ನಮ್ಮನ್ನು ತಡೆಯಲು ಟ್ರಂಪ್ ಯಾರು? ಪರಮಾಣು ಸಮರಕ್ಕೆ ಮುನ್ನುಡಿ ಬರೆದರಾ ಇರಾನ್ ಅಧ್ಯಕ್ಷ? ಆ ಒಂದು ಹೇಳಿಕೆಗೆ ಬೆಚ್ಚಿಬಿದ್ದ ಜಗತ್ತು! 
ವಿದೇಶ

ನಮ್ಮನ್ನು ತಡೆಯಲು ಟ್ರಂಪ್ ಯಾರು? ಪರಮಾಣು ಸಮರಕ್ಕೆ ಮುನ್ನುಡಿ ಬರೆದರಾ ಇರಾನ್ ಅಧ್ಯಕ್ಷ? ಆ ಒಂದು ಹೇಳಿಕೆಗೆ ಬೆಚ್ಚಿಬಿದ್ದ ಜಗತ್ತು! Masoud Pezeshkian

ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಮಾತುಕತೆಗಳು ಮುಗ್ಗರಿಸುತ್ತಿರುವ ನಡುವೆಯೇ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್(Masoud Pezeshkian) ಅಮೆರಿಕಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇರಾನ್‌ನ ಪರಮಾಣು ಹಕ್ಕುಗಳನ್ನು ಕಸಿಯುವ ಯಾವುದೇ ಅಧಿಕಾರ ಡೊನಾಲ್ಡ್ ಟ್ರಂಪ್‌ಗೆ ಇಲ್ಲ ಎಂದು ಗುಡುಗಿದ್ದಾರೆ. ಕದನ ವಿರಾಮದ ಅವಧಿ ಬುಧವಾರಕ್ಕೆ ಮುಕ್ತಾಯವಾಗಲಿದ್ದು, ಉಭಯ ದೇಶಗಳ ನಡುವಿನ ಸಂಘರ್ಷ ಈಗ ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿದೆ.

ಯಾವ ಅಪರಾಧಕ್ಕಾಗಿ ನಮಗೆ ನಿರ್ಬಂಧ?: ಪೆಜೆಶ್ಕಿಯಾನ್ ಪ್ರಶ್ನೆ

ಈ ಬಗ್ಗೆ ಇರಾನ್‌ನ ಐಎಸ್‌ಎನ್‌ಎ (ISNA) ಸುದ್ದಿಸಂಸ್ಥೆಯ ವರದಿಯ ಪ್ರಕಾರ, ಪೆಜೆಶ್ಕಿಯಾನ್ ಅವರು ಟ್ರಂಪ್ ಅವರ ಏಕಪಕ್ಷೀಯ ನಿರ್ಧಾರಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಇರಾನ್ ತನ್ನ ಪರಮಾಣು ಹಕ್ಕುಗಳನ್ನು ಬಳಸಬಾರದು ಎಂದು ಟ್ರಂಪ್ ಹೇಳುತ್ತಾರೆ. ಆದರೆ ನಾವು ಮಾಡಿದ ಅಪರಾಧವಾದರೂ ಏನು ಎಂದು ಅವರು ಹೇಳುವುದಿಲ್ಲ. ಒಂದು ರಾಷ್ಟ್ರದ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಅವರು ಯಾರು ಎಂದು ಅಧ್ಯಕ್ಷರು ಪ್ರಶ್ನಿಸಿದ್ದಾರೆ.

