ರಿನಿ ಸಂಪತ್​  
ವಿದೇಶ

ಯಾರೀ ರಿನಿ ಸಂಪತ್? ಅಮೆರಿಕದ ಮಣ್ಣಿನಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾದ ತಮಿಳುನಾಡಿನ ಕುವರಿ

ಪ್ರಮುಖ ಮುಖ್ಯಾಂಶಗಳು

  • ಟ್ರಂಪ್​ ರಾಷ್ಟ್ರದ ಮಣ್ಣಿನಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜು
  • ತಮಿಳುನಾಡಿನ ಕುವರಿ ಮೇಲೆ ಹಲವರ ಕಣ್ಣು
  • ಪ್ರಾಥಮಿಕ ಚುನಾವಣಾ ಮತಪತ್ರದಲ್ಲಿ ಕಾಣಿಸಿಕೊಂಡ ಮೊದಲ ದಕ್ಷಿಣ ಏಷ್ಯಾದ ಅಭ್ಯರ್ಥಿ
Rini Sampath: ಭಾರತೀಯ ಮೂಲದ ಮಹಿಳೆಯೊಬ್ಬರು ಟ್ರಂಪ್​ ರಾಷ್ಟ್ರದ ಮಣ್ಣಿನಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ ಎಂಬ ಸುದ್ದಿ ಸದ್ಯ ಹಲವರ ಕುತೂಹಲವನ್ನು ಕೆರಳಿಸಿದೆ.
ಪ್ರಸ್ತುತ, ವಾಷಿಂಗ್ಟನ್ ಡಿಸಿಯಲ್ಲಿ ಮೇಯರ್ ಚುನಾವಣೆ ನಡೆಯುತ್ತಿದ್ದು, ಭಾರತೀಯ ಮೂಲದ ಮಹಿಳೆ ರಿನಿ ಸಂಪತ್ ಈ ಚುನಾವಣೆಯಲ್ಲಿ ಅಖಾಡಕ್ಕಿಳಿದಿರುವುದೇ ವಿಶೇಷ. ತಮಿಳುನಾಡಿನ ಕುವರಿ ರಿನಿ, ಪ್ರಾಥಮಿಕ ಚುನಾವಣಾ ಮತಪತ್ರದಲ್ಲಿ ಕಾಣಿಸಿಕೊಂಡ ಮೊದಲ ದಕ್ಷಿಣ ಏಷ್ಯಾದ ಅಭ್ಯರ್ಥಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಭಾರತೀಯ ಮಹಿಳೆಯೊಬ್ಬರು ಇಲ್ಲಿನ ಎಲೆಕ್ಷನ್​ನಲ್ಲಿ ಡೆಮಾಕ್ರಟಿಕ್ ಪಕ್ಷದ ಪರವಾಗಿ ಸ್ಪರ್ಧಿಸುತ್ತಿದ್ದಾರೆ.
31 ವರ್ಷದ ರಿನಿ ಸರ್ಕಾರಿ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಪ್ರಚಾರವನ್ನು ಮೂಲಭೂತ ವಿಷಯಗಳ ಮೇಲೆ ಕೇಂದ್ರೀಕರಿಸಿದ್ದಾರೆ. ಈ ಸಂದರ್ಭದಲ್ಲಿ, ಮಾತನಾಡಿದ ಅವರು, "ಮೊದಲಿಗೆ ನಾನು ರಾಜಕಾರಣಿಯಲ್ಲ. ಯಾವುದೇ ಒಂದು ಪಕ್ಷದೊಂದಿಗೆ ನನಗೆ ಸಂಬಂಧವಿಲ್ಲ. ನಮ್ಮ ನಗರದ ಮೂಲಭೂತ ಸೇವೆಗಳನ್ನು ಸುಧಾರಿಸುವತ್ತ ಮಾತ್ರ ಗಮನಹರಿಸುವ ಸಮಯ ನನ್ನದು" ಎಂದು ರಿನಿ ಸಂಪತ್ ತಮ್ಮ ಚುನಾವಣಾ ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡಿ ತಿಳಿಸಿದ್ದಾರೆ.
ಏಳನೇ ವಯಸ್ಸಿನಲ್ಲಿ ಅಮೆರಿಕಕ್ಕೆ ಬಂದ ತಮಿಳುನಾಡಿನ ಚೆಲುವೆ, ಒಂದು ದಶಕಕ್ಕೂ ಹೆಚ್ಚು ಕಾಲ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನೆಲೆಸಿದ್ದಾರೆ. ಡಿಸಿಯ ಮೇಯರ್ ಆಗಿ, ಇಲ್ಲಿನ ಜನರಿಗೆ ನಾವು ನೀಡಿದ ಭರವಸೆಗಳನ್ನು ಈಡೇರಿಸುವುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಮೊದಲ ಆದ್ಯತೆ. ನಮ್ಮ ರಸ್ತೆಗಳಲ್ಲಿನ ಗುಂಡಿಗಳನ್ನು ಸರಿಪಡಿಸಬೇಕಾಗಿದೆ. ಪೊಟೊಮ್ಯಾಕ್ ನದಿಗೆ ಕೊಳಚೆನೀರಿನ ವಿನಾಶಕಾರಿ ವಿಸರ್ಜನೆಯನ್ನು ಇಲ್ಲಿಗೆ ಕೊನೆಗೊಳಿಸಬೇಕಿದೆ. ನಾವು ಬೆಲೆಗಳನ್ನು ಕಡಿತಗೊಳಿಸಬೇಕು ಎಂದಿದ್ದಾರೆ,(ಏಜೆನ್ಸೀಸ್).