ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಬಾಬಾ ವಂಗಾ 
ವಿದೇಶ

2027 ಡೇಂಜರಸ್​ ವರ್ಷವಾಗುತ್ತಾ? ಬಾಬಾ ವಂಗಾ ಹೇಳಿದಂತೆ ಇದೇನಾದ್ರೂ ನಡೆದ್ರೆ ಮಾನವನ ಕತೆ ಏನಾಗಲಿದೆ? Baba Vanga predictions 2027

15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಖರ ಎನ್ನಲಾಗುತ್ತಿದೆ.

Baba Vanga predictions 2027 : ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಪ್ರತಿ ವರ್ಷವೂ ಸಾಕಷ್ಟು ಸದ್ದು ಮಾಡುತ್ತಿರುತ್ತವೆ. 2026ನೇ ವರ್ಷದಲ್ಲೂ ಬಾಬಾ ವಂಗಾರ ಕೆಲ ಭವಿಷ್ಯಗಳು ನಿಜವಾದವು. ಇದೀಗ 2027ನೇ ಹೊಸ ವರ್ಷಕ್ಕೆ ಕೇವಲ 2 ತಿಂಗಳು ಬಾಕಿ ಇದ್ದು, ಬಾಬಾ ವಂಗಾರ ಭವಿಷ್ಯವಾಣಿಗಳು ಮತ್ತೆ ಮುನ್ನಲೆಗೆ ಬಂದಿವೆ. ಅವರ ಪ್ರಕಾರ, ಮುಂದಿನ ವರ್ಷದಲ್ಲಿ ಏನೆಲ್ಲ ಆಗಲಿದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಯಾರೀ ಬಾಬಾ ವಂಗಾ?

ವರದಿಗಳ ಪ್ರಕಾರ, ಬಾಬಾ ವಂಗಾ ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

ಅನೇಕ ಭವಿಷ್ಯಗಳು ನಿಜವಾಗಿವೆ

ಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್‌ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್‌ ಸುನಾಮಿ, ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು…ಇಂಥ ನೂರಾರು ಘಟನೆಗಳ ಕುರಿತು ಹಲವು ದಶಕಗಳ ಮುಂಚೆಯೇ ನುಡಿದಿದ್ದರು ಇವರು. ಅಷ್ಟೇ ಏಕೆ ಮಹಾಮಾರಿ ಕರೊನಾ ವೈರಸ್​ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದೆ. 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಖರ ಎನ್ನಲಾಗುತ್ತಿದೆ.

2027ರ ಭವಿಷ್ಯವಾಣಿ ಏನು?

1. ಬಾಬಾ ವಂಗಾ ಅವರ 2027 ರ ಭವಿಷ್ಯವಾಣಿಯಲ್ಲಿ ಮೊದಲನೆಯ ಹಾಗೂ ಅತ್ಯಂತ ವಿಸ್ಮಯಕಾರಿ ಸಂಗತಿಯೆಂದರೆ ಮಾನವ ಶಕ್ತಿಯಲ್ಲಿ ಆಗುವ ಅಭೂತಪೂರ್ವ ಬದಲಾವಣೆ. 2027 ರಲ್ಲಿ ಜಗತ್ತಿನಾದ್ಯಂತ ರಹಸ್ಯಮಯ ರೋಗವೊಂದು ತೀವ್ರವಾಗಿ ಹರಡಲಿದ್ದು, ಈ ಕಾಯಿಲೆಯಿಂದಾಗಿ ಕೆಲವು ನಿರ್ದಿಷ್ಟ ಜನರಿಗೆ ಅಸಾಧಾರಣವಾದ ಸೂಪರ್ ಪವರ್‌ಗಳು ಅಥವಾ ಮಾನವಾತೀತ ಶಕ್ತಿಗಳು ಲಭಿಸಲಿವೆ ಎಂದು ಪ್ರತಿಪಾದಿಸಲಾಗಿದೆ. ಇದು ಮಾನವನ ಸಾಮರ್ಥ್ಯ ಮತ್ತು ಆಲೋಚನಾ ಶೈಲಿಯನ್ನೇ ಸಂಪೂರ್ಣವಾಗಿ ಬದಲಾಯಿಸಬಹುದು ಎನ್ನಲಾಗಿದ್ದರೂ, ಯಾವುದೇ ರೋಗವು ಮಾನವನಿಗೆ ಇಂತಹ ಸೂಪರ್ ಪವರ್ ನೀಡಬಲ್ಲದು ಎಂಬುದಕ್ಕೆ ಪ್ರಸ್ತುತ ವೈಜ್ಞಾನಿಕವಾಗಿ ಯಾವುದೇ ಪುರಾವೆಗಳಿಲ್ಲ. ಆದಾಗ್ಯೂ, ಈ ವಿಚಿತ್ರ ಭವಿಷ್ಯವಾಣಿಯು ಇಂಟರ್ನೆಟ್‌ನಲ್ಲಿ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