ನಾವು ಶಾಂತಿಪ್ರಿಯರು, ಆದರೆ ರಕ್ಷಣೆ ನಮ್ಮ ಹಕ್ಕು

ಇರಾನ್ ಯುದ್ಧವನ್ನು ಬಯಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಪೆಜೆಶ್ಕಿಯಾನ್, ಅಮೆರಿಕ ಮತ್ತು ಇಸ್ರೇಲ್‌ನ ದಾಳಿಗಳ ವಿರುದ್ಧ ನಾವು ಕೇವಲ ಆತ್ಮರಕ್ಷಣೆ ಮಾಡಿಕೊಳ್ಳುತ್ತಿದ್ದೇವೆ ಎಂದರು. ನಾವು ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ. ಪ್ರತಿಯೊಬ್ಬ ಮನುಷ್ಯನು ಆಕ್ರಮಣಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೋ, ಹಾಗೆಯೇ ಒಂದು ರಾಷ್ಟ್ರವೂ ತನ್ನನ್ನು ರಕ್ಷಿಸಿಕೊಳ್ಳುತ್ತಿದೆ. ನಮ್ಮ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವ ಅಮೆರಿಕ ಮತ್ತು ಇಸ್ರೇಲ್‌ನದ್ದು ಮಾನವ ಹಕ್ಕುಗಳ ವಿಷಯದಲ್ಲಿ ಇಬ್ಬಗೆಯ ನೀತಿ ಎಂದು ಪೆಜೆಶ್ಕಿಯಾನ್ ಕಿಡಿಕಾರಿದ್ದಾರೆ.
ಹೊರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಮೇಲೆ ಗುಂಡಿನ ದಾಳಿ!
ಇರಾನ್‌ನ ಬಂದರುಗಳ ಮೇಲೆ ಅಮೆರಿಕ ಹೇರಿರುವ ನೌಕಾ ದಿಗ್ಬಂಧನವನ್ನು ಪ್ರತಿಭಟಿಸಿ, ಇರಾನ್ ತನ್ನ ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದೆ. ಇದೇ ಸಂಘರ್ಷದ ನಡುವೆ, ಶನಿವಾರ ಇರಾನ್‌ನ ಗನ್‌ಬೋಟ್‌ಗಳು ಭಾರತದ ಧ್ವಜ ಹೊಂದಿದ್ದ ಎರಡು ವಾಣಿಜ್ಯ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿವೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ, ಆದರೆ ಹಡಗುಗಳು ಹಿಂತಿರುಗುವಂತೆ ಇರಾನ್ ಪಡೆಗಳು ಬಲವಂತಪಡಿಸಿವೆ. ಇದು ಅಂತಾರಾಷ್ಟ್ರೀಯ ಸಮುದ್ರಯಾನದ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.

ಕದನ ವಿರಾಮ ಮುಕ್ತಾಯಕ್ಕೆ ಇನ್ನು 3 ದಿನ ಬಾಕಿ

ಬುಧವಾರ ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮದ ಅವಧಿ ಮುಗಿಯಲಿದೆ. ಈ ಬಗ್ಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಮಾತುಕತೆಗಳು ಚೆನ್ನಾಗಿ ನಡೆಯುತ್ತಿವೆ, ಆದರೆ ಬ್ಲ್ಯಾಕ್‌ಮೇಲ್‌ಗೆ ನಾವು ಬಗ್ಗುವುದಿಲ್ಲ ಎಂದಿದ್ದಾರೆ. ಅಲ್ಲದೆ, ಕದನ ವಿರಾಮವನ್ನು ವಿಸ್ತರಿಸಲಾಗುತ್ತದೆಯೇ ಎಂಬ ಬಗ್ಗೆ ತಮಗೆ ಖಚಿತತೆ ಇಲ್ಲ ಎಂದು ಅವರು ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ.

ಯುದ್ಧದ ಮುಂದಿನ ಹಂತವೇನು..?

ಇರಾನ್‌ನ ಅತಿ ಹೆಚ್ಚು ಪುಷ್ಟೀಕರಿಸಿದ ಯುರೇನಿಯಂ ಮತ್ತು ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸಬೇಕೆಂದು ಅಮೆರಿಕ ಪಟ್ಟು ಹಿಡಿದಿದೆ. ಆದರೆ ಇರಾನ್ ಇದನ್ನು ತನ್ನ ಸಾರ್ವಭೌಮತ್ವದ ಪ್ರಶ್ನೆಯನ್ನಾಗಿ ನೋಡುತ್ತಿದೆ. ಒಂದು ವೇಳೆ ಬುಧವಾರದೊಳಗೆ ಎರಡೂ ದೇಶಗಳು ಒಮ್ಮತಕ್ಕೆ ಬರದಿದ್ದರೆ, ಪಶ್ಚಿಮ ಏಷ್ಯಾದಲ್ಲಿ ಭೀಕರ ಯುದ್ಧ ಸ್ಫೋಟಗೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ,(ಏಜೆನ್ಸೀಸ್).