ನಖ್ವಿ ಅಸಮರ್ಥ ಅಂದಿದ್ದ ಸ್ಪೀಡ್ ಕಿಂಗ್, ದಿಢೀರ್ ಉಲ್ಟಾ ಹೊಡೆದಿದ್ದೇಕೆ.,: ರಾವಲ್ಪಿಂಡಿ ಎಕ್ಸ್‌ಪ್ರೆಸ್ ಹೇಳಿಕೆ ಬದಲಾಗಿದ್ದೆಲ್ಲಿ..?
ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್(Shoaib Akhtar), ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಅಸಮರ್ಥ ಮತ್ತು ಅನಕ್ಷರಸ್ಥ ಎಂದು ಕರೆದ ಬೆನ್ನಲ್ಲೇ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ. ಈ ಮೂಲಕ ಕ್ರಿಕೆಟ್ ವಲಯದಲ್ಲಿ ಉಂಟಾಗಿದ್ದ ದೊಡ್ಡ ಮಟ್ಟದ ವಿವಾದಕ್ಕೆ ಅಖ್ತರ್ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ.
ವಿವಾದದ ಹಿನ್ನೆಲೆ
ಇತ್ತೀಚೆಗೆ ನಡೆದ ಖಾಸಗಿ ಸುದ್ದಿ ವಾಹಿನಿಯ ಚರ್ಚಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಖ್ತರ್, ಪಾಕಿಸ್ತಾನ ಕ್ರಿಕೆಟ್‌ನ ಪ್ರಸ್ತುತ ಸ್ಥಿತಿಯ ಬಗ್ಗೆ ಮಾತನಾಡುತ್ತಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಅವರು ಬಳಸಿದ ಕೆಲವು ಕಠಿಣ ಪದಗಳು ನೇರವಾಗಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿರನ್ನು ಗುರಿಯಾಗಿವೆ ಎಂದು ವ್ಯಾಖ್ಯಾನಿಸಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕ್ರೀಡಾ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಅಖ್ತರ್ ನೀಡಿದ ಸ್ಪಷ್ಟನೆ
ತಮ್ಮ ಹೇಳಿಕೆ ತಪ್ಪಾಗಿ ಅರ್ಥೈಸಲ್ಪಟ್ಟಿದೆ ಎಂದು ಅರಿತ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಅಖ್ತರ್, ಈಗ ಸಂಪೂರ್ಣವಾಗಿ ಪಲ್ಟಿ ಹೊಡೆದಿದ್ದಾರೆ. ನನ್ನ ಮಾತುಗಳು ಮೊಹ್ಸಿನ್ ನಖ್ವಿರನ್ನು ಉದ್ದೇಶಿಸಿರಲಿಲ್ಲ. ಬದಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಡೆಸುತ್ತಿರುವ ಉನ್ನತ ಮಟ್ಟದ ಅಧಿಕಾರಿಗಳ ಬಗ್ಗೆ ನಾನು ಮಾತನಾಡುತ್ತಿದ್ದೆ. ಆದರೆ ಟಿವಿ ಚಾನೆಲ್ ಅದನ್ನು ತಿರುಚಿ ಪ್ರಸ್ತುತಪಡಿಸಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಮುಂದುವರಿದು ಮಾತನಾಡಿದ ಅಖ್ತರ್, ನಖ್ವಿ ಬಗ್ಗೆ ನಾವು ತಪ್ಪು ಮಾತುಗಳನ್ನು ಆಡಬಾರದು. ಅವರು ಒಬ್ಬ ಒಳ್ಳೆಯ ವ್ಯಕ್ತಿ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ವಿಮರ್ಶಕರ ಅಸಮಾಧಾನ
ಅಖ್ತರ್ರ ಈ ಹಠಾತ್ ಬದಲಾವಣೆಯನ್ನು ಹಲವು ಕ್ರೀಡಾಭಿಮಾನಿಗಳು ಟೀಕಿಸಿದ್ದಾರೆ. ಅಖ್ತರ್ ಯಾವಾಗಲೂ ನೇರ ನುಡಿಗೆ ಹೆಸರುವಾಸಿಯಾಗಿದ್ದರು. ಆದರೆ ಈಗ ಪಿಸಿಬಿ ಮುಖ್ಯಸ್ಥರ ಮುಂದೆ ಮಣಿಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಪಾಕಿಸ್ತಾನ ಕ್ರಿಕೆಟ್ ಇತ್ತೀಚಿನ ದಿನಗಳಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದು, ಮಂಡಳಿಯ ಆಡಳಿತ ವೈಖರಿಯ ವಿರುದ್ಧ ಆಕ್ರೋಶ ಹೆಚ್ಚುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ,(ಏಜೆನ್ಸೀಸ್).