USA-Iran Conflict | ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

ಯುದ್ಧ ಕೊನೆಗೊಳಿಸಲು ಮುಹೂರ್ತ ಫಿಕ್ಸ್ ಮಾಡಿದ ಟ್ರಂಪ್​...ಅಮೆರಿಕ ನಂಬಿಕೆಗೆ ಅರ್ಹ ಅಲ್ಲ ಎಂದ ಇರಾನ್​ ವಿದೇಶಾಂಗ ಸಚಿವ | USA-Iran Conflict

ವಾಷಿಂಗ್ಟನ್​: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ (USA-Iran Conflict) ಮಧ್ಯೆ ಬುಧವಾರ ಮಹತ್ವದ ಬೆಳವಣಿಗೆಯೊಂದು ಕಂಡುಬಂದಿದ್ದು, ಮುಂದಿನ ಎರಡು ಮೂರು ವಾರಗಳಲ್ಲಿ ಈ ಸಂಘರ್ಷ ಕೊನೆಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಓವಲ್ ಕಚೇರಿಯಿಂದ ಮಾತನಾಡಿದ ಟ್ರಂಪ್​, ಇರಾನ್ ಸಂಘರ್ಷಕ್ಕಿಂತ ಹೆಚ್ಚಾಗಿ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ಹೊಂದಿದ್ದು, ರಾಜತಾಂತ್ರಿಕ ಪ್ರಗತಿ ಸಾಧಿಸಿದರೆ ಅತಿ ಕಡಿಮೆ ಅವಧಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಇರಾನ್‌ನ ಸದ್ಯದ ನಾಯಕತ್ವವು ಹಿಂದಿನ ಆಡಳಿತಗಳಿಗಿಂತ ಹೆಚ್ಚು ಪ್ರಾಯೋಗಿಕ ಮತ್ತು ಸಮಂಜಸವಾಗಿದೆ ಎಂದು ಟ್ರಂಪ್​ ಶ್ಲಾಘಿಸಿದ್ದು, ಶ್ವೇತಭವನದ ಈ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿರುವ ಇರಾನ್, ಅಮೆರಿಕದೊಂದಿಗೆ ರಾಜತಾಂತ್ರಿಕ ಪ್ರಗತಿಯ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ.
ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ, ಅಮೆರಿಕದ ಮೇಲಿನ ವಿಶ್ವಾಸ ತುಂಬಾ ಕೆಳ ಮಟ್ಟದಲ್ಲಿದೆ, ಈ ಹಿಂದೆ ಒಪ್ಪಂದಗಳನ್ನು ಮಾಡಿಕೊಂಡಿದ್ದರೂ ಅಮೆರಿಕ ಯಾವುದೇ ಮುನ್ಸೂಚನೆಯಿಲ್ಲದೆ ಅದರಿಂದ ಹಿಂದೆ ಸರಿದ ಇತಿಹಾಸವಿದೆ, ಕಳೆದ ವರ್ಷಗಳಲ್ಲಿ ನಡೆಸಿದ ಮಾತುಕತೆಗಳ ಅಂತಿಮ ಫಲಿತಾಂಶ ದಾಳಿಯ ರೂಪದಲ್ಲಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾ, ವಾಷಿಂಗ್ಟನ್‌ನ ಕ್ರಮಗಳಲ್ಲಿ ಯಾವುದೇ ಪ್ರಾಮಾಣಿಕತೆ ಕಂಡುಬರುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಮಿಲಿಟರಿ ಸನ್ನದ್ಧತೆಯ ಬಗ್ಗೆಯೂ ಎಚ್ಚರಿಸಿರುವ ಅರಗ್ಚಿ, ಅಮೆರಿಕವು ಒಂದು ವೇಳೆ ಕಾರ್ಯಾಚರಣೆಗೆ ಮುಂದಾದರೆ ಅದನ್ನು ಎದುರಿಸಲು ಇರಾನಿನ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ ಎಂದು ಹೇಳಿದ್ದಾರೆ.
ಫೆಬ್ರವರಿ 28 ರಂದು ಆಪರೇಷನ್ ಎಪಿಕ್ ಫ್ಯೂರಿ ಅಡಿಯಲ್ಲಿ ಪ್ರಾರಂಭವಾದ ಇರಾನ್-ಅಮೆರಿಕ-ಇಸ್ರೇಲ್ ಯುದ್ಧವು ಈಗ ಎರಡನೇ ತಿಂಗಳಿಗೆ ಪ್ರವೇಶಿಸಿದ್ದು, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಳಿಕ ಪ್ರಾರಂಭವಾದ ಈ ಸಂಘರ್ಷವು ಇಡೀ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಯುದ್ಧವನ್ನು ಕೊನೆಗೊಳಿಸಲು ಡೊನಾಲ್ಡ್ ಟ್ರಂಪ್ 15 ಅಂಶಗಳ ಶಾಂತಿ ಯೋಜನೆಯನ್ನು ಪ್ರಸ್ತಾಪಿಸಿದ್ದರೂ, ಇರಾನ್ ಅದನ್ನು ತಿರಸ್ಕರಿಸಿದೆ. ಬದಲಾಗಿ ಇರಾನ್ ಐದು ಕಠಿಣ ಷರತ್ತುಗಳನ್ನು ವಿಧಿಸಿದೆ.
ಇದರಲ್ಲಿ ಯುದ್ಧ ಪರಿಹಾರ ನೀಡಬೇಕು, ಇರಾನ್ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಬೇಕು ಮತ್ತು ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ನ ಸಾರ್ವಭೌಮತ್ವವನ್ನು ಅಧಿಕೃತವಾಗಿ ಗುರುತಿಸಬೇಕು ಎಂಬ ಪ್ರಮುಖ ಬೇಡಿಕೆಗಳಿವೆ(ಏಜೆನ್ಸೀಸ್​​).