ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ  
ವಿದೇಶ

ಬಸ್​ ಡ್ರೈವರ್​ ಆಗಿದ್ದ ನಿಕೋಲಸ್​ ಮಡುರೊ ಅಧ್ಯಕ್ಷನಾಗಿದ್ಹೇಗೆ? ಆತನ ಬಳಿ ಇಷ್ಟೊಂದು ಸಂಪತ್ತು ಇದೆಯಾ? Nicolas Maduro

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದಿಂದ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಬಂಧನ
  • ನಿಕೋಲಸ್ ಮಡುರೊ ಅವರ ಪೂರ್ಣ ಹೆಸರು ನಿಕೋಲಸ್ ಮಡುರೊ ಮೊರೊಸ್
  • ಮಡುರೊ ಅವರ ಹಿನ್ನೆಲೆ ತಿಳಿದುಕೊಳ್ಳಲು ಅಂತರ್ಜಾಲ ಜಾಲಾಡುತ್ತಿರುವ ನೆಟ್ಟಿಗರು
ಕ್ಯಾರಕಸ್​​: ಶನಿವಾರ (ಜ.03) ಮುಂಜಾನೆ ವೆನೆಜುವೆಲಾದ ಮೇಲೆ ಅಮೆರಿಕ ಮಿಂಚಿನ ದಾಳಿ ನಡೆಸಿದೆ. ಸದ್ಯದ ಬೆಳವಣಿಗೆ ಜಾಗತಿಕವಾಗಿ ಭಾರಿ ಚರ್ಚೆಯಾಗುತ್ತಿದೆ. ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಗುರಿಯಾಗಿಸಿಕೊಂಡು ಅಮೆರಿಕದ ಯುದ್ಧವಿಮಾನಗಳು ಕ್ಷಿಪಣಿಗಳು ಮತ್ತು ಬಾಂಬ್‌ಗಳ ಮಳೆ ಸುರಿಸಿದವು. ಸುಮಾರು ಅರ್ಧ ಗಂಟೆ ನಡೆದ ದಾಳಿಯ ಬಳಿಕ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ( Nicolas Maduro ) ಮತ್ತು ಅವರ ಪತ್ನಿ ಹಾಗೂ ಪ್ರಥಮ ಪ್ರಜೆ ಸಿಲಿಯಾ ಫ್ಲೋರ್ಸ್​ರನ್ನು ಅಮೆರಿಕ ಪಡೆಗಳು ಬಂಧಿಸಿ, ಅಮೆರಿಕಕ್ಕೆ ಕರೆದೊಯ್ದಿವೆ.
ಈ ಘಟನೆಯ ಬಳಿಕ, ಎಲ್ಲರ ಗಮನ ಈಗ ನಿಕೋಲಸ್ ಮಡುರೊ ಮೇಲೆ ಬಿದ್ದಿದೆ. ಮಡುರೊ ಯಾರು ಎಂದು ತಿಳಿದುಕೊಳ್ಳಲು ಇಡೀ ಜಗತ್ತು ಆಸಕ್ತಿ ತೋರುತ್ತಿದೆ. ಮಡುರೊ ಅವರು ಈ ಹಿಂದೆ ಹೇಗಿದ್ದರು? ಏನು ಮಾಡುತ್ತಿದ್ದರು? ಅವರು ಹೇಗೆ ಅಧ್ಯಕ್ಷರಾದರು? ಅವರ ಬಳಿ ಎಷ್ಟು ಸಂಪತ್ತು ಇದೆ? ಒಟ್ಟಾರೆ ಮಡುರೊ ಅವರ ಹಿನ್ನೆಲೆ ಏನು ಅನ್ನೋದನ್ನು ಅನೇಕರು ಅಂತರ್ಜಾಲದಲ್ಲಿ ಜಾಲಾಡುತ್ತಿದ್ದಾರೆ. 

ಬಸ್​ ಚಾಲಕನಿಂದ ಅಧ್ಯಕ್ಷಗಿರಿಗೆ ಏರಿದ್ದು ಹೇಗೆ?

ನಿಕೋಲಸ್ ಮಡುರೊ ಅವರ ಪೂರ್ಣ ಹೆಸರು ನಿಕೋಲಸ್ ಮಡುರೊ ಮೊರೊಸ್. ಇವರು 1962 ರಲ್ಲಿ ವೆನೆಜುವೆಲಾ ರಾಜಧಾನಿ ಕ್ಯಾರಕಾಸ್‌ನಲ್ಲಿ ಜನಿಸಿದರು. ಕ್ಯಾರಕಾಸ್ ಮೆಟ್ರೋ ವ್ಯವಸ್ಥೆಯಲ್ಲಿ ಬಸ್ ಚಾಲಕರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಇದರ ನಡುವೆ ಕಾರ್ಮಿಕ ಸಂಘಗಳಲ್ಲಿ ತೊಡಗಿಸಿಕೊಂಡಿದ್ದು, ಅವರನ್ನು ರಾಜಕೀಯಕ್ಕೆ ಕರೆದೊಯ್ದಿತು. ಸಂಘಗಳಲ್ಲಿನ ಅವರ ಚಟುವಟಿಕೆಯಿಂದಾಗಿ ಮಾಜಿ ಅಧ್ಯಕ್ಷ ಹ್ಯೂಗೋ ಚಾವೆಜ್ ಅವರ ಆಪ್ತ ಮಿತ್ರರಾದರು.
ಮಡುರೊ 2006 ರಿಂದ 2013 ರವರೆಗೆ ವೆನೆಜುವೆಲಾದ ವಿದೇಶಾಂಗ ಸಚಿವರಾಗಿ, ನಂತರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2013 ರಲ್ಲಿ ಚಾವೆಜ್ ಅವರ ಮರಣದ ನಂತರ, ವಿವಾದಿತ ಚುನಾವಣೆಯ ಬಳಿಕ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು. ನಂತರ 2018 ಮತ್ತು 2024 ರಲ್ಲಿ ತೀವ್ರ ಸ್ಪರ್ಧೆಯ ಚುನಾವಣೆಗಳಲ್ಲಿ ಗೆದ್ದು ಅಧಿಕಾರ ಉಳಿಸಿಕೊಂಡರು.
ಮಡುರೊ ಅವರ ನೇತೃತ್ವದಲ್ಲಿ, ವೆನೆಜುವೆಲಾ ಅತಿ ಹಣದುಬ್ಬರ ಮತ್ತು ಆಹಾರ ಮತ್ತು ಔಷಧದ ದೀರ್ಘಕಾಲದ ಕೊರತೆಯಿಂದ ಬಳಲುತ್ತಿದೆ. ದೇಶವು ಬಿಕ್ಕಟ್ಟಿನಲ್ಲಿ ಸಿಲುಕಿದ್ದು, ಲಕ್ಷಾಂತರ ಜನರು ದೇಶವನ್ನು ತೊರೆದಿದ್ದಾರೆ. ಮಡುರೊ ಅವರ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಲಾಗಿದೆ. ಹಿರಿಯ ಅಧಿಕಾರಿಗಳು ಕ್ರಿಮಿನಲ್ ಜಾಲಗಳ ಮೂಲಕ ಶತಕೋಟಿ ತೈಲ ಆದಾಯವನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಆದಾಗ್ಯೂ, ಮಡುರೊ ತನ್ನನ್ನು ಕಾರ್ಮಿಕ ವರ್ಗದ ರಕ್ಷಕ ಎಂದು ಬಿಂಬಿಸಿಕೊಂಡಿದ್ದಾರೆ ಮತ್ತು ಆಗಾಗ್ಗೆ ತಮ್ಮ ವಿನಮ್ರ ಹಿನ್ನೆಲೆಯನ್ನು ಉಲ್ಲೇಖಿಸುತ್ತಾರೆ.

ಎಷ್ಟು ಆಸ್ತಿ ಇದೆ?

ನಿಕೋಲಸ್ ಮಡುರೊ ಅವರ ನಿವ್ವಳ ಮೌಲ್ಯವನ್ನು ಹಲವು ಮೂಲಗಳು (ಉದಾಹರಣೆಗೆ Celebrity Net Worth) ಸುಮಾರು 2 ಮಿಲಿಯನ್ ಡಾಲರ್ ಎಂದು ಅಂದಾಜು ಮಾಡಿವೆ. ಯಾಹೂ ಫೈನಾನ್ಸ್ ಪ್ರಕಾರವೂ 2 ಮಿಲಿಯನ್ ಡಾಲರ್​ ಇದೆ. ರಿಯಾಲಿಟಿ ಟೀ ಪ್ರಕಾರ, 1 ಮಿಲಿಯನ್ ಡಾಲರ್​ ಇದ್ದರೆ, ಬಿಬಿಎನ್ ಟೈಮ್ಸ್ ಪ್ರಕಾರ, ಅಂದಾಜು ನಿವ್ವಳ ಮೌಲ್ಯ 2 ಮಿಲಿಯನ್ ಡಾಲರ್​ ಇದೆ. ಆದರೆ, ಭ್ರಷ್ಟಾಚಾರ ಮತ್ತು ಡ್ರಗ್ ಟ್ರಾಫಿಕಿಂಗ್ ಆರೋಪಗಳ ಆಧಾರದ ಮೇಲೆ ಅಂದಾಜು ಮಾಡಿದರೆ, ಮಡುರೊ ಅವರ ಗುಪ್ತ ಸಂಪತ್ತು ಬಿಲಿಯನ್ ಡಾಲರ್‌ಗಳಷ್ಟು ಇರಬಹುದೆಂಬ ಲೆಕ್ಕಾಚಾರಗಳಿವೆ. 

ವೇತನ ಎಷ್ಟು?

ಮಡುರೊ ಅವರ ಅಧಿಕೃತ ಅಧ್ಯಕ್ಷೀಯ ವೇತನವು ತಿಂಗಳಿಗೆ ಸುಮಾರು 4,000 ಡಾಲರ್​ ಎಂದು ಅಂದಾಜಿಸಲಾಗಿದೆ. ಜಾಗತಿಕ ಮಾನದಂಡಗಳ ಪ್ರಕಾರ ಇದು ಕಡಿಮೆಯಿದ್ದರೂ ವಸತಿ, ಸಾರಿಗೆ ಮತ್ತು ಭದ್ರತೆ ಸೇರಿದಂತೆ ವ್ಯಾಪಕ ಶ್ರೇಣಿಯ ಸರ್ಕಾರಿ ಪ್ರಯೋಜನಗಳಿವೆ. ಮಡುರೊ ಅವರ ನಿಜವಾದ ಸಂಪತ್ತು ಅಧಿಕೃತ ಅಂಕಿಅಂಶಗಳಿಗಿಂತ ಹೆಚ್ಚಿನದಾಗಿದೆ ಎಂಬ ಚರ್ಚೆ ಇದೆ. ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ತನಿಖೆಗಳ ಭಾಗವಾಗಿ, ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಜೆಟ್‌ಗಳು, ಐಷಾರಾಮಿ ವಾಹನಗಳು ಮತ್ತು ಆಸ್ತಿಗಳು ಸೇರಿದಂತೆ ಅವರಿಗೆ ಸಂಬಂಧಿಸಿದ 700 ಮಿಲಿಯನ್‌ ಡಾಲರ್​ಗಿಂತಲೂ ಹೆಚ್ಚು ಆಸ್ತಿಗಳನ್ನು US ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
2020 ರಲ್ಲಿ, ಅಮೆರಿಕ ಔಪಚಾರಿಕವಾಗಿ ಮಡುರೊ ವಿರುದ್ಧ ಮಾದಕವಸ್ತು ಕಳ್ಳಸಾಗಾಣೆ ಮತ್ತು ಭಯೋತ್ಪಾದನೆಯ ಆರೋಪ ಹೊರಿಸಿತು. ಮಡುರೊ ಬಗ್ಗೆ ಸುಳಿವು ನೀಡಿದರೆ, 50 ಮಿಲಿಯನ್ ಡಾಲರ್​ ಬಹುಮಾನ ನೀಡುವುದಾಗಿ ಘೋಷಣೆ ಮಾಡಿತು. ಮಡುರೊ ವಿರುದ್ಧ ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಮಡುರೊ ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಮತ್ತು ಅವರ ಸಂಬಂಧಿಕರು ಲಂಚದ ಆರೋಪಗಳನ್ನು ಎದುರಿಸುತ್ತಿದ್ದಾರೆ. 2015ರಲ್ಲಿ, ಮಡುರೊ ಅವರ ಮಲಮಕ್ಕಳು ಅಮೆರಿಕಕ್ಕೆ ನೂರಾರು ಕಿಲೋಗ್ರಾಂಗಳಷ್ಟು ಕೊಕೇನ್ ಅನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದಾರೆ ಎಂದು US ಅಧಿಕಾರಿಗಳು ಆರೋಪಿಸಿದ್ದಾರೆ.
ಸದ್ಯ ಅಮೆರಿಕ ಸೇನೆಯಿಂದ ಬಂಧನಕ್ಕೆ ಒಳಗಾಗಿರುವ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್​ ಮಡುರೊನನ್ನು ನ್ಯೂಯಾರ್ಕ್​ ಜೈಲಿನಲ್ಲಿ ಇಡಲಾಗಿದೆ. ಮಡುರೋ ಬಂಧನ ಹಿನ್ನೆಲೆಯಲ್ಲಿ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್, ವೆನೆಜುವೆಲಾದ​ ಹಂಗಾಮಿ ಅಧ್ಯಕ್ಷೆಯಾಗಿ ನೇಮಕವಾಗಿದ್ದಾರೆ. ಆದರೆ, ಅಮೆರಿಕ ತಾತ್ಕಾಲಿಕವಾಗಿ ತಾನೇ ವೆನೆಜುವೆಲಾ ಆಡಳಿತ ವಹಿಸಿಕೊಳ್ಳುತ್ತೇನೆಂದು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸೋಮವಾರ ಮ್ಯಾನ್‌ಹ್ಯಾಟನ್ ಫೆಡರಲ್ ನ್ಯಾಯಾಲಯದ ಮುಂದೆ ಮಡುರೊ ಅವರನ್ನು ಹಾಜರುಪಡಿಸುವ ಸಾಧ್ಯತೆ ಇದೆ, (ಏಜೆನ್ಸೀಸ್​).