ವಿಶ್ವವು ಭಾರತೀಯವಾಗಬೇಕು ಎಂದಿದ್ದೇಕೆ ಫಿನ್ಲೆಂಡ್ ಅಧ್ಯಕ್ಷ..? ಯುರೋಪ್ ರಾಷ್ಟ್ರಗಳ ಈ ಹಠಾತ್ ಬದಲಾವಣೆಯ ಹಿಂದಿರುವ ರಹಸ್ಯವೇನು!
ನವದೆಹಲಿ: ಜಾಗತಿಕ ರಾಜತಾಂತ್ರಿಕ ಅಂಗಳದಲ್ಲಿ ಭಾರತದ ಶಕ್ತಿ ಮತ್ತೊಮ್ಮೆ ಸಾಬೀತಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕು ಎಂಬ ಕೂಗಿಗೆ ಈಗ ಯುರೋಪಿಯನ್ ರಾಷ್ಟ್ರ ಫಿನ್ಲೆಂಡ್ ಕೂಡ ದನಿಗೂಡಿಸಿದೆ. ಭಾರತಕ್ಕೆ ನಾಲ್ಕು ದಿನಗಳ ಭೇಟಿ ನೀಡಿರುವ ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್(Alexander Stubb), ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ, ವಿಶ್ವವು ಸ್ವಲ್ಪ ಹೆಚ್ಚು ಭಾರತೀಯವಾಗಬೇಕು ಎಂಬ ಹೆಮ್ಮೆಯ ಹೇಳಿಕೆಯನ್ನು ನೀಡಿದ್ದಾರೆ.
ಜಾಗತಿಕ ಶಕ್ತಿಯಾಗಿ ಭಾರತದ ಉದಯ
ಬದಲಾಗುತ್ತಿರುವ ವಿಶ್ವ ವ್ಯವಸ್ಥೆಯಲ್ಲಿ ಭಾರತದ ಪಾತ್ರ ನಿರ್ಣಾಯಕ ಎಂದು ಬಣ್ಣಿಸಿದ ಅಲೆಕ್ಸಾಂಡರ್ ಸ್ಟಬ್, ವಿಶ್ವವು ಈಗ ಪರಿವರ್ತನೆಯ ಹಂತದಲ್ಲಿದೆ. ಗ್ಲೋಬಲ್ ಸೌತ್ ರಾಷ್ಟ್ರಗಳ ಜೊತೆಗೂಡಿ ಭಾರತವು ಭವಿಷ್ಯದ ಅಂತಾರಾಷ್ಟ್ರೀಯ ಸಂಬಂಧಗಳ ದಿಕ್ಕನ್ನು ನಿರ್ಧರಿಸಲಿದೆ ಎಂದು ಭವಿಷ್ಯ ನುಡಿದರು. ಜಾಗತಿಕ ಶಾಂತಿ ಮತ್ತು ಭದ್ರತೆಯ ದೃಷ್ಟಿಯಿಂದ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಗುವುದು ಅನಿವಾರ್ಯ ಎಂದು ಒತ್ತಿ ಹೇಳಿದ್ದಾರೆ.
ಫಿನ್ಲೆಂಡ್ ಅಧ್ಯಕ್ಷರ ಭೇಟಿಯ ಪ್ರಮುಖ ಮುಖ್ಯಾಂಶಗಳು
ಭಾರತೀಯ ವಿದೇಶಾಂಗ ನೀತಿಗೆ ಪ್ರಶಂಸೆ: ಭಾರತದ ವಿದೇಶಾಂಗ ನೀತಿಯು ವಾಸ್ತವ ಮತ್ತು ವ್ಯವಹಾರಿಕತೆಯಿಂದ ಕೂಡಿದೆ. ನೀವು ಎಂದಿಗೂ ಭ್ರಮೆಯಲ್ಲಿಲ್ಲ. ಕಾರ್ಯತಂತ್ರದ ಜಾಗರೂಕತೆ ಮತ್ತು ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವ ಮೂಲಕ ಜಗತ್ತಿಗೆ ಮಾದರಿಯಾಗಿದ್ದೀರಿ ಎಂದು ಸ್ಟಬ್ ಶ್ಲಾಘಿಸಿದ್ಧಾರೆ.