2. ಎರಡನೆಯದಾಗಿ, ಬಂಗಾರದ ಪ್ರಿಯರು ಹಾಗೂ ಹೂಡಿಕೆದಾರರನ್ನು ಬೆಚ್ಚಿಬೀಳಿಸುವಂತಹ ಆರ್ಥಿಕ ಮುನ್ಸೂಚನೆಯೊಂದನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. 2027 ರಲ್ಲಿ ಜಾಗತಿಕ ಮಟ್ಟದಲ್ಲಿ ಭಾರಿ ಆರ್ಥಿಕ ಬಿಕ್ಕಟ್ಟು ತಲೆದೋರಲಿದ್ದು, ಇದರ ಪರಿಣಾಮವಾಗಿ ಸುರಕ್ಷಿತ ಹೂಡಿಕೆಯತ್ತ ಗಮನಹರಿಸುವ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಶೇ. 25 ರಿಂದ 40 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ಭವಿಷ್ಯವಾಣಿಯೇನಾದರೂ ನಿಜವಾದರೆ, 2027 ರಲ್ಲಿ ಚಿನ್ನದ ದರವು ಕಲ್ಪನೆಗೂ ಮೀರಿದ ಮಟ್ಟಕ್ಕೆ ತಲುಪಲಿದ್ದು, ಸಾಮಾನ್ಯ ಜನರು ಬಂಗಾರ ಖರೀದಿಸುವ ಯೋಚನೆ ಮಾಡುವುದೂ ಕೂಡ ಅಸಾಧ್ಯವಾಗಲಿದೆ.

3. ಮೂರನೆಯದಾಗಿ, ಜಾಗತಿಕ ಇಂಧನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಉಂಟಾಗಲಿದೆ ಎಂದು ಬಾಬಾ ವಂಗಾ ಭವಿಷ್ಯವಾಣಿ ಹೇಳುತ್ತದೆ. ಭವಿಷ್ಯದಲ್ಲಿ ಪರಮಾಣು ಸಮ್ಮಿಲನ (Nuclear Fusion) ತಂತ್ರಜ್ಞಾನವು ಅಗಾಧ ಪ್ರಮಾಣದ ಸ್ವಚ್ಛ ಹಾಗೂ ಸುರಕ್ಷಿತ ವಿದ್ಯುತ್ ಉತ್ಪಾದನೆಗೆ ದಾರಿ ಮಾಡಿಕೊಡಲಿದೆ. 2027 ರ ವೇಳೆಗೆ ಈ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತು ದೊಡ್ಡ ಮಟ್ಟದ ಸಾಧನೆ ಹಾಗೂ ಪ್ರಗತಿಯನ್ನು ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಈ ಆಧುನಿಕ ತಂತ್ರಜ್ಞಾನವು ಸಾರ್ವಜನಿಕವಾಗಿ ಮತ್ತು ವಾಣಿಜ್ಯಿಕವಾಗಿ ಸಮಾಜಕ್ಕೆ ಯಾವಾಗ ಸಂಪೂರ್ಣವಾಗಿ ಲಭ್ಯವಾಗಲಿದೆ ಎಂಬುದರ ಕುರಿತು ಇನ್ನೂ ಸ್ಪಷ್ಟತೆಯಿಲ್ಲವಾದರೂ, ಇದು ಪರಿಸರ ಸ್ನೇಹಿ ಶಕ್ತಿಯ ಹೊಸ ಯುಗಕ್ಕೆ ಮುನ್ನುಡಿ ಬರೆಯಲಿದೆ.

4. ನಾಲ್ಕನೆಯ ಅತ್ಯಂತ ಪ್ರಮುಖ ಹಾಗೂ ರಾಜಕೀಯ ರಂಗದಲ್ಲಿ ಸಂಚಲನ ಮೂಡಿಸಿರುವ ಭವಿಷ್ಯವೆಂದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ರಾಜಕೀಯ ಭವಿಷ್ಯ. 2027 ರಲ್ಲಿ ರಷ್ಯಾದ ಅಧ್ಯಕ್ಷರಾಗಿ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ. ರಷ್ಯಾದಲ್ಲಿ ನಡೆಯುವ ಇಂತಹ ಪ್ರಮುಖ ನಾಯಕತ್ವದ ಬದಲಾವಣೆಯು ಉಕ್ರೇನ್ ಯುದ್ಧದ ಭವಿಷ್ಯ, ಜಾಗತಿಕ ಶಾಂತಿ ಮಾತುಕತೆಗಳು ಹಾಗೂ ಅಂತಾರಾಷ್ಟ್ರೀಯ ರಾಜಕೀಯದ ಮೇಲೆಯೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರೆ, ಈ ನಿರ್ದಿಷ್ಟ ಭವಿಷ್ಯವಾಣಿಯನ್ನು ಯಾವುದೇ ಅಧಿಕೃತ ಅಥವಾ ನಂಬಲರ್ಹ ಮೂಲಗಳು ಇದುವರೆಗೆ ಖಚಿತಪಡಿಸಿಲ್ಲ ಎಂಬುದು ಗಮನಾರ್ಹ.

ಒಟ್ಟಾರೆಯಾಗಿ ಹೇಳುವುದಾದರೆ, 2027 ನೇ ವರ್ಷಕ್ಕೆ ಸಂಬಂಧಿಸಿದ ಬಾಬಾ ವಂಗಾ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಈ ಭವಿಷ್ಯವಾಣಿಗಳು ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಹಾಗೂ ಕುತೂಹಲಗಳನ್ನು ಒಟ್ಟಿಗೇ ಹುಟ್ಟುಹಾಕಿವೆ. ವಿಜ್ಞಾನ, ಆರ್ಥಿಕತೆ, ತಂತ್ರಜ್ಞಾನ ಮತ್ತು ಅಂತಾರಾಷ್ಟ್ರೀಯ ರಾಜಕೀಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಭಾರಿ ಬದಲಾವಣೆಗಳನ್ನು ಈ ಮುನ್ಸೂಚನೆಗಳು ಬೆಟ್ಟುಮಾಡಿ ತೋರಿಸುತ್ತಿವೆ. ಬಾಬಾ ವಂಗಾ ಅವರ ಇಂತಹ ಅನೇಕ ಭವಿಷ್ಯಗಳು ಹಿಂದೆ ನಿಜವಾಗಿದ್ದರೂ, ಇವುಗಳಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶವಿದೆ ಎಂಬುದು ಮುಂಬರುವ ದಿನಗಳಲ್ಲಿ ಕಾಲವೇ ನಿರ್ಣಯಿಸಬೇಕಿದೆ. ಇಂತಹ ಪ್ರವಾದನೆಗಳನ್ನು ಕೇವಲ ಮಾಹಿತಿಯಾಗಿ ಸ್ವೀಕರಿಸಿ, ವಾಸ್ತವಿಕ ಜಗತ್ತಿನ ವಿದ್ಯಮಾನಗಳನ್ನು ಗಮನಿಸುತ್ತಾ ಮುನ್ನಡೆಯುವುದೇ ಜಾಣತನ.

5079ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ

ಇಡೀ ಜಗತ್ತಿನ ನೂರಾರು ವರ್ಷಗಳ ಹಾಗುಹೋಗುಗಳ ಬಗೆಗೆ ಭವಿಷ್ಯ ನುಡಿದಿರುವ ಬಾಗಾ ವಂಗಾ ಪ್ರಕಾರ, 5079ಕ್ಕೆ ಜಗತ್ತು ಕೊನೆಯಾಗುತ್ತದೆ. 2028ರಲ್ಲಿ ಮಾನವರು ಶುಕ್ರವನ್ನು ಭೇಟಿ ಮಾಡುತ್ತಾರೆ, 2033ರಲ್ಲಿ ಧ್ರುವೀಯ ಮಂಜುಗಡ್ಡೆಗಳು ಕರಗಿ, ಜಾಗತಿಕವಾಗಿ ಸಮುದ್ರ ಮಟ್ಟವು ವೇಗವಾಗಿ ಏರುತ್ತೆ, ಮುಸ್ಲಿಮರು 2043 ರಲ್ಲಿ ಯುರೋಪ್ ಅನ್ನು ಆಳುತ್ತಾರೆ, 2076ರಲ್ಲಿ ಕಮ್ಯುನಿಸಂ ಪ್ರಪಂಚದಾದ್ಯಂತ ಹರಡುತ್ತದೆ, 2130ರಲ್ಲಿ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಹೊಂದುತ್ತಾರೆ, 2170ರಲ್ಲಿ ಭೂಮಿಯ ಬಹುತೇಕ ಭಾಗಗಳಲ್ಲಿ ಬರ ಉಂಟಾಗುತ್ತದೆ, 3005ರಲ್ಲಿ ಭೂಮಿಯು ಮಂಗಳದ ನಾಗರಿಕತೆಯೊಂದಿಗೆ ಯುದ್ಧದಲ್ಲಿ ತೊಡಗುತ್ತದೆ, 3797ರಲ್ಲಿ ವಾಸಯೋಗ್ಯವಲ್ಲದ ಕಾರಣ ಮಾನವರು ಭೂಮಿಯಿಂದ ಸ್ಥಳಾಂತರವಾಗುತ್ತಾರೆ ಮತ್ತು 5079 ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ ಎಂದು ಬಾಂಬಾ ವಂಗಾರ ಭವಿಷ್ಯದ ಭವಿಷ್ಯವಾಣಿಗಳಾಗಿವೆ.

ಅಂದಹಾಗೆ, ಈ ಭವಿಷ್ಯವಾಣಿಗಳು ಬಾಬಾ ವಂಗಾ ಅವರ ಅನುಯಾಯಿಗಳಿಂದ ವ್ಯಾಖ್ಯಾನಿಸಲ್ಪಟ್ಟಿವೆ ಹೊರತು ಅದಕ್ಕೆ ನಿಖರ ದಾಖಲೆಗಳು ಇಲ್ಲ. ಹೀಗಾಗಿ ಈ ಭವಿಷ್ಯವಾಣಿಗಳನ್ನು ಕೇವಲ ಮನರಂಜನೆಯಾಗಿ ಅಥವಾ ಚಿಂತನೆಗೆ ಒಳಪಡಿಸಿ ನೋಡಿ. ಯಾವುದೇ ಕಾರಣಕ್ಕೂ ವೈಜ್ಞಾನಿಕವಾಗಿ ನಂಬಬೇಡಿ, (ಏಜೆನ್ಸೀಸ್​).