ಟಿಮ್ ಕುಕ್ (ಎಡ), ಜಾನ್ ಟರ್ನಸ್ (ಬಲ)
- 15 ವರ್ಷಗಳ ಬಳಿಕ ಸಿಇಒ ಹುದ್ದೆಗೆ ಟಿಮ್ ಕುಕ್ ರಾಜೀನಾಮೆ
- ಆ್ಯಪಲ್ ಸಂಸ್ಥೆಯ ನೂತನ ಸಿಇಒ ಆಗಿ ಜಾನ್ ಟೆರ್ನಸ್ ಅಧಿಕಾರ
ಅಮೆರಿಕ: ಟೆಕ್ ದೈತ್ಯ ಆ್ಯಪಲ್ ಈಗ ತನ್ನ ಹೊಸ ಸಿಇಒ ಸ್ವಾಗತಿಸಲು ಸಜ್ಜಾಗಿದೆ. ತಮ್ಮ 15 ವರ್ಷಗಳ ಸುದೀರ್ಘ ಪಯಣಕ್ಕೆ ರಾಜೀನಾಮೆ ನೀಡುವ ಮೂಲಕ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರ ಪಾತ್ರವನ್ನು ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಈ ವರ್ಷದ ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ಸಿಇಒ ಹುದ್ದೆಗೆ ರಾಜೀನಾಮೆ ಅಧಿಕೃತವಾಗಿರಲಿದೆ. ನಿಗದಿ ಪಡಿಸಿದ ದಿನಾಂಕದ ಬಳಿಕ ಜಾನ್ ಟೆರ್ನಸ್ ಆ್ಯಪಲ್‌ನ ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಯಾರೀ ಜಾನ್ ಟೆರ್ನಸ್?
ಇದೇ ಸೆಪ್ಟೆಂಬರ್ 01ರಂದು ಟಿಮ್ ಕುಕ್ ಆ್ಯಪಲ್ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಅದೇ ದಿನ ಜಾನ್ ಟರ್ನಸ್ ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕುಕ್ ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. 20 ವರ್ಷಗಳಿಗೂ ಹೆಚ್ಚು ಕಾಲ ಆ್ಯಪಲ್ನಲ್ಲಿ ಸೇವೆ ಸಲ್ಲಿಸಿರುವ ಜಾನ್, ಕಂಪನಿಯ ಹಲವು ಪ್ರಮುಖ ಉತ್ಪನ್ನಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದು ಗಮನಾರ್ಹ.
ಸುಮಾರು 50 ವರ್ಷ ವಯಸ್ಸಿನ ಜಾನ್ ಟರ್ನಸ್, 2001ರಲ್ಲಿ ಆ್ಯಪಲ್ ಉದ್ಯೋಗಿಯಾಗಿ ಸೇರಿದರು. ಇಲ್ಲಿ ಸಂಸ್ಥೆಯ ಉತ್ಪನ್ನಗಳನ್ನು ಡಿಸೈನ್ ಮಾಡುವ ತಂಡದಲ್ಲಿ ಸೇರಿ, ತಮ್ಮ ಕರಿಯರ್ ಆರಂಭಿಸಿದ್ದು ವಿಶೇಷ. 2013ರಲ್ಲಿ ಹಾರ್ಡ್‌ವೇರ್ ಇಂಜಿನಿಯರಿಂಗ್‌ನ ಉಪಾಧ್ಯಕ್ಷರಾಗಿ ಮತ್ತು 2021ರಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಬಡ್ತಿ ಪಡೆದರು.
ಪ್ರಸ್ತುತ ಐಫೋನ್, ಮ್ಯಾಕ್, ಐಪ್ಯಾಡ್, ಆ್ಯಪಲ್ ವಾಚ್ ಮತ್ತು ಏರ್‌ಪಾಡ್‌ಗಳು ಸೇರಿದಂತೆ ಎಲ್ಲಾ ಪ್ರಮುಖ ಹಾರ್ಡ್‌ವೇರ್ ಉತ್ಪನ್ನಗಳನ್ನು ನೋಡಿಕೊಳ್ಳುತ್ತಿರುವ ಟರ್ನಸ್, ಸಂಸ್ಥೆಯ ಪ್ರಮುಖ ಉತ್ಪನ್ನಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಐಪ್ಯಾಡ್ ಮತ್ತು ಏರ್ಪಾಡ್ಸ್ಗಳ ಅಭಿವೃದ್ಧಿಯಲ್ಲಿ ಅವರು ಕೊಡುಗೆ ಹೆಚ್ಚಿದೆ ಎಂದು ಕಂಪನಿ ಹೇಳಿಕೊಂಡಿದೆ,(ಏಜೆನ್ಸೀಸ್).