Will Israel take over Gaza?
ಗಾಜಾ ಪಟ್ಟಿಯ ಬಹುತೇಕ ಭಾಗವನ್ನು ಅಂದರೆ ಶೇಕಡ 70ರಷ್ಟು ಪ್ರದೇಶವನ್ನು ಮಿಲಿಟರಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮತ್ತು ಅಲ್ಲಿ ಸುರಕ್ಷತಾ ವಲಯಗಳನ್ನು ನಿರ್ಮಿಸಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇನೆಗೆ ಆದೇಶಿಸಿದ್ದಾರೆ. ಗಾಜಾ ಪಟ್ಟಿಯು ಕೇವಲ 41 ಕಿಲೋಮೀಟರ್ ಉದ್ದ ಮತ್ತು 10-12 ಕಿಲೋಮೀಟರ್ ಅಗಲವಿರುವ ಒಂದು ಸಣ್ಣ ಭೂಭಾಗ. ಆದರೆ, ಇದು ಜಾಗತಿಕವಾಗಿ ಅತ್ಯಂತ ವಿವಾದಾತ್ಮಕ ಮತ್ತು ಮಹತ್ವದ ಪ್ರದೇಶ. ಗಾಜಾ ಇಸ್ರೇಲ್ನ ವಶವಾದರೆ ಏನೆಲ್ಲ ಆಗಬಹುದು, ಅದರ ಪರಿಣಾಮಗಳೇನು? ಈ ಕುರಿತಾದ ವಿವರ ಇಲ್ಲಿದೆ.
ಗಾಜಾ ಪಟ್ಟಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಅಥವಾ ಅಲ್ಲಿ ತನ್ನ ಸೇನಾ ಹಿಡಿತ ಸಾಧಿಸುವುದು ಇಸ್ರೇಲ್ಗೆ ಕೇವಲ ಭೌಗೋಳಿಕ ವಿಷಯವಲ್ಲ; ಅದು ಅದರ ಅಸ್ತಿತ್ವ, ಭದ್ರತೆ ಮತ್ತು ರಾಜಕೀಯದೊಂದಿಗೆ ಆಳವಾಗಿ ಬೆಸೆದುಕೊಂಡಿದೆ. 2007ರಿಂದ ಗಾಜಾವನ್ನು ಆಳುತ್ತಿರುವ ‘ಹಮಾಸ್’ ಸಂಘಟನೆಯನ್ನು ಇಸ್ರೇಲ್ ತನ್ನ ಅಸ್ತಿತ್ವಕ್ಕೆ ಇರುವ ದೊಡ್ಡ ಆಪತ್ತು ಎಂದು ಪರಿಗಣಿಸಿದೆ. ಇಸ್ರೇಲ್ ಮೇಲಿನ ನಿರಂತರ ರಾಕೆಟ್ ದಾಳಿಗಳು ಮತ್ತು ಆತ್ಮಹತ್ಯಾ ದಾಳಿಯಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಹಮಾಸ್ನ ಸಂಪೂರ್ಣ ನಿರ್ಮೂಲನೆ ಇಸ್ರೇಲ್ಗೆ ಅತ್ಯಂತ ಮುಖ್ಯವಾಗಿದೆ. ಗಾಜಾದ ಗಡಿಯುದ್ದಕ್ಕೂ ಒಂದು ಸುರಕ್ಷಿತ ವಲಯವನ್ನು ನಿರ್ಮಿಸುವುದು ಇಸ್ರೇಲ್ನ ಉದ್ದೇಶವಾಗಿದೆ. ಇದರ ಮೂಲಕ ಇಸ್ರೇಲ್ನ ನಾಗರಿಕ ವಸಾಹತುಗಳ ಮೇಲೆ ನೇರ ದಾಳಿಗಳು