ಆರ್ಥಿಕ ಶಕ್ತಿ: ಭಾರತವು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದು, ಯುರೋಪಿಗೆ ಅತ್ಯಂತ ಪ್ರಮುಖ ಕಾರ್ಯತಂತ್ರದ ಪಾಲುದಾರನಾಗಿದೆ ಎಂದು ಅಲೆಕ್ಸಾಂಡರ್ ತಿಳಿಸಿದ್ದಾರೆ.
ತಂತ್ರಜ್ಞಾನ ಮೈತ್ರಿ: ಸ್ಟಬ್ ಅವರೊಂದಿಗೆ 20ಕ್ಕೂ ಹೆಚ್ಚು ಫಿನ್ಲೆಂಡ್ ಕಂಪನಿಗಳು ಭಾರತಕ್ಕೆ ಆಗಮಿಸಿವೆ. ಇವು ಕ್ವಾಂಟಮ್ ಕಂಪ್ಯೂಟಿಂಗ್, ಉಪಗ್ರಹ ತಂತ್ರಜ್ಞಾನ, ಗ್ರೀನ್ ಟೆಕ್ ಮತ್ತು ನೆಟ್‌ವರ್ಕ್ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಕೈಜೋಡಿಸಲಿವೆ.
ಪಶ್ಚಿಮ ಏಷ್ಯಾ ಮತ್ತು ಯುಕ್ರೇನ್ ಯುದ್ಧದ ಚರ್ಚೆ
ಪ್ರಧಾನಿ ಮೋದಿ ಮತ್ತು ಅಲೆಕ್ಸಾಂಡರ್ ಸ್ಟಬ್ ಅವರು ಪಶ್ಚಿಮ ಏಷ್ಯಾ ಹಾಗೂ ಯುಕ್ರೇನ್‌ನಲ್ಲಿ ನಡೆಯುತ್ತಿರುವ ಭೀಕರ ಸಂಘರ್ಷಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಯುದ್ಧವನ್ನು ಕೊನೆಗೊಳಿಸುವುದು ಪ್ರತಿಯೊಬ್ಬರ ಹಿತಾಸಕ್ತಿಯಲ್ಲಿದೆ. ವಿಶ್ವಸಂಸ್ಥೆಯ ತತ್ವಗಳನ್ನು ಗೌರವಿಸಿದಾಗ ಮಾತ್ರ ಶಾಶ್ವತ ಶಾಂತಿ ಸಾಧ್ಯ ಎಂದು ಉಭಯ ನಾಯಕರು ಒಮ್ಮತದ ನಿರ್ಧಾರಕ್ಕೆ ಬಂದರು.
ಲಿಟಲ್ ಮೋರ್ ಇಂಡಿಯನ್ - ಏನಿದರ ಅರ್ಥ..?
ಅಲೆಕ್ಸಾಂಡರ್ ಸ್ಟಬ್ ಅವರ ವಿಶ್ವವು ಸ್ವಲ್ಪ ಹೆಚ್ಚು ಭಾರತೀಯವಾಗಬೇಕು ಎಂಬ ಹೇಳಿಕೆಯು ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಭಾರತವು ಹೇಗೆ ವಿವಿಧ ಸವಾಲುಗಳ ನಡುವೆಯೂ ತನ್ನ ಸಾರ್ವಭೌಮತೆಯನ್ನು ಕಾಪಾಡಿಕೊಂಡು, ಎಲ್ಲ ದೇಶಗಳೊಂದಿಗೆ ಸ್ನೇಹ ಸಂಬಂಧವನ್ನು ವೃದ್ಧಿಸಿಕೊಳ್ಳುತ್ತಿದೆ ಎಂಬುದು ಜಗತ್ತಿಗೆ ಪಾಠವಾಗಬೇಕು ಎಂಬುದು ಸ್ಟಬ್ ಆಶಯವಾಗಿತ್ತು.
ಭಾರತ-ಯುರೋಪ್ ನಡುವಿನ ಹೊಸ ಸೇತುವೆ
ಫಿನ್ಲೆಂಡ್ ಅಧ್ಯಕ್ಷರ ಈ ಭೇಟಿಯು ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ತಂತ್ರಜ್ಞಾನದಿಂದ ಹಿಡಿದು ರಕ್ಷಣಾ ಕ್ಷೇತ್ರದವರೆಗೆ ಉಭಯ ದೇಶಗಳು ಹೊಸ ಅಧ್ಯಾಯವನ್ನು ಬರೆಯಲು ಸಜ್ಜಾಗಿವೆ,(ಏಜೆನ್ಸೀಸ್).