಾಗಾಣಿಕೆ ಮಾರ್ಗವಾದ ಹೊರ್ಮುಜ್ ಜಲಸಂಧಿ ಇರಾನ್ ಸೇರಿದಂತೆ ಎಲ್ಲಾ ರಾಷ್ಟ್ರಗಳ ಮುಕ್ತ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ತಿಳಿಸಿದ್ದಾರೆ.
ಒಪ್ಪದಿದ್ದರೆ ಭೀಕರ ಬಾಂಬ್ ದಾಳಿ: ಟ್ರಂಪ್ ಎಚ್ಚರಿಕೆ
ಒಂದೆಡೆ ಶಾಂತಿಯ ಮಾತುಗಳನ್ನಾಡುತ್ತಿರುವ ಟ್ರಂಪ್, ಮತ್ತೊಂದೆಡೆ ಇರಾನ್ ವಿರುದ್ಧ ಗುಡುಗಿದ್ದಾರೆ. ಒಂದು ವೇಳೆ ಇರಾನ್ ನಮ್ಮ ಬೇಡಿಕೆಗಳಿಗೆ ಸಮ್ಮತಿಸದಿದ್ದರೆ, ಬಾಂಬ್ ದಾಳಿ ಮತ್ತೆ ಆರಂಭವಾಗಲಿದೆ. ಈ ಬಾರಿ ದಾಳಿಯ ತೀವ್ರತೆ ಮತ್ತು ಮಟ್ಟ ಈ ಹಿಂದಿಗಿಂತಲೂ ಅತ್ಯಂತ ಭೀಕರವಾಗಿರಲಿದೆ ಎಂದು ಅಮೆರಿಕ ಅಧ್ಯಕ್ಷ ನೇರ ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆಯು ಪಶ್ಚಿಮ ಏಷ್ಯಾದಲ್ಲಿ ಸಂಭವನೀಯ ಭೀಕರ ಯುದ್ಧದ ಮುನ್ಸೂಚನೆಯನ್ನು ನೀಡುತ್ತಿದೆ.
ಪ್ರಾಜೆಕ್ಟ್ ಫ್ರೀಡಂಗೆ ತಾತ್ಕಾಲಿಕ ವಿರಾಮ
ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮುಕ್ತ ಸಂಚಾರಕ್ಕಾಗಿ ಅಮೆರಿಕ ಹಮ್ಮಿಕೊಂಡಿದ್ದ ಪ್ರಾಜೆಕ್ಟ್ ಫ್ರೀಡಂ ಯೋಜನೆಯನ್ನು ಅಲ್ಪಕಾಲದವರೆಗೆ ಸ್ಥಗಿತಗೊಳಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಇರಾನ್ ಜೊತೆಗಿನ ಒಪ್ಪಂದ ಅಂತಿಮಗೊಳ್ಳುತ್ತದೆಯೇ ಎಂಬದನ್ನು ಪರೀಕ್ಷಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶ್ವೇತಭವನ ತಿಳಿಸಿದೆ.
ಒಂದು ಪುಟದ ಐತಿಹಾಸಿಕ ಒಪ್ಪಂದ..?
ಮೂಲಗಳ ಪ್ರಕಾರ, ಅಮೆರಿಕ ಮತ್ತು ಇರಾನ್ ನಡುವೆ ಯುದ್ಧವನ್ನು ಕೊನೆಗೊಳಿಸಲು ಒಂದು ಪುಟದ ಜ್ಞಾಪಕ ಪತ್ರ ಸಿದ್ಧವಾಗುತ್ತಿದೆ. ಇದು ಕೇವಲ ಯುದ್ಧದ ಅಂತ್ಯಕ್ಕೆ ಮಾತ್ರವಲ್ಲದೆ, ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತಾದ ಸುದೀರ್ಘ ಮಾತುಕತೆಗಳಿಗೂ ಒಂದು ಚೌಕಟ್ಟನ್ನು ಒದಗಿಸಲಿದೆ ಎಂದು ವರದಿಯಾಗಿದೆ.
ರಾಜಕೀಯ ವಿಶ್ಲೇಷಣೆ: ಟ್ರಂಪ್ ಅವರ ಈ ನಡೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯ ಸ್ಥಿರತೆಗೆ ಸಹಕಾರಿಯಾಗಬಹುದು. ಆದರೆ, ಇರಾನ್ ಅಧ್ಯಕ್ಷರು ಅಮೆರಿಕದ ದಬ್ಬಾಳಿಕೆಯ ಷರತ್ತುಗಳಿಗೆ ಒಪ್ಪುತ್ತಾರೆಯೇ ಎಂಬುದು ಸದ್ಯದ ಕುತೂಹಲವಾಗಿದೆ. ಹೊರ್ಮುಜ್ ಜಲಸಂಧಿ ಮುಚ್ಚಲ್ಪಟ್ಟರೆ ಜಾಗತಿಕ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳುವುದಂತೂ ಖಚಿತವಾಗಿದೆ.
ವಿಶ್ವಸಂಸ್ಥೆ ಮತ್ತು ಜಾಗತಿಕ ನಾಯಕರು ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ 24 ಗಂಟೆಗಳು ಮಧ್ಯಪ್ರಾಚ್ಯದ ಭವಿಷ್ಯವನ್ನು ನಿರ್ಧರಿಸಲಿವೆ,(ಏಜೆನ್ಸೀಸ್).