ನಡೆಯದಂತೆ ತಡೆಯಬಹುದು ಎಂಬುದು ಅದರ ಲೆಕ್ಕಾಚಾರ. ಇಸ್ರೇಲ್ ರಕ್ಷಣಾ ಪಡೆಗಳು ಈಗಾಗಲೇ ಗಾಜಾದ ಉತ್ತರ ಮತ್ತು ಮಧ್ಯ ಭಾಗಗಳನ್ನು ದಾಟಿ, ದಕ್ಷಿಣದ ರಫಾ ಗಡಿಯವರೆಗೂ ತನ್ನ ಮಿಲಿಟರಿ ನಿಯಂತ್ರಣವನ್ನು ವಿಸ್ತರಿಸಿವೆ. ಹಮಾಸ್ ಮತ್ತು ಗಾಜಾದಲ್ಲಿರುವ ಇತರ ಸಶಸ್ತ್ರ ಗುಂಪುಗಳಿಗೆ ಇರಾನ್ ಆರ್ಥಿಕ ಮತ್ತು ಆಯುಧಗಳ ಬೆಂಬಲ ನೀಡುತ್ತಿದೆ. ಗಾಜಾವನ್ನು ನಿಯಂತ್ರಿಸುವುದರಿಂದ, ಇರಾನ್ ತನ್ನ ಗಡಿಯ ಬಳಿ ಪ್ರಭಾವ ಸಾಧಿಸುವುದನ್ನು ಇಸ್ರೇಲ್ ತಡೆಯಬಹುದು. ಅಲ್ಲದೆ, ಇಸ್ರೇಲ್ನ ಪ್ರಸ್ತುತ ಸರ್ಕಾರಕ್ಕೆ ಮತ್ತು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಹಮಾಸ್ ವಿರುದ್ಧದ ಸಂಪೂರ್ಣ ಗೆಲುವು ಹಾಗೂ ಗಾಜಾದ ಮೇಲಿನ ಹಿಡಿತ ತಮ್ಮ ರಾಜಕೀಯ ಭವಿಷ್ಯವನ್ನು ಉಳಿಸಿಕೊಳ್ಳಲು ಅತ್ಯಗತ್ಯವಾಗಿದೆ.
ಗಾಜಾ ಪಟ್ಟಿಯಲ್ಲಿ ಏನೇನಾಯಿತು?
ಹಮಾಸ್ 2023ರ ಅಕ್ಟೋಬರ್ 7ರಂದು ನಡೆಸಿದ ದಾಳಿಯಲ್ಲಿ 1200ಕ್ಕೂ ಅಧಿಕ ಇಸ್ರೇಲಿಗರು ಮೃತಪಟ್ಟರು. ಇದರಲ್ಲಿ 815 ಜನರು ನಾಗರಿಕರು. ಹಮಾಸ್ನ ಈ ದಾಳಿಯ ನಂತರವೇ ಇಸ್ರೇಲ್ ಹಮಾಸ್ ಬಂಡುಕೋರ ಸಂಘಟನೆಯ ನೆಲೆಗಳನ್ನು ಗುರಿಯಾಗಿಸಿಕೊಂಡು ಗಾಜಾ ಪಟ್ಟಿ ಮೇಲೆ ಪ್ರತಿದಾಳಿ ಆರಂಭಿಸಿತು ಮತ್ತು ಯುದ್ಧದ ಸ್ವರೂಪ ಪಡೆದುಕೊಂಡು ಎರಡು ವರ್ಷಗಳ ಕಾಲ ಅಂದರೆ 2025ರ ಅಕ್ಟೋಬರ್ವರೆಗೆ ಮುಂದುವರಿಯಿತು. ಶಾಲೆಗಳು, ಆಸ್ಪತ್ರೆಗಳು ಕೂಡ ದಾಳಿಗೆ ಛಿದ್ರವಾದವು.
ಗಾಜಾದ ಒಟ್ಟು ಜನಸಂಖ್ಯೆ 22 ಲಕ್ಷ. ಇಸ್ರೇಲ್ ಎರಡು ವರ್ಷಗಳ ಕಾಲ ನಡೆಸಿದ ದಾಳಿಯಲ್ಲಿ ಗಾಜಾದಲ್ಲಿನ 67,075 ಪ್ಯಾಲೆಸ್ತೀನಿಯನ್ನರು ಮೃತಪಟ್ಟಿದ್ದಾರೆ. ಈ ಪೈಕಿ ಮಕ್ಕಳ ಸಂಖ್ಯೆ 20 ಸಾವಿರ.
ನಿರಂತರ ದಾಳಿಯಿಂದ ಗಾಜಾದಲ್ಲಿ 19 ಲಕ್ಷ ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಗಾಜಾದಲ್ಲಿ 195 ಪತ್ರಕರ್ತರು/ಮಾಧ್ಯಮ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಮಾನವೀಯ ನೆರವು ತಲುಪಿಸುತ್ತಿದ್ದ 554 ಕಾರ್ಯಕರ್ತರು ಬಲಿಯಾಗಿದ್ದಾರೆ.
ಇಸ್ರೇಲ್ ಭದ್ರತಾ ಪಡೆಯ 466 ಸಿಬ್ಬಂದಿ ಗಾಜಾದಲ್ಲಿ ಪ್ರಾಣ ತೆತ್ತಿದ್ದಾರೆ.
ಇಸ್ರೇಲ್ ದಾಳಿಯಿಂದ ಹಮಾಸ್ ತತ್ತರ
ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ವಾಯು ಮತ್ತು ಭೂಸೇನಾ ದಾಳಿಗಳಿಂದಾಗಿ ಹಮಾಸ್ ತತ್ತರಿಸಿದೆ. ಇಸ್ರೇಲ್ನ ದೊಡ್ಡ ಯಶಸ್ಸೆಂದರೆ ಹಮಾಸ್ನ ಪ್ರಮುಖ ರಾಜಕೀಯ ಮತ್ತು ಮಿಲಿಟರಿ ನಾಯಕರನ್ನು ಬೇಟೆಯಾಡಿರುವುದು. ಹಮಾಸ್ನ ರಾಜಕೀಯ ಮುಖ್ಯಸ್ಥನಾಗಿದ್ದ ಇಸ್ಮಾಯಿಲ್ ಹನಿಯೇ ಮತ್ತು ಅಕ್ಟೋಬರ್ 7ರ ದಾಳಿಯ ಮಾಸ್ಟರ್‌ಮೈಂಡ್ ಯಹ್ಯಾ ಸಿನ್ವರ್ ಸೇರಿದಂತೆ ಹಲವು ಉನ್ನತ ಮಟ್ಟದ ಕಮಾಂಡರ್ಗಳನ್ನು ಇಸ್ರೇಲ್ ಸರಣಿ ಕಾರ್ಯಾಚರಣೆಗಳ ಮೂಲಕ ಹತ್ಯೆ ಮಾಡಿದೆ. ಇದು ಹಮಾಸ್ನ ಕಮಾಂಡ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿದೆ.
ಸುರಂಗ ಜಾಲಗಳ ನಾಶ: ಗಾಜಾದ ಭೂಗರ್ಭದಲ್ಲಿ ಹಮಾಸ್ ನಿರ್ಮಿಸಿದ್ದ ನೂರಾರು ಕಿಲೋಮೀಟರ್ ಉದ್ದದ ಭೀಕರ ಸುರಂಗಗಳ ಜಾಲವನ್ನು (ಇದನ್ನು ‘ಗಾಜಾ ಮೆಟ್ರೋ’ ಎನ್ನಲಾಗುತ್ತಿತ್ತು) ಇಸ್ರೇಲ್ ಸೈನ್ಯ ಪತ್ತೆ ಹಚ್ಚಿ, ಬಾಂಬ್ ಹಾಕಿ ಧ್ವಂಸಗೊಳಿಸಿದೆ. ಇದರೊಂದಿಗೆ ಹಮಾಸ್ನ ಅಡಗುದಾಣಗಳು ಮತ್ತು ಆಯುಧ ಸಂಗ್ರಹಾಗಾರಗಳು ನಾಶವಾಗಿವೆ.
ಮಿಲಿಟರಿ ಸಾಮರ್ಥ್ಯದ ಕುಸಿತ: ದಾಳಿಗೆ ಮುನ್ನ ಹಮಾಸ್ ಹೊಂದಿದ್ದ ಶೇಕಡ 80ಕ್ಕೂ ಹೆಚ್ಚು ರಾಕೆಟ್ ಲಾಂಚರ್ಗಳು, ಡ್ರೋನ್ಗಳು ಮತ್ತು ಆಯುಧ ತಯಾರಿಕಾ ಕಾರ್ಖಾನೆಗಳನ್ನು ಇಸ್ರೇಲ್ ಧ್ವಂಸಗೊಳಿಸಿದೆ. ಹಮಾಸ್ನ ಸಾವಿರಾರು ಸಶಸ್ತ್ರ ಹೋರಾಟಗಾರರು ಈ ಯುದ್ಧದಲ್ಲಿ ಹತರಾಗಿದ್ದಾರೆ ಅಥವಾ ಸೆರೆಸಿಕ್ಕಿದ್ದಾರೆ.
ಹಣಕಾಸು ಮತ್ತು ಪೂರೈಕೆ ಮಾರ್ಗಗಳ ಬಂದ್: ಗಾಜಾ ಮತ್ತು ಈಜಿಪ್ತ್ ಗಡಿಯಲ್ಲಿದ್ದ ಸುರಂಗಗಳನ್ನು ಇಸ್ರೇಲ್ ವಶಪಡಿಸಿಕೊಂಡಿರುವುದರಿಂದ, ಹಮಾಸ್ಗೆ ಹೊರದೇಶಗಳಿಂದ ಬರುತ್ತಿದ್ದ ಕಳ್ಳಸಾಗಣೆ ಆಯುಧಗಳು ಮತ್ತು ಆರ್ಥಿಕ ನೆರವು ಬಹುತೇಕ ಸ್ಥಗಿತಗೊಂಡಿದೆ.
ಗಾಜಾ ಪಟ್ಟಿಯು ಮೆಡಿಟರೇನಿಯನ್ ಸಮುದ್ರದ ಕರಾವಳಿಯಲ್ಲಿದ್ದು, ಇಸ್ರೇಲ್ ಮತ್ತು ಈಜಿಪ್ತ್ ದೇಶಗಳ ನಡುವೆ ಇದೆ. 1948ರಲ್ಲಿ ಇಸ್ರೇಲ್ ದೇಶದ ಸ್ಥಾಪನೆಯಾದಾಗಿನಿಂದಲೂ ಈ ಪ್ರದೇಶವು ಸಂಘರ್ಷದ ಕೇಂದ್ರಬಿಂದುವಾಗಿದೆ. ಮೊದಲು ಈಜಿಪ್ತ್ ನಿಯಂತ್ರಣದಲ್ಲಿದ್ದ ಇದನ್ನು 1967ರ ಆರು ದಿನಗಳ ಯುದ್ಧದಲ್ಲಿ ಇಸ್ರೇಲ್ ವಶಪಡಿಸಿಕೊಂಡಿತು. ನಂತರ 2005ರಲ್ಲಿ ಇಸ್ರೇಲ್ ತನ್ನ ಸೈನ್ಯವನ್ನು ಹಿಂಪಡೆಯಿತು. 2007ರಿಂದ ಗಾಜಾ ಪಟ್ಟಿಯನ್ನು ಹಮಾಸ್ ಎಂಬ ಇಸ್ಲಾಮಿಕ್ ಸಶಸ್ತ್ರ ಸಂಘಟನೆ ಸಂಪೂರ್ಣವಾಗಿ ನಿಯಂತ್ರಿಸುತ್ತಿದೆ. ಹಮಾಸ್ ಅನ್ನು ಇಸ್ರೇಲ್ ಮತ್ತು ಪಾಶ್ಚಿಮಾತ್ಯ ದೇಶಗಳು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿವೆ. ಗಾಜಾ ಪಟ್ಟಿಯಲ್ಲಿ 22 ಲಕ್ಷಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ವಾಸಿಸುತ್ತಿದ್ದಾರೆ.
ಈಗಿನ ಸ್ಥಿತಿ ಏನು?
ಹಮಾಸ್ ಇಸ್ರೇಲ್ ಮೇಲೆ 2023ರ ಅಕ್ಟೋಬರ್ 7ರಂದು ನಡೆಸಿದ ಭೀಕರ ದಾಳಿಯ ನಂತರ, ಇಸ್ರೇಲ್ ಹಮಾಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಗಾಜಾದ ಮೇಲೆ ನಿರಂತರ ಮಿಲಿಟರಿ ಕಾರ್ಯಾಚರಣೆ ನಡೆಸಿದೆ. ನಿರಂತರ ಬಾಂಬ್ ದಾಳಿ ಮತ್ತು ಭೂಸೇನಾ ಕಾರ್ಯಾಚರಣೆಯಿಂದಾಗಿ ಗಾಜಾದ ಬಹುತೇಕ भाग ಧ್ವಂಸಗೊಂಡಿದೆ. ಆಹಾರ, ಶುದ್ಧ ನೀರು, ಔಷಧ ಮತ್ತು ಇಂಧನದ ತೀವ್ರ ಅಭಾವ ಸೃಷ್ಟಿಯಾಗಿದೆ. ಆಸ್ಪತ್ರೆಗಳು, ಶಾಲೆಗಳು, ವಸತಿ ಸಮುಚ್ಚಯಗಳು ಮತ್ತು ಮೂಲಸೌಕರ್ಯಗಳು ಸಂಪೂರ್ಣವಾಗಿ ನಾಶವಾಗಿವೆ. ಶೇಕಡ 80ಕ್ಕೂ ಹೆಚ್ಚು ಜನಸಂಖ್ಯೆಯು ಆಶ್ರಯ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹಮಾಸ್ ಆರೋಗ್ಯ ಸಚಿವಾಲಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರಕಾರ, ಈ ಸಂಘರ್ಷದಲ್ಲಿ 65 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಹಮಾಸ್ ಕ್ರೌರ್ಯದ ಇತಿಹಾಸ
ಹಮಾಸ್ ಸಂಘಟನೆ ಇಸ್ರೇಲ್ನ ನಾಗರಿಕರು ಮತ್ತು ಮಿಲಿಟರಿ ಗುರಿಗಳ ಮೇಲೆ ಹಲವು ದಶಕಗಳಿಂದ ದಾಳಿ ನಡೆಸುತ್ತ ಬಂದಿದೆ. ಈ ಪೈಕಿ 2023ರ ಅಕ್ಟೋಬರ್ 7ರಂದು ನಡೆದ ಭೀಕರ ದಾಳಿ ಇಸ್ರೇಲ್ ಇತಿಹಾಸದಲ್ಲೇ ನಡೆದ ದೊಡ್ಡ ಮತ್ತು ಕ್ರೂರ ದಾಳಿಯಾಗಿದೆ. ಹಮಾಸ್ ಉಗ್ರರು ಗಾಜಾ ಗಡಿಯನ್ನು ದಾಟಿ ಇಸ್ರೇಲ್ನ ಹಳ್ಳಿಗಳು ಮತ್ತು ಸಂಗೀತ ಹಬ್ಬದ ಮೇಲೆ ಏಕಾಏಕಿ ಮುಗಿಬಿದ್ದರು. ಈ ಒಂದೇ ದಿನದಲ್ಲಿ 1,200ಕ್ಕೂ ಹೆಚ್ಚು ಜನರನ್ನು ಕ್ರೂರವಾಗಿ ಹತ್ಯೆ ಮಾಡಲಾಯಿತು. ಹತ್ಯೆಗೀಡಾದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. 250ಕ್ಕೂ ಹೆಚ್ಚು ಜನರನ್ನು ಅಪಹರಿಸಿ ಗಾಜಾ ಪಟ್ಟಿಯ ಸುರಂಗಗಳಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿತ್ತು.
ನಿರಂತರ ರಾಕೆಟ್ ದಾಳಿಗಳು: ಹಮಾಸ್ ಗಾಜಾದ ಜನನಿಬಿಡ ಪ್ರದೇಶಗಳಿಂದ ಇಸ್ರೇಲ್ನ ಟೆಲ್ ಅವಿವ್ ಮತ್ತು ಜೆರುಸಲೇಂನಂತಹ ಪ್ರಮುಖ ನಗರಗಳ ಮೇಲೆ ಹತ್ತಾರು ಸಾವಿರ ರಾಕೆಟ್ಗಳನ್ನು ಉಡಾಯಿಸಿದೆ. ಇಸ್ರೇಲ್ನ ಐರನ್ ಡೋಮ್ ರಕ್ಷಣಾ ವ್ಯವಸ್ಥೆಯು ಹೆಚ್ಚಿನ ರಾಕೆಟ್ಗಳನ್ನು ತಡೆದರೂ, ಇವು ನಾಗರಿಕರ ಜೀವಕ್ಕೆ ನಿರಂತರ ಭೀತಿ ಹುಟ್ಟಿಸಿವೆ.
ಆತ್ಮಹತ್ಯಾ ಬಾಂಬ್ ದಾಳಿಗಳು: ಹಮಾಸ್ 1990 ಮತ್ತು 2000ರ ದಶಕದ ಆರಂಭದಲ್ಲಿ ಇಸ್ರೇಲ್ನ ಸಾರ್ವಜನಿಕ ಬಸ್ಗಳು, ರೆಸ್ಟೋರೆಂಟ್ಗಳು ಮತ್ತು ಶಾಪಿಂಗ್ ಮಾಲ್ಗಳಲ್ಲಿ ಸರಣಿ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ನಡೆಸಿ ನೂರಾರು ಸಾಮಾನ್ಯ ನಾಗರಿಕರ ಆಕಸ್ಮಿಕ ಸಾವಿಗೆ ಕಾರಣವಾಗಿದೆ.
ಪರಿಣಾಮಗಳೇನು?
ಬೆಂಜಮಿನ್ ನೆತನ್ಯಾಹು ಅವರ ಈ ನಿರ್ಧಾರವು ಇಸ್ರೇಲ್ನ ಭದ್ರತೆಯ ದೃಷ್ಟಿಯಿಂದ ಹಮಾಸ್ ಅನ್ನು ಮುಗಿಸಲು ಕೈಗೊಂಡ ಕ್ರಮ ಎನ್ನಲಾದರೂ, ಇದು ಗಾಜಾದಲ್ಲಿ ಪ್ಯಾಲೆಸ್ತೀನಿಯನ್ನರ ಅಸ್ತಿತ್ವಕ್ಕೆ ಮತ್ತು ಮಧ್ಯಪ್ರಾಚ್ಯದ ಶಾಂತಿಗೆ ಸವಾಲಾಗಿ ಪರಿಣಮಿಸಿದೆ. ಇಸ್ರೇಲ್ ಸೈನ್ಯವು ಗಾಜಾದ ಶೇ. 70ರಷ್ಟು ಭಾಗವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡರೆ, ಅಲ್ಲಿ ಉಳಿದಿರುವ ಲಕ್ಷಾಂತರ ಪ್ಯಾಲೆಸ್ತೀನಿಯನ್ನರು ಅತ್ಯಂತ ಕಿರಿದಾದ ಜಾಗಕ್ಕೆ (ಉದಾಹರಣೆಗೆ ದಕ್ಷಿಣದ ಅಲ್-ಮವಾಸಿ ಅಥವಾ ಈಜಿಪ್ತ್ ಗಡಿಗೆ) ವಲಸೆ ಹೋಗಬೇಕಾಗುತ್ತದೆ. ಇದರಿಂದ ಮಾನವೀಯ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸುತ್ತದೆ.
ಹಮಾಸ್ನ ಹಿಮ್ಮೆಟ್ಟುವಿಕೆ: ಹಮಾಸ್ನ ಸುರಂಗ ಜಾಲಗಳು ಮತ್ತು ಕಮಾಂಡ್ ಸೆಂಟರ್ಗಳನ್ನು ಧ್ವಂಸಗೊಳಿಸಲು ಇಸ್ರೇಲ್ಗೆ ಮತ್ತಷ್ಟು ಮುಕ್ತ ಅವಕಾಶ ಸಿಗುತ್ತದೆ.
ಯುದ್ಧಭೀತಿ: ಗಾಜಾದ ಮೇಲಿನ ಇಸ್ರೇಲ್ ಹಿಡಿತವು ಲೆಬನಾನ್ನ ಹೆಜ್ಬೊಲ್ಲಾ ಸಂಘಟನೆ, ಯಮನ್ನ ಹೂತಿ ಬಂಡುಕೋರರು ಮತ್ತು ನೇರವಾಗಿ ಇರಾನ್ ದೇಶವನ್ನು ಪ್ರಚೋದಿಸಬಹುದು. ಇದು ಇಡೀ ಮಧ್ಯಪ್ರಾಚ್ಯ ವಲಯವನ್ನು ಒಂದು ಮಹಾಯುದ್ಧದ ಕಡೆಗೆ ದೂಡಬಹುದು.