ರಾಜಕುಮಾರಿ ಲೀಲಾ ಪಹ್ಲವಿ 
ವಿದೇಶ

9ನೇ ವಯಸ್ಸಿಗೆ ಇರಾನ್​ಗೆ ಗುಡ್​ಬೈ, 31ಕ್ಕೆ ಇಹಲೋಕ! ಯಾರೀ ಲೀಲಾ ಪಹ್ಲವಿ? ರಾಜಕುಮಾರಿಯ ದುರಂತ ಕಥೆಯಿದು

ಪ್ರಮುಖ ಮುಖ್ಯಾಂಶಗಳು

  • ಖಮೇನಿ ರಾಷ್ಟ್ರದಲ್ಲಿ ನಿಲ್ಲದ ಪ್ರತಿಭಟನೆಯ ಕೂಗು
  • ಇದೇ ವೇಳೆ ಇರಾನ್​ ಕೊನೆಯ ಷಾ ಅವರ ಪುತ್ರಿ ದುರಂತ ಕಥೆ ವೈರಲ್​
  • ಲಂಡನ್​ನ ಹೋಟೆಲ್​ ರೂಮ್​ನಲ್ಲಿ ರಾಜಕುಮಾರಿ ದುರಂತ ಅಂತ್ಯ
ಟೆಹ್ರಾನ್​: ಪ್ರಸಕ್ತ, ಇರಾನ್​ನಲ್ಲಿ ದೊಡ್ಡ ಪ್ರತಿಭಟನೆಗಳು ನಡೆಯುತ್ತಿದ್ದು, ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸರ್ಕಾರದ ವಿರುದ್ಧದ ಆಕ್ರೋಶಗಳು ತೀವ್ರಗೊಂಡಿವೆ. ಇಲ್ಲಿಯವರೆಗೆ 3,400ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, 18,400ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ಇದೆಲ್ಲದರ ಮಧ್ಯೆ, ಇರಾನ್​ ರಾಜಕುಮಾರಿಯ ದುರಂತ ಕಥೆಯೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
20ನೇ ಶತಮಾನದ ಅತ್ಯಂತ ಬಲಿಷ್ಠ ರಾಜಮನೆತನದ ಕುಟುಂಬದಲ್ಲಿ ಜನಿಸಿದ ರಾಜಕುಮಾರಿ ಲೀಲಾ ಪಹ್ಲವಿ, ತಮ್ಮ ಜೀವನದ ಬಹುಪಾಲು ಸಮಯವನ್ನು ತಾವು ಹುಟ್ಟಿದ ಮಣ್ಣನ್ನು ಬಿಟ್ಟು ಬೇರೆ ದೇಶಗಳಲ್ಲಿಯೇ ಕಳೆದದ್ದು ಮತ್ತೊಂದು ದುರಂತ. ಇರಾನ್‌ನ ಕೊನೆಯ ಷಾ ಮೊಹಮ್ಮದ್ ರೆಜಾ ಪಹ್ಲವಿ ಮತ್ತು ಸಾಮ್ರಾಜ್ಞಿ ಫರಾಹ್ ಪಹ್ಲವಿ ಅವರ ಕಿರಿಯ ಪುತ್ರಿ ಈ ರಾಜಕುಮಾರಿ.

ಕೇವಲ 9 ವರ್ಷ ವಯಸ್ಸು

ರಾಜವಂಶದ ಪತನ ಮಾತ್ರವಲ್ಲದೆ, ಹಠಾತ್ ಇರಾನ್​ ತೊರೆಯುವಂತೆ ಮಾಡಿತು. ಇರಾನಿನ ಕ್ರಾಂತಿಯ ಆರ್ಥಿಕ ನಷ್ಟ, ತುಂಬಲಾರದ ದುಃಖವನ್ನು ಪಹ್ಲವಿ ಕುಟುಂಬಕ್ಕೆ ತಂದೊಡ್ಡಿತು. ರಾಜಕೀಯ ಅತಂತ್ರ, ಗಡಿಪಾರು ಆದೇಶದಿಂದ ಹೊರಬಿದ್ದ ಪಹ್ಲವಿ ರಾಜಮನೆತನ, 1979ರಲ್ಲಿ ಇರಾನ್​ ತೊರೆಯಿತು. ಈ ವೇಳೆ ರಾಜಕುಮಾರಿಗೆ ಕೇವಲ 9 ವರ್ಷ ವಯಸ್ಸು.
ಇರಾನ್​ನಲ್ಲಿ ರಾಜಕೀಯ ಅಶಾಂತಿ ಸ್ಫೋಟಗೊಂಡ ಹಿನ್ನೆಲೆ ರಾಜಕುಮಾರಿಯ ಕುಟುಂಬದ ವಿರುದ್ಧ ಬೆದರಿಕೆಗಳು ಹೆಚ್ಚಾಯಿತು. ಯಾವಾಗ ಸರಣಿ ತೊಂದರೆಗಳು ಉಲ್ಬಣಿಸಿತೋ, ಆಗ ಕುಟುಂಬ ಸಮೇತ ಈಜಿಪ್ಟ್‌ಗೆ ತೆರಳಿದರು. ಅಲ್ಲಿಯೂ ತಪ್ಪದ ಸಂಕಷ್ಟದಿಂದ ತತ್ತರಿಸಿದ ಪಹ್ಲವಿ ರಾಜಮನೆತನ, ಮೊರಾಕೊ, ಬಹಾಮಾಸ್, ಮೆಕ್ಸಿಕೊ, ಅಮೆರಿಕ ಮತ್ತು ಪನಾಮಕ್ಕೆ ಸ್ಥಳಾಂತರಗೊಂಡರು. ಹೋದಲೆಲ್ಲ ರಾಜಕೀಯ ಒತ್ತಡವನ್ನು ಎದುರಿಸಿದ ಕುಟುಂಬಕ್ಕೆ ಒಂದೇ ಜಾಗದಲ್ಲಿ ನೆಲೆಯೂರುವುದು ಕಷ್ಟಸಾಧ್ಯವಾಯಿತು.

ಅಷ್ಟಕ್ಕೂ ಯಾರೀ ಲೀಲಾ ಪಹ್ಲವಿ?

ಲೀಲಾ ಪಹ್ಲವಿ ಮಾರ್ಚ್ 27, 1970ರಂದು ಇರಾನ್​ನ ಟೆಹ್ರಾನ್‌ನಲ್ಲಿ ಜನಿಸಿದರು. ಷಾ ಮತ್ತು ಸಾಮ್ರಾಜ್ಞಿ ಫರಾಹ್ ಅವರ ನಾಲ್ಕನೇ ಮತ್ತು ಕಿರಿಯ ಮಗಳಾದ ಈಕೆ, ತಮ್ಮ ಬಾಲ್ಯವನ್ನು ಪಹ್ಲವಿ ಸಾಮ್ರಾಜ್ಯದ ಸಂಕೀರ್ಣದಲ್ಲೇ ಕಳೆದರು. ಪರ್ಷಿಯನ್ ಸಂಸ್ಕೃತಿ, ಇತಿಹಾಸದ ಬಗ್ಗೆ ಅವರಿಗೆ ಖಾಸಗಿ ಬೋಧಕರಿಂದ ಶಿಕ್ಷಣ ಕೊಡಿಸಲಾಯಿತು. ಆದರೆ, ಇದು ಹೆಚ್ಚು ಕಾಲ ಮುಂದುವರಿಯಲಿಲ್ಲ ಎಂಬುದೇ ದುರಂತ. ಕಾರಣ, ರಾಜಕೀಯ ಅತಂತ್ರದಿಂದ ದೇಶ ತೊರೆಯಬೇಕಾಯಿತು.

ಎಲ್ಲವನ್ನೂ ಬದಲಾಯಿಸಿದ ಅದೊಂದು ಕ್ರಾಂತಿ

1979ರ ಜನವರಿಯಲ್ಲಿ, ಷಾ ವಿರುದ್ಧದ ಪ್ರತಿಭಟನೆಗಳು ತೀವ್ರಗೊಂಡ ಬೆನ್ನಲ್ಲೇ ಪಹ್ಲವಿ ಕುಟುಂಬ ಇರಾನ್‌ನಿಂದ ಪಲಾಯನ ಮಾಡಿತು. ಆಗ ಲೀಲಾ ಅವರಿಗೆ ಕೇವಲ 9 ವರ್ಷ ವಯಸ್ಸಾಗಿತ್ತು. ಇರಾನಿನ ಕ್ರಾಂತಿಯು ಆಕೆಯ ತಂದೆಯ ಆಳ್ವಿಕೆಯನ್ನು ಅಂತ್ಯಗೊಳಿಸಿದ್ದಲ್ಲದೇ, ಕುಟುಂಬದ ಪೌರತ್ವ, ಭದ್ರತೆ, ಮನೆ, ಆಸ್ತಿ-ಪಾಸ್ತಿಯನ್ನು ಕಸಿದುಕೊಂಡಿತು.
ರಾಜಕೀಯ ಒತ್ತಡ, ಬೆದರಿಕೆಗಳಿಂದ ಕಂಗಾಲಾಗಿದ್ದ ಮೊಹಮ್ಮದ್ ರೆಜಾ ಷಾ, ಲಿಂಫೋಮಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ದೀರ್ಘ ಹೋರಾಟದ ಬಳಿಕ ಷಾ ಮೃತಪಟ್ಟರು. ತಂದೆಯನ್ನು ಕಳೆದುಕೊಂಡ ಲೀಲಾ ಅವರು ಕಡೆಗೆ ಲಂಡನ್​ನಲ್ಲಿ ವಾಸವಿದ್ದರು. ಆದರೆ, ಆ ಒಂದು ದಿನ ಲಂಡನ್​ನ ಹೋಟೆಲ್​ ರೂಮ್​ನಲ್ಲಿ ರಾಜಕುಮಾರಿ ಕೊನೆಯುಸಿರೆಳೆದರು ಎಂದು ವರದಿಗಳು ಉಲ್ಲೇಖಿಸಿವೆ.

ವಿಪರೀತ ಆರೋಗ್ಯ ಸಮಸ್ಯೆಗಳು

31ನೇ ವಯಸ್ಸಿನಲ್ಲಿ ಲೀಲಾ ಲಂಡನ್​ನ ಹೋಟೆಲ್​ ರೂಮ್​ನಲ್ಲಿ ಸಾವಿಗೀಡಾದರು. ಗಂಭೀರ ಆರೋಗ್ಯ ಸವಾಲುಗಳನ್ನು ಎದುರಿಸುತ್ತಿದ್ದ ರಾಜಕುಮಾರಿ, ದೀರ್ಘಕಾಲದ ಆಯಾಸ ಸಿಂಡ್ರೋಮ್, ಖಿನ್ನತೆ ಮತ್ತು ಅನೋರೆಕ್ಸಿಯಾದಿಂದ ಬಳಲುತ್ತಿದ್ದರು. ಹೊರಗಡೆ ಎಲ್ಲಿಯೂ ಕಾಣಿಸಿಕೊಳ್ಳದ ಅವರು, ಜನರಿಂದ ದೂರ ಉಳಿಯುತ್ತಿದ್ದರು ಎನ್ನಲಾಗಿದೆ.
ಜೂನ್ 10, 2001ರಂದು, ಲೀಲಾ ತಾವು ತಂಗಿದ್ದ ಲಂಡನ್​ನ ಹೋಟೆಲ್ ರೂಮ್​ನಲ್ಲಿ ಶವವಾಗಿ ಪತ್ತೆಯಾದರು. ಕೊಕೇನ್ ಜತೆಗೆ ಪ್ರಿಸ್ಕ್ರಿಪ್ಷನ್ ಬಾರ್ಬಿಟ್ಯುರೇಟ್‌ಗಳ ಮಿತಿಮೀರಿದ ಸೇವನೆಯಿಂದ ಆಕೆ ಸಾವನ್ನಪ್ಪಿದ್ದಾರೆ ಎಂದು ತನಿಖೆಯಲ್ಲಿ ನಿರ್ಧರಿಸಲಾಯಿತು. ಮತ್ತು ಇದು ಆತ್ಮಹತ್ಯೆಯ ನಿರ್ಧಾರ ಎಂದು ಹೇಳಲಾಯಿತು. ತನ್ನ ತಾಯ್ನಾಡಿನಿಂದ ದೂರದಲ್ಲಿರುವ ಪ್ಯಾರಿಸ್‌ನಲ್ಲಿ ಅವರನ್ನು ಸಮಾಧಿ ಮಾಡಲಾಗಿದೆ ಎಂಬುದು ಗಮನಾರ್ಹ,(ಏಜೆನ್ಸೀಸ್).