White House Shooting 
ವಿದೇಶ

ವೈಟ್​ಹೌಸ್ ಬಳಿ ಗುಂಡಿನ ದಾಳಿ; 21 ವರ್ಷದ ಶೂಟರ್​​ ಯಾರೀತ, ಹಿನ್ನಲೆ ಏನು?.White House Shooting

ಪ್ರಮುಖ ಮುಖ್ಯಾಂಶಗಳು

  • ಭದ್ರತಾ ತಪಾಸಣಾ ಕೇಂದ್ರದ ಬಳಿ ಗುಂಡು ಹಾರಿಸಿದ ದುಷ್ಕರ್ಮಿ ನಿಧನ
  • ದಾಳಿ ನಡೆಸಿದ 21 ವರ್ಷದ ನಾಸಿರ್ ಬೆಸ್ಟ್, ತಾನೇ ಏಸುಕ್ರಿಸ್ತ ಎಂದು ನಂಬಿದ್ದ
  • ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ನೇತೃತ್ವದಲ್ಲಿ ಭದ್ರತಾ ಲೋಪದ ಬಗ್ಗೆ ತನಿಖೆ
ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಅಧಿಕೃತ ನಿವಾಸ ಶ್ವೇತಭವನದ ಸಮೀಪ ಗುಂಡಿನ ದಾಳಿ ನಡೆದಿದ್ದು, ಬಂಧೂಕುದಾರಿಯನ್ನು ಅಮೆರಿಕದ ಸೀಕ್ರೇಟ್​ ಸರ್ವೀಸ್ ಏಜೆಂಟ್​ಗಳು ಗುಂಡಿಟ್ಟು ಕೊಂದಿದ್ದಾರೆ. ಶೂಟರ್‌ನನ್ನು 21 ವರ್ಷದ ನಾಸಿರ್ ಬೆಸ್ಟ್ ಎಂದು ಗುರುತಿಸಲಾಗಿದೆ.
ಗುಂಡಿನ ದಾಳಿ ನಡೆದಾಗ ಡೊನಾಲ್ಡ್​ ಟ್ರಂಪ್​ ಅವರು ಶ್ವೇತಭವನದ ಒಳಗಡೆಯೇ ಇದ್ದರು. ಆದರೆ, ದಾಳಿಯಿಂದ ಅವರಿಗೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಅವರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ. ಜೊತೆಗೆ ಭೀಕರ ಘಟನೆ ಬೆಳಕಿಗೆ ಬರುತ್ತಲೇ ವೈಟ್ ಹೌಸ್​ ಸುತ್ತಮುತ್ತ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿತ್ತು.

ಏನಿದು ಘಟನೆ ?

ಶನಿವಾರ ಸಂಜೆ 6 ಗಂಟೆಯ ಸುಮಾರಿಗೆ ಶ್ವೇತಭವನದ ಸಂಕೀರ್ಣದ ಹೊರಗಿನ 17ನೇ ಸ್ಟ್ರೀಟ್ ಮತ್ತಿ ಪೆನ್ಸಿಲ್ವೇನಿಯಾ ಅವೆನ್ಯೂ ಬಳಿಯ ಭದ್ರತಾ ಚೆಕ್​ ಪಾಯಿಂಟ್​ನಲ್ಲಿ ಬಂಧೂಕುಧಾರಿಯಿಂದ ಗುಂಡಿನ ದಾಳಿ ನಡೆದಿದೆ. ಶೂಟರ್ ಮೊದಲು ಆ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದನು. ನಂತರ ದಿಢೀರನೆ ತನ್ನ ಬ್ಯಾಗ್‌ನಿಂದ ಹ್ಯಾಂಡ್‌ಗನ್ ತೆಗೆದು ಅಲ್ಲಿದ್ದ ಭದ್ರತಾ ಅಧಿಕಾರಿಗಳತ್ತ ಮೂರು ಬಾರಿ ಗುಂಡು ಹಾರಿಸಿದ್ದಾನೆ.
ಸೀಕ್ರೇಟ್ ಸರ್ವೀಸ್ ಏಜೆಂಟ್​ರು ಕಾರ್ಯಪ್ರವೃತ್ತರಾಗಿ ಪ್ರತಿದಾಳಿ ನಡೆಸಿದರು. 30 ಸುತ್ತು ಗುಂಡಿನ ಚಕಮಕಿ ನಡೆದಿದೆ. ಏಜೆಂಟರ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ದುಷ್ಕರ್ಮಿಯನ್ನು ಜಾರ್ಜ್ ವಾಷಿಂಗ್ಟನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಗುಂಡಿನ ಚಕಮಕಿ ವೇಳೆ ಅಲ್ಲೇ ಇದ್ದ ನಾಗರಿಕನೊಬ್ಬನಿಗೆ ಗಾಯವಾಗಿದ್ದು, ಆತನಿಗೆ ಚಿಕಿತ್ಸೆ ಮುಂದುವರೆದಿದೆ.
ಯಾರು ಈ ಶೂಟರ್?
21 ವರ್ಷದ ನಾಸಿರ್ ಬೆಸ್ಟ್ ಎನ್ನುವವರೇ ಶೂಟರ್​ ಎಂದು ಗುರುತಿಸಲಾಗಿದೆ. ಈತ ಮಾನಸಿಕವಾಗಿ ಅಸ್ವಸ್ಥನಾಗಿದ್ದ. ಈ ಹಿಂದೆಯೂ ಭದ್ರತಾ ಸಂಸ್ಥೆಗಳ ನಿಗಾದಲ್ಲಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ
ನಾಸಿರ್ ಬೆಸ್ಟ್ ತಾನೇ 'ಏಸುಕ್ರಿಸ್ತ' ಎಂದು ನಂಬಿದ್ದ. 2025 ಜೂನ್ 26ರಂದು, ನಾಸಿರ್ ಬೆಸ್ಟ್ 15ನೇ ಸ್ಟ್ರೀಟ್‌ನಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದನೆಂದು ವರದಿಯಾಗಿದೆ. ಈ ಘಟನೆಯ ನಂತರ ಆತನ ಇಚ್ಛೆಗೆ ವಿರುದ್ಧವಾಗಿ ಆತನನ್ನು ಬಲವಂತವಾಗಿ ಮಾನಸಿಕ ಆರೋಗ್ಯ ಚಿಕಿತ್ಸೆಗಾಗಿ ಮನೋವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಇದಾಗಿ ಕೇವಲ ಎರಡು ವಾರಗಳ ಒಳಗಾಗಿ, ಅಂದರೆ 10 ಜುಲೈ 2025 ರಂದು, ವೈಟ್‌ ಹೌಸ್‌ನ ನಿರ್ಬಂಧಿತ ಪಾದಚಾರಿ ನಿಯಂತ್ರಣ ಗೇಟ್‌ನ ಎಕ್ಸಿಟ್ ಟರ್ನ್‌ಸ್ಟೈಲ್ ಲೇನ್ ಮೂಲಕ ಅಕ್ರಮವಾಗಿ ಒಳನುಗ್ಗಿದ್ದಕ್ಕಾಗಿ ಆತನನ್ನು ಬಂಧಿಸಲಾಯಿತು. ಭದ್ರತಾ ಏಜೆಂಟರು ಆತನನ್ನು ವಶಕ್ಕೆ ಪಡೆದಾಗ, ತಾನು ಆಧುನಿಕ ಯುಗದ 'ಏಸುಕ್ರಿಸ್ತನ' ಅವತಾರ ಎಂದು ಬೆಸ್ಟ್ ಹೇಳಿದ್ದನು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಕಾಶ್ ಪಟೇಲ್ ನೇತೃತ್ವದಲ್ಲಿ ತನಿಖೆ

ಘಟನೆ ನಡೆಯುವುದಕ್ಕೂ ಕೇವಲ ಎರಡು ಗಂಟೆಗಳ ಮೊದಲು ಅಧ್ಯಕ್ಷ ಟ್ರಂಪ್ ಅವರು ತಾವು ಓವಲ್ ಆಫೀಸ್‌ನಲ್ಲಿ ಇರಾನ್ ಶಾಂತಿ ಒಪ್ಪಂದದ ಕುರಿತು ಕೆಲಸ ಮಾಡುತ್ತಿರುವುದಾಗಿ ಸಾಮಾಜಿಕ ಜಾಲತಾಣ 'ಟ್ರುತ್ ಸೋಶಿಯಲ್'ನಲ್ಲಿ ಪೋಸ್ಟ್ ಮಾಡಿದ್ದರು. ಸದ್ಯ ವೈಟ್‌ ಹೌಸ್ ಸೀಕ್ರೆಟ್ ಸರ್ವಿಸ್ ಈ ದಾಳಿಯ ಸಂಪೂರ್ಣ ತನಿಖೆ ನಡೆಸುತ್ತಿದ್ದು, ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ಅವರು ಎಫ್‌ಬಿಐ ತಂಡವು ಈ ತನಿಖೆಗೆ ಸಂಪೂರ್ಣ ಸಹಾಯ ಮಾಡುತ್ತಿದೆ ಎಂದು ಖಚಿತಪಡಿಸಿದ್ದಾರೆ, (ಏಜೆನ್ಸೀಸ